ಮಂಗಳವಾರ, ಮಾರ್ಚ್ 21, 2023
29 °C
ಆರೋಪಿಗಳ ನಿವಾಸಗಳ ಶೋಧ, ಈ ವರ್ಷ 24.5 ಕೆ.ಜಿ ಗಾಂಜಾ ವಶ

ನಗರದಲ್ಲೂ ಇದೆ ಮಾದಕವಸ್ತು ಜಾಲ!

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಬೆಂಗಳೂರಿನಲ್ಲಿ ಈಚೆಗೆ ವಶಪಡಿಸಿಕೊಂಡ ಮಾದಕವಸ್ತು ಜಾಲದ ಕಬಂಧ ಬಾಹುಗಳು ನಗರಕ್ಕೂ ಚಾಚಿವೆ. ಇದರಲ್ಲಿ ಬಂಧಿತರಾದ ಪ್ರಮುಖ ಆರೋಪಿಗಳಾದ ಕೈಸರ್‌ಪಾಷಾ (41) ಮತ್ತು ಸಮೀರ್ (37) ನಗರದ ಕೆ.ಆರ್.ಪುರದವರು ಎಂಬುದು ತನಿಖೆ ವೇಳೆ ಗೊತ್ತಾಗುತ್ತಿದ್ದಂತೆ, ಇಲ್ಲಿನ ಇವರ ನಿವಾಸಗಳ ಮೇಲೆ ನಗರ ಪೊಲೀಸರು ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ.

ನಗರದಲ್ಲೂ ಈ ಜಾಲ ಸಕ್ರಿಯವಾಗಿರುವ ಕುರಿತ ಅನುಮಾನಗಳು ಮೂಡಿವೆ. ಗಾಂಜಾ ಕಳ್ಳಸಾಗಣೆ ಮ‌ತ್ತು ಮಾರಾಟ ಕುರಿತು ಹಲವು ದೂರುಗಳೂ ಈಗಾಗಲೇ ದಾಖಲಾಗಿವೆ.

ಗಾಂಜಾ ಮಾರಾಟದಂತಹ ಪ್ರಕರಣಗಳು ನಗರದಲ್ಲಿ ಸರ್ವೇಸಾಮಾನ್ಯ ಎನಿಸಿವೆ. ಕಳೆದ ವರ್ಷ 19 ಪ್ರಕರಣಗಳು ಪತ್ತೆಯಾಗಿದ್ದು, 17 ಕೆ.ಜಿ.ಯಷ್ಟು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿತ್ತು. ಈ ವರ್ಷ ಇದುವರೆಗೆ 2 ಪ್ರಕರಣಗಳನ್ನು ಪತ್ತೆ ಹಚ್ಚಿದ್ದು, ಒಟ್ಟು 24.5 ಕೆ.ಜಿ.ಯಷ್ಟು ತೂಕದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಗಾಂಜಾ ಸೇವನೆಯ ತಾಣಗಳು: ನಗರದಲ್ಲಿ ಹಲವೆಡೆ ಗಾಂಜಾ ಸೇವಿಸಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಮುಖ್ಯವಾಗಿ ಚಾಮುಂಡಿಬೆಟ್ಟದ ತಪ್ಪಲು, ಲಿಂಗಾಂಬುದಿ ಕೆರೆಯ ಆಸುಪಾಸು ಸೇರಿದಂತೆ ಹಲವೆಡೆ ಬಹಿರಂಗವಾಗಿಯೇ ಮದ್ಯ ಮತ್ತು ಗಾಂಜಾ ಸೇವನೆ ನಡೆಯುತ್ತಿದೆ ಎಂಬುದಕ್ಕೆ ಹಲವು ಆಧಾರಗಳೂ ಸಿಕ್ಕಿವೆ. 2019ರಲ್ಲಿ ಲಿಂಗಾಂಬುಧಿ ಕೆರೆಯ ಸಮೀಪ ಯುವತಿಯೊಬ್ಬರ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿನ ಆರೋಪಿಗಳ ಪೈಕಿ ಒಬ್ಬಾತ ಗಾಂಜಾ ಸೇವಿಸಿಯೇ ಈ ಕೃತ್ಯ ಎಸಗಿದ್ದ ಎಂಬುದು ತನಿಖೆ ವೇಳೆ ಬಹಿರಂಗಗೊಂಡಿತ್ತು.

ಪ್ರತ್ಯೇಕ ಠಾಣೆ: ಗಾಂಜಾ ಮಾರಾಟದಂತಹ ಪ್ರಕರಣಗಳನ್ನು ತಡೆಯಲು ಆರ್ಥಿಕ ಮತ್ತು ಮಾದಕದ್ರವ್ಯ ಅಪರಾಧ ಪೊಲೀಸ್ ಠಾಣೆ ಎಂಬ ಪ್ರತ್ಯೇಕ ಠಾಣೆಯನ್ನೇ ತೆರೆಯಲಾಗಿದೆ. ಇವರು ಮಾದಕವಸ್ತುಗಳ ಮಾರಾಟ ಜಾಲದ ಕುರಿತು ಹದ್ದಿನ ಕಣ್ಣಿಡಲಿದ್ದಾರೆ. ಸದ್ಯ, ಈ ಠಾಣೆಯಲ್ಲಿ ಇನ್‌ಸ್ಪೆಕ್ಟರ್‌ ಆಗಿ ವಿವೇಕಾನಂದ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಗಾಂಜಾ ಪೂರೈಕೆ ಹೇಗೆ?
ನಗರಕ್ಕೆ ಗಾಂಜಾ ಪೂರೈಕೆ ಹೇಗೆ ನಡೆಯುತ್ತಿದೆ ಎಂಬುದು ಪೊಲೀಸರಿಗೆ ಇಂದಿಗೂ ಯಕ್ಷಪ್ರಶ್ನೆ ಎನಿಸಿದೆ. ಗಾಂಜಾ ಮಾರಾಟಗಾರರು ವಿಚಾರಣೆ ವೇಳೆ ನೀಡುವ ಹೇಳಿಕೆಗಳೂ ಅಸ್ಪಷ್ಟದಿಂದ ಕೂಡಿರುತ್ತವೆ. ಎಲ್ಲಿಂದ ಗಾಂಜಾ ಬರುತ್ತಿದೆ ಎಂಬ ಮಾಹಿತಿ ಬಹಿರಂಗವಾಗದಂತೆ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಈ ಜಾಲ ಕಾರ್ಯನಿರ್ವಹಿಸುತ್ತಿದೆ.

ಕೇರಳದಿಂದ ಪೂರೈಕೆಯಾಗುತ್ತಿದೆ ಎಂಬ ವಾದವೊಂದಿದೆ. ಹುಣಸೂರು, ಪಿರಿಯಾಪಟ್ಟಣ ಹಾಗೂ ಚಾಮರಾಜನಗರದ ಹನೂರು ತಾಲ್ಲೂಕಿನಲ್ಲಿ ಹೆಚ್ಚು ಗಾಂಜಾ ಸೊಪ್ಪನ್ನು ಬೆಳೆಯಲಾಗುತ್ತಿದೆ. ಶುಂಠಿ ಬೇಸಾಯಕ್ಕೆ ಎಂದು ಕೇರಳದಿಂದ ಬಂದ ಕೆಲವರು ಇಲ್ಲಿ ಭೂಮಿಯನ್ನು ಗುತ್ತಿಗೆಗೆ ಪಡೆದು ಯಾರೂ ಒಳಬಾರದಂತೆ ತಂತಿಬೇಲಿ ಹಾಕಿ, ಒಳಗೆ ಗಾಂಜಾ ಬೆಳೆಯುತ್ತಾರೆ ಎಂಬ ಮಾತೂ ಇದೆ.

ನಗರದಲ್ಲಿದೆ ‘ಖಾಟ್‌’ ಘಾಟು!
ಗಾಂಜಾಕ್ಕಿಂತಲೂ ಹೆಚ್ಚು ಮೌಲ್ಯದ ‘ಖಾಟ್’ ಎಂದ ಮಾದಕವಸ್ತುವನ್ನು 2018ರ ಆಗಸ್ಟ್ 1ರಂದು ವಿದ್ಯಾರ್ಥಿ ವೀಸಾದಡಿ ಯೆಮನ್ ದೇಶದಿಂದ ಇಲ್ಲಿಗೆ ಬಂದು ನೆಲೆಸಿದ್ದ ಹಮ್ಜಾ ಅಬ್ದೊ ಖಾಸಿಂ ಅಬ್ದುಲ್ಲಾ (23) ಎಂಬಾತನಿಂದ ವಶಪಡಿಸಿಕೊಂಡು ಬಂಧಿಸಲಾಗಿತ್ತು. ಈತನಿಂದ 7 ಕೆ.ಜಿ ತೂಕದ ಖಾಟ್‌ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕಾಳಸಂತೆಯಲ್ಲಿ ಇದರ ಮೌಲ್ಯ ಅಂದಾಜು ₹18 ಲಕ್ಷ ಎಂದು ಅಂದಾಜು ಮಾಡಲಾಗಿತ್ತು.

ಮುಂಬೈನಲ್ಲಿ ‘ಡೈರೆಕ್ಟರೇಟ್‌ ರೆವಿನ್ಯು ಆಫ್ ಇಂಟಿಲಿಜೆನ್ಸ್’ ವಿಭಾಗದ ಅಧಿಕಾರಿಗಳು ಅಂದಾಜು ₹3.5 ಕೋಟಿ ಬೆಲೆ ಬಾಳುವ, 132 ಕೆ.ಜಿ.ಯಷ್ಟು ‘ಖಾಟ್‌’ ಅನ್ನು ವಶಪಡಿಸಿಕೊಂಡ ಹತ್ತೇ ದಿನಕ್ಕೆ ಪೊಲೀಸರು ನಗರದಲ್ಲಿ ಇದೇ ಮಾದರಿಯ ಮಾದಕವಸ್ತುವನ್ನು ವಶಪಡಿಸಿಕೊಂಡಿದ್ದು ವಿಶೇಷ ಎನಿಸಿತ್ತು. ‘ಪಾರ್ಸಲ್‌’ ಮೂಲಕವೇ ಇದರ ಕಳ್ಳಸಾಗಣೆ ನಡೆಯುತ್ತಿತ್ತು ಎಂಬ ಅಂಶ ತನಿಖೆ ವೇಳೆ ಗೊತ್ತಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು