ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಅ.2ರಂದು ‘ಆರ್ಥಿಕ ಸ್ಪಂದನ’

ಸಚಿವ ಸೋಮಶೇಖರ್‌ ಹೇಳಿಕೆ, ಛಾಯಾಗ್ರಾಹಕರು, ವಿಡಿಯೊಗ್ರಾಫರ್‌ಗಳಿಗೆ ಸನ್ಮಾನ
Last Updated 20 ಸೆಪ್ಟೆಂಬರ್ 2020, 2:26 IST
ಅಕ್ಷರ ಗಾತ್ರ

ಮೈಸೂರು: ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಸಾಲ ಸೌಲಭ್ಯ ನೀಡುವ ಮೈಸೂರು ವಲಯ ಮಟ್ಟದ ‘ಆರ್ಥಿಕ ಸ್ಪಂದನ’ ಕಾರ್ಯಕ್ರಮವನ್ನು ಸಹಕಾರ ಇಲಾಖೆ ವತಿಯಿಂದ ಅ.2ರಂದು ಮೈಸೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಪತ್ರಿಕಾ ಛಾಯಾಗ್ರಾಹಕರು ಹಾಗೂ ವಿಡಿಯೊಗ್ರಾಫರ್‌ಗಳಿಗೆ ಬಿಜೆಪಿ ಮಾಧ್ಯಮ ಘಟಕ ವತಿಯಿಂದ ಶನಿವಾರ ಇಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೇಂದ್ರ ಸರ್ಕಾರದ ‘ಆತ್ಮನಿರ್ಭರ್’‌ ಯೋಜನೆಯ ನೆರವಿನೊಂದಿಗೆ ಈ ಕಾರ್ಯಕ್ರಮ ಜಾರಿ ಮಾಡಲಾಗುತ್ತಿದೆ. ಕೋವಿಡ್‌–19ನಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರು, ಸಣ್ಣ ಹಾಗೂ ಮಧ್ಯಮ ಉದ್ದಿಮೆದಾರರಿಗೆ ಆರ್ಥಿಕ ಸೌಲಭ್ಯಗಳನ್ನು ತಲುಪಿಸಲಾಗುವುದು. ಸಹಕಾರ ಇಲಾಖೆಯ ಮೂಲಕ ಈ ಯೋಜನೆಯನ್ನು ಕಾರ್ಯಗತಗೊಳಿಸ ಲಾಗುತ್ತಿದೆ. ಕಳೆದ ಮಂಗಳವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮವನ್ನು ನಾಲ್ಕು ವಲಯಗಳಲ್ಲಿ ಹಮ್ಮಿಕೊಳ್ಳ ಲಾಗುತ್ತಿದೆ ಎಂದರು.

ಹೈನುಗಾರರು ಹಾಗೂ ಮೀನುಗಾರರಿಗೆ ಶೂನ್ಯ ಬಡ್ಡಿದರದಲ್ಲಿ ₹2 ಲಕ್ಷದವರೆಗೆ ಸಾಲ ನೀಡಲಾಗುತ್ತಿದೆ. ರೈತರಿಗೆ ₹15,300 ಕೋಟಿ ಬೆಳೆ ಸಾಲ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ 12.46 ಲಕ್ಷ ರೈತರಿಗೆ ₹8,079 ಕೋಟಿ ಬೆಳೆ ಸಾಲ ನೀಡಲಾಗಿದೆ. ಇದರಲ್ಲಿ ಬೆಳೆ ಸಾಲ ಹಾಗೂ ಮಧ್ಯಮಾವಧಿ ಸಾಲಗಳೂ ಸೇರಿವೆ ಎಂದು ತಿಳಿಸಿದರು.

ಕೋವಿಡ್–19 ಸಮಯದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಛಾಯಾಗ್ರಾಹಕರು, ವಿಡಿಯೊಗ್ರಾಫರ್‌ಗಳು ತಮ್ಮ ಚಿತ್ರಗಳ ಮೂಲಕವೇ ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.

ಶಾಸಕ ಎಸ್‌.ಎ.ರಾಮದಾಸ್‌ ಮಾತನಾಡಿ, ‘ಛಾಯಾಗ್ರಾಹಕರು ಜೀವನದ ಸಾರ ತಿಳಿಸುವವರು. ಫೋಟೋಗೆ ಜೀವ ತುಂಬುವ ಕೆಲಸ ಮಾಡುವವರು. ಎಲೆಕ್ಟ್ರಾನಿಕ್ ಮಾಧ್ಯಮ ಕೂಡ ತನ್ನದೇ ಆದ ಶಕ್ತಿ ಹೊಂದಿದೆ. ಯಾರು ಯಾರನ್ನು ಸೆರೆ ಹಿಡಿಯುತ್ತಾರೋ ಗೊತ್ತಿಲ್ಲ. ಯಾವಾಗ ಅದನ್ನು ಹೊರಗೆ ಬಿಡುತ್ತಾರೋ ತಿಳಿಯದು’ ಎಂದರು.

ಕೋವಿಡ್‌–19 ಸಂದರ್ಭದಲ್ಲಿ ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಪ್ರತಿಯೊಂದು ಪ್ರದೇಶದಲ್ಲಿ ಸಂಚರಿಸಿ, ಕೊರೊನಾ ವೈರಾಣು ನಿಯಂತ್ರಣಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ 15 ಮಂದಿ ಛಾಯಾಗ್ರಾಹಕರು ಹಾಗೂ 26 ಮಂದಿ ವಿಡಿಯೊಗ್ರಾಫರ್‌ಗಳನ್ನು ಸನ್ಮಾನಿಸಲಾಯಿತು. ಪತ್ರಕರ್ತರನ್ನೂ ಕೊರೊನಾ ವಾರಿಯರ್‌ ಎಂದು ಪರಿಗಣಿಸಿ, ಕೋವಿಡ್‌ನಿಂದ ಆಸ್ಪತ್ರೆಗೆ ದಾಖಲಾಗುವ ಪತ್ರಕರ್ತರ ವೈದ್ಯಕೀಯ ವೆಚ್ಚವನ್ನು ಸರ್ಕಾರದ ವತಿಯಿಂದಲೇ ಭರಿಸಬೇಕೆಂದು ಜಿಲ್ಲಾ ಪತ್ರಕರ್ತ ಸಂಘವು ಸಚಿವರಿಗೆ ಮನವಿ ಪತ್ರ ನೀಡಿತು.

ಶಾಸಕ ಎಲ್‌.ನಾಗೇಂದ್ರ, ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್‌, ಬಿಜೆಪಿ ನಗರ ಘಟಕದ ಅಧ್ಯಕ್ಷ ಶ್ರೀವತ್ಸ, ಗ್ರಾಮಾಂತರ ಅಧ್ಯಕ್ಷೆ ಮಂಗಳಾ ಸೋಮಶೇಖರ್‌, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಮಾಧ್ಯಮ ವಕ್ತಾರ ಮೋಹನ್, ಪ್ರಧಾನ ಕಾರ್ಯದರ್ಶಿ ಗಿರಿಧರ್, ಸೋಮಸುಂದರ್, ವಾಣೀಶ್ ಕುಮಾರ್, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಪ್ರಭಾಕರ್‌ ಸಿಂಧ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT