ಸೋಮವಾರ, ನವೆಂಬರ್ 18, 2019
20 °C

ಬಿಜೆಪಿ ವಿರುದ್ಧ ಡಿಎಸ್‌ಎಸ್‌ ಪ್ರತಿಭಟನೆ

Published:
Updated:
Prajavani

ಮೈಸೂರು: ಶಾಲಾ ಪಠ್ಯದಿಂದ ಟಿಪ್ಪು ಸುಲ್ತಾನ್ ಕುರಿತ ಅಧ್ಯಾಯ ತೆಗೆಯಲು ಮುಂದಾಗಿರುವ ರಾಜ್ಯ ಬಿಜೆಪಿ ಸರ್ಕಾರದ ನಿಲುವು ಖಂಡಿಸಿ, ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಶನಿವಾರ ನಗರದ ಪುರಭವನದ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಪ್ರತಿಭಟಿಸಿದರು.

ಪುರಭವನದ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿ ಆಕ್ರೋಶ ವ್ಯಕ್ತಪಡಿಸಿದರು.

ಟಿಪ್ಪು ತನ್ನ ಜೀವಿತಾವಧಿಯ 48 ವರ್ಷಗಳಲ್ಲಿ 9 ವರ್ಷಗಳನ್ನು ಯುದ್ಧದಲ್ಲಿಯೇ ಕಳೆದಿದ್ದಾನೆ. 24 ವರ್ಷಗಳ ತನ್ನ ಆಡಳಿತಾವಧಿಯಲ್ಲಿ ಜನಪರ ಕಲ್ಯಾಣ ಕಾರ್ಯಗಳನ್ನು ಜಾರಿಗೊಳಿಸಿರುವುದನ್ನು ಇತಿಹಾಸದ ಪುಟಗಳಲ್ಲಿ ಕಾಣಬಹುದು. ಆದರೆ ಪೂರ್ವಾಗ್ರಹಪೀಡಿತ ಸನಾತನವಾದಿಗಳ ಹಾಗೂ ಸಂಘ ಪರಿವಾರದ ಕಪಿಮುಷ್ಠಿಗೆ ಸಿಲುಕಿರುವ ರಾಜ್ಯದ ಬಿಜೆಪಿ ಸರ್ಕಾರ ಅನಾವಶ್ಯಕವಾಗಿ ಟಿಪ್ಪುವನ್ನು ದ್ವೇಷಿಸುತ್ತಿದೆ ಎಂದು ಕಿಡಿಕಾರಿದರು.

ಬಿಜೆಪಿ ಸರ್ಕಾರ ಒಂದು ಸಮುದಾಯವನ್ನು ಸಮಾಜದಿಂದ ದೂರವಿಡುವ, ಖಳರನ್ನಾಗಿ ಚಿತ್ರಿಸುವ ಹುನ್ನಾರ ಹೊಂದಿರುವುದು ಇದರಿಂದ ಸ್ಪಷ್ಟವಾಗಿ ಗೋಚರಿಸುತ್ತದೆ. ರಾಷ್ಟ್ರೀಯ ಪಠ್ಯಪುಸ್ತಕದ ನೀತಿ ನಿಯಮಗಳಿಗನುಗುಣವಾಗಿ ಇದ್ದಂತಹ ಟಿಪ್ಪುವಿನ ಪಾಠವನ್ನು ಪಠ್ಯದಿಂದ ತೆಗೆಯಲು ಮುಂದಾಗಿರುವುದು ಖಂಡನೀಯ. ಇದು ಒಂದು ಸಮುದಾಯವನ್ನು ಅವಮಾನಿಸುವ ಕ್ರಮ. ನೈಜ ಇತಿಹಾಸಕ್ಕೆ ದ್ರೋಹ ಎಸಗುವ ಹುನ್ನಾರ. ಯಾವುದೇ ಕಾರಣಕ್ಕೂ ಪಠ್ಯದಿಂದ ಟಿಪ್ಪು ಪಾಠ ತೆಗೆಯಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಚೋರನಹಳ್ಳಿ ಶಿವಣ್ಣ, ಆಲ್ತೂರು ಶಿವರಾಜು, ಗೋವಿಂದರಾಜು, ಅರಸಿನಕೆರೆ ಶಿವರಾಜು, ಮೈಸೂರು ಸೋಮನಾಯ್ಕ್, ನಂಜನಗೂಡು ಶಿವಮೂರ್ತಿ, ಗೊದ್ದನಪುರ ಮಾದೇಶ, ರಹೀಂ, ದೊರೆಸ್ವಾಮಿ, ಮಹೇಶ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರತಿಕ್ರಿಯಿಸಿ (+)