ಬುಧವಾರ, ಸೆಪ್ಟೆಂಬರ್ 29, 2021
21 °C
ದೂರದಿಂದ ಬಂದು ದಣಿದ ಆನೆಗಳಿಗೆ ಪೂಜೆ, ಮಜ್ಜನ

ಮೈಸೂರು ದಸರಾ: ಅರಣ್ಯ ಭವನದಲ್ಲಿ ಗಜಪಡೆ ವಿಶ್ರಾಂತಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕಾಡಿನಿಂದ ಬಂದು ದಣಿದಿದ್ದ ಆನೆಗಳು ಅಶೋಕಪುರಂ ಅರಣ್ಯ ಭವನದಲ್ಲಿ ಮಂಗಳವಾರವಿಡೀ ವಿಶ್ರಾಂತಿ ಪಡೆದವು. ಗಜಪಡೆಗೆ ಬೆಳಿಗ್ಗೆಯೇ ಸ್ನಾನ ಮಾಡಿಸಿ, ಪೂಜೆ ಸಲ್ಲಿಸಲಾಯಿತು. ಬಳಿಕ ಆಹಾರ ತಿನ್ನಿಸಲಾಯಿತು.

ದಸರಾ ಜಂಬೂಸವಾರಿಯಲ್ಲಿ ಭಾಗವಹಿಸಲಿರುವ ಅಭಿಮನ್ಯು ನೇತೃತ್ವದ ಎಂಟೂ ಆನೆಗಳನ್ನು ಇಲ್ಲಿನ ಆವರಣದಲ್ಲಿ ಇರಿಸಲಾಗಿದೆ. ಇಷ್ಟು ದಿನ ಕಾಡಿನಲ್ಲಿ ಅಡ್ಡಾಡುತ್ತಿದ್ದ ಆನೆಗಳು ನಾಡಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕಿದ್ದು ಮಾವುತರು, ಕಾವಾಡಿಗರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ವಿಶೇಷ ಕಾಳಜಿ ವಹಿಸಿದ್ದಾರೆ.

ಸ್ನಾನ ಮಾಡಿ ದಣಿವಾರಿಸಿಕೊಂಡ ಆನೆಗಳಿಗೆ ಅರ್ಚಕ ಪ್ರಹ್ಲಾದ ರಾವ್‌ ‍ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದ ಡಿಸಿಎಫ್‌ (ವನ್ಯಜೀವಿ) ವಿ.ಕರಿಕಾಳನ್‌ ಅವರು ಅಭಿಮನ್ಯು ಆನೆಗೆ ತಿಲಕವಿಟ್ಟರು.

‘ಎಂಟೂ ಆನೆಗಳು ಆರೋಗ್ಯವಾಗಿ ದ್ದು, ವೈದ್ಯರು ನಿಗಾ ಇರಿಸಿದ್ದಾರೆ. ಸದ್ಯಕ್ಕೆ ಸೊಪ್ಪು, ಭತ್ತದ ಹುಲ್ಲು ತಿನ್ನಿಸುತ್ತಿದ್ದು, ಅರಮನೆ ಆವರಣಕ್ಕೆ ಹೋಗಿ ಒಂದೆರಡು ದಿನ ಕಳೆದ ಮೇಲೆ ಮೇಲೆ ವಿಶೇಷ ಆಹಾರ ನೀಡುತ್ತೇವೆ’ ಎಂದು ಕರಿಕಾಳನ್‌ ತಿಳಿಸಿದರು.

ಪ್ರಮುಖ ಆಕರ್ಷಣೆಯಾಗಿರುವ ಅಭಿಮನ್ಯು ಆನೆಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. ಅಂಬಾರಿ ಹೊರಲಿರುವ ಅಭಿಮನ್ಯು ಹಾಗೂ ಮೊದಲ ಬಾರಿ ಬಂದಿರುವ ಅಶ್ವತ್ಥಾಮ ಆನೆಯನ್ನು ಪ್ರತ್ಯೇಕ ಸ್ಥಳದಲ್ಲಿ ಕಟ್ಟಿ ಹಾಕಲಾಗಿದೆ. ಇನ್ನುಳಿದ ಆನೆಗಳನ್ನು ಅಕ್ಕಪಕ್ಕದಲ್ಲೇ ಇರಿಸಲಾಗಿದೆ. ಮಾವುತರು ಹಾಗೂ ಕಾವಾಡಿಗರು ಆನೆಗಳ ಮುಂದೆಯೇ ಚಾಪೆ ಹಾಕಿಕೊಂಡು ಕುಳಿತು ವಿಶ್ರಾಂತಿ ಪಡೆದರು. ಇನ್ನೂ ಒಂದು ದಿನ ಆನೆಗಳನ್ನು ಇಲ್ಲಿಯೇ ಇರಿಸಲಾಗುತ್ತದೆ.

ಸುತ್ತಲಿನ ಪ್ರದೇಶದ ಜನರು ತಮ್ಮ ಮಕ್ಕಳೊಂದಿಗೆ ಬಂದು ಗಜಪಡೆ ಕಣ್ತುಂಬಿಕೊಂಡರು. ತುಸು ದೂರದಲ್ಲಿ ನಿಂತು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಹತ್ತಿರ ಹೋಗಲು ಪ್ರಯತ್ನಿಸಿದವರನ್ನು ಸಿಬ್ಬಂದಿ ಬೆದರಿಸಿ ಕಳುಹಿಸುತ್ತಿದ್ದ ದೃಶ್ಯ ಕಂಡುಬಂತು.

ಅರಮನೆಯಲ್ಲಿ ಸಿದ್ಧತೆ: ಇತ್ತ ಅರಮನೆ ಆವರಣದಲ್ಲಿ ಮಾವುತರು, ಕಾವಾಡಿಗರು, ಸಹಾಯಕರು ಹಾಗೂ ಆನೆಗಳ ವಾಸ್ತವ್ಯಕ್ಕೆ ಶೆಡ್‌ ನಿರ್ಮಾಣ ಕಾರ್ಯ ಮುಂದುವರಿದೆ.

ಗಜಪಡೆ ಜೊತೆ ಒಟ್ಟು 38 ಮಂದಿ ಬಂದಿದ್ದಾರೆ. ಅವರಿಗೆ ಎರಡು ಕಡೆ ಹಾಗೂ ಗಜಪಡೆಗೆ ಮೂರು ಕಡೆ ತಾತ್ಕಾಲಿಕ ಶೆಡ್‌ ನಿರ್ಮಿಸಲಾಗುತ್ತಿದೆ. ಆನೆಗಳು ಬಂದ ಮೇಲೆ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿ ನಿಗಾ ಇಡಲಾಗುತ್ತದೆ.

ವಿಮೆ: ಗಜಪಡೆ ಹಾಗೂ ಅವುಗಳ ಉಸ್ತುವಾರಿ ನೋಡಿಕೊಳ್ಳುವ ಮಾವುತ, ಕಾವಾಡಿಗರಿಗೆ ಸರ್ಕಾರ ವಿಮೆ ಮಾಡಿಸಿದೆ. ಗಂಡಾನೆಗಳಿಗೆ ತಲಾ ₹ 3.5 ಲಕ್ಷ, ಹೆಣ್ಣಾನೆಗಳಿಗೆ ₹ 2 ಲಕ್ಷ ಹಾಗೂ ಸಿಬ್ಬಂದಿಗೆ ತಲಾ ₹ 1 ಲಕ್ಷ ವಿಮೆ ಇರಲಿದೆ. ಈ ವಿಮೆ ಅವಧಿಯು ಅ. 25ರವರೆಗೆ ಚಾಲ್ತಿಯಲ್ಲಿ ಇರುತ್ತದೆ.

ನಾಳೆ ಅರಮನೆ ಪ್ರವೇಶ: ಅಶೋಕಪುರಂನ ಅರಣ್ಯ ಭವನದಲ್ಲಿ ಬೀಡುಬಿಟ್ಟಿರುವ ಎಂಟು ಆನೆಗಳು ಗುರುವಾರ (ಸೆ.16) ಬೆಳಿಗ್ಗೆ ಅರಮನೆ ಆವರಣ ಪ್ರವೇಶಿಸಲಿವೆ.

‘ಅಂದು ಬೆಳಿಗ್ಗೆ 5.45ಕ್ಕೆ ಅರಣ್ಯ ಇಲಾಖೆ ವತಿಯಿಂದ ಪೂಜೆ ಸಲ್ಲಿಸಲಾಗುತ್ತದೆ. ನಂತರ ಆನೆಗಳನ್ನು ನಡಿಗೆ ಮೂಲಕ ಅರಮನೆ ಆವರಣಕ್ಕೆ ಕರೆದೊಯ್ಯಲಾಗುವುದು. ಬೆಳಿಗ್ಗೆ 9.11ರೊಳಗೆ ತಲುಪಬೇಕು’ ಎಂದು ಡಿಸಿಎಫ್‌ (ವನ್ಯಜೀವಿ) ವಿ.ಕರಿಕಾಳನ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು