ಮಾದಕವಸ್ತು ಸಾಗಣೆ; ವಿದೇಶಿ ವಿದ್ಯಾರ್ಥಿ ಬಂಧನ

7
ಪಾರ್ಸಲ್‌ ಮೂಲಕ ಮಾದಕವಸ್ತು ಸಾಗಾಣಿಕೆಗೆ ಯತ್ನ

ಮಾದಕವಸ್ತು ಸಾಗಣೆ; ವಿದೇಶಿ ವಿದ್ಯಾರ್ಥಿ ಬಂಧನ

Published:
Updated:

ಮೈಸೂರು: ಅಂತರರಾಷ್ಟ್ರೀಯಮಟ್ಟದಲ್ಲಿ ಬಳಸುವಂಥ ಅಪರೂಪದ ‘ಖಾಟ್’ ಎಂಬ ಮಾದಕವಸ್ತುವಿನ ಕಳ್ಳ ಸಾಗಾಣಿಕೆಯನ್ನು ಪತ್ತೆ ಹಚ್ಚಿದ ಪೊಲೀಸರು ಯೆಮನ್ ದೇಶದ ಹಮ್ಜಾ ಅಬ್ದೊ ಖಾಸಿಂ ಅಬ್ದುಲ್ಲಾ (23) ಎಂಬಾತನನ್ನು ಬಂಧಿಸಿದ್ದಾರೆ. ಈತನಿಂದ 7 ಕೆ.ಜಿ. 592 ಗ್ರಾಂ ತೂಕದ ಖಾಟ್ ಸೊಪ್ಪನ್ನು ವಶಪಡಿಸಿಕೊಂಡಿದ್ದಾರೆ.

ಪತ್ತೆಯಾಗಿದ್ದು ಹೇಗೆ?
ಮೈಸೂರಿನ ಅರೆಬಿಕ್ ಕಾಲೇಜಿನ ವಿದ್ಯಾರ್ಥಿಯಾದ ಹಮ್ಜಾ ಅಬ್ದೊ ಖಾಸಿಂ ಅಬ್ದುಲ್ಲಾ ಒಂದು ಬಾಕ್ಸ್‌ನಲ್ಲಿ ಮಾದಕವಸ್ತು ತುಂಬಿ ಶನಿವಾರ ಕೆಎಸ್‌ಆರ್‌ಟಿಸಿ ಗ್ರಾಮಾಂತರ ಬಸ್‌ನಿಲ್ದಾಣದ ಪೆಟ್ರೋಲ್ ಬಂಕ್ ಬಳಿಯ ಪಾರ್ಸೆಲ್ ಕಚೇರಿಗೆ ಹೋಗಿದ್ದಾನೆ. ಮುಂಬೈನ ಯೂಸಫ್‌ ಎಂಬಾತನ ವಿಳಾಸಕ್ಕೆ ಕಳುಹಿಸಲು ಹೇಳಿದ್ದಾನೆ. ಈ ವೇಳೆ ಪಾರ್ಸಲ್ ಕಚೇರಿಯವರು ರಟ್ಟಿನ ಪೆಟ್ಟಿಗೆಯಲ್ಲಿ ಇರುವ ವಸ್ತು ಹಾಗೂ ಅದಕ್ಕೆ ಸಂಬಂಧಿಸಿದ ಬಿಲ್ ಕೇಳಿದ್ದಾರೆ. ಇದಕ್ಕೆ ಪ್ರತಿರೋಧ ಒಡ್ಡಿದ ಆರೋಪಿ ‘ಬಿಲ್ ಇಲ್ಲ, ಎಷ್ಟು ಬೇಕಾದರೂ ಹಣ ಕೊಡುತ್ತೇನೆ. ಪಾರ್ಸಲ್ ಮಾಡಿ’ ಎಂದು ಜಗಳಕ್ಕೆ ಬಿದ್ದಿದ್ದಾನೆ. ನಡೆಯುತ್ತಿದ್ದ ಜಗಳ ಗಮನಿಸಿ ಗಸ್ತಿನಲ್ಲಿದ್ದ ಲಷ್ಕರ್ ಠಾಣೆ ಪೊಲೀಸರು ಪಾರ್ಸಲ್ ಕಚೇರಿಯತ್ತ ಬರುತ್ತಿದ್ದಂತೆ ಆರೋಪಿ ಬಾಕ್ಸ್‌ನೊಂದಿಗೆ ಓಡಿದ್ದಾನೆ. ಅನುಮಾನಗೊಂಡ ಪೊಲೀಸರು ಆತನನ್ನು ಬೆನ್ನತ್ತಿ ಹಿಡಿದಾಗ ಮಾದಕವಸ್ತು ಪತ್ತೆಯಾಗಿದೆ.

ಆರೋಪಿಯನ್ನು ವಿಚಾರಣೆ ನಡೆಸಿದಾಗ ಇಬ್ರಾಹಿಂ ಎಂಬಾತ ಈ ಬಾಕ್ಸ್‌ ಪಾರ್ಸೆಲ್ ಮಾಡುವಂತೆ ನೀಡಿರುವುದಾಗಿ ತಿಳಿಸಿದ್ದು, ಈ ಮಾದಕವಸ್ತುವನ್ನು ಹೆಚ್ಚಾಗಿ ಯೆಮನ್ ದೇಶದಲ್ಲಿ ಬಳಸಲಾಗುತ್ತದೆ ಎಂದು ಹೇಳಿದ್ದಾನೆ. ಇದೀಗ ಪೊಲೀಸರು ಇಬ್ರಾಹಿಂನ ಪತ್ತೆಗೆ ಬಲೆ ಬೀಸಿದ್ದಾರೆ. ಈ ಪ್ರಕರಣಕ್ಕೆ ಅಂತರರಾಷ್ಟ್ರೀಯ ಸಂಬಂಧ ಇರುವ ಕುರಿತು ತನಿಖೆ ಆರಂಭಿಸಿದ್ದಾರೆ. ಪ್ರಕರಣ ಲಷ್ಕರ್ ಠಾಣೆಯಲ್ಲಿ ದಾಖಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !