ಗುರುವಾರ , ಜನವರಿ 28, 2021
24 °C
ಜಿ.ಎಸ್.ಭಟ್ಟ ಅವರ ‘ಮೋದಿ ಎಂಬ ವಿಸ್ಮಯ’ ಕೃತಿ ಬಿಡುಗಡೆ

ಸಮಾನ ನಾಗರಿಕ ಸಂಹಿತೆ ಮುಸ್ಲಿಂ ವಿರೋಧಿ ಅಲ್ಲ– ಬಿ.ವಿ.ವಸಂತಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸಮಾನ ನಾಗರಿಕ ಸಂಹಿತೆ ಮುಸ್ಲಿಂ ವಿರೋಧಿ ಅಲ್ಲ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್ ತಿಳಿಸಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಎಚ್.ವಿ.ರಾಜೀವ್ ಸ್ನೇಹ ಬಳಗ, ಇನ್ನೋವೇಟಿವ್, ಸೌಮ್ಯ ಪ್ರಕಾಶನ, ತುಳುಶಿವಳ್ಳಿ ಮಾಧ್ವ ಬ್ರಾಹ್ಮಣ ಸೌಹಾರ್ದ ಸಂಘದ ವತಿಯಿಂದ ಇಲ್ಲಿನ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿ.ಎಸ್.ಭಟ್ಟ ಅವರ ‘ಮೋದಿ ಎಂಬ ವಿಸ್ಮಯ’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಎಲ್ಲ ಧರ್ಮದ, ಜಾತಿಯ, ವರ್ಗದ ಜನರು ಒಂದಾಗಿ ಬದುಕುವುದಕ್ಕೆ ರೂಪಿಸಲಾಗುತ್ತಿರುವ ಸಂಹಿತೆ ಇದಾಗಿದೆ. ತ್ರಿವಳಿ ತಲಾಖ್ ರದ್ದುಗೊಳಿಸಿದ್ದನ್ನೂ ಮುಸ್ಲಿಂ ವಿರೋಧಿ ಕ್ರಮ ಎಂದು ಬಿಂಬಿಸಲಾಯಿತು. ಸಮಾನ ನಾಗರಿಕ ಸಂಹಿತೆ ಕುರಿತು ಇದೇ ಬಗೆಯ ಅಪಪ್ರಚಾರ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಆರ್‌ಎಸ್‌ಎಸ್‌ ಎಂಬ ಗುರುವಿನ ಕೆಳಗೆ ರೂಪುಗೊಂಡ ವಿಸ್ಮಯವೇ ನರೇಂದ್ರ ಮೋದಿ. ‘ವೀಸಾ’ವನ್ನು ನಿರಾಕರಿಸಿದ ಅಮೆರಿಕ ನಂತರ ರತ್ನಗಂಬಳಿಯನ್ನು ಇವರಿಗೆ ಹಾಸಿದ್ದನ್ನು ನೋಡಿದರೆ ನಿಜಕ್ಕೂ ವಿಸ್ಮಯ ಎನಿಸುತ್ತದೆ ಎಂದರು.

ಭಾರತ ಸಂಕಟದಲ್ಲಿ ಸಿಲುಕಿದಾಗಲೆಲ್ಲ ಇಂತಹ ವಿಸ್ಮಯಗಳು ಜರುಗುತ್ತಿರುತ್ತವೆ. ನಂದರನ್ನು ಸೋಲಿಸಲು ಬುಡಕಟ್ಟು ಸಮುದಾಯದ ಚಂದ್ರಗುಪ್ತ ಮೌರ್ಯರನ್ನು ಚಾಣಕ್ಯ ರೂಪಿಸಿದಂದಿನಿಂದ ಹಿಡಿದು ಇಲ್ಲಿಯವರೆಗೂ ಇಂತಹ ವಿಸ್ಮಯಗಳು ನಡೆಯುತ್ತಿವೆ ಎಂದು ಹೇಳಿದರು.

‘ಗೋದ್ರಾ ಘಟನೆಯ ನಂತರ ಇಲ್ಲಿಯವರೆಗೂ ಮೋದಿ ಅವರ ಮೇಲೆ ಆತ್ಮಸ್ಥೈರ್ಯವನ್ನೇ ಉಡುಗಿಸುವಂತಹ ಪರೋಕ್ಷ ದಾಳಿಗಳು ನಡೆದಿವೆ. ಇದನ್ನೆಲ್ಲ ತಾಳಿಕೊಂಡಿರುವ ಅವರು ನಿಜಕ್ಕೂ ನಮ್ಮ ಕಾಲದ ಉಕ್ಕಿನ ಮನುಷ್ಯ’ ಎಂದು ಶ್ಲಾಘಿಸಿದರು.

ಭಾರತವನ್ನು ಪಾಕಿಸ್ತಾನಕ್ಕೋ, ಬಾಂಗ್ಲಾದೇಶಕ್ಕೋ ಗಿರವಿ ಇಡುವಂತಹ ನಾಯಕತ್ವ ಬೇಕೋ ಅಥವಾ ಪಾಕಿಸ್ತಾನ, ಬಾಂಗ್ಲಾವನ್ನೂ ಭಾರತವನ್ನಾಗಿಸುವ ನಾಯಕತ್ವ ಬೇಕೋ ಎಂದು ಅವರು ಪ್ರಶ್ನಿಸಿದರು.

ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಚಿಂತಕ ಡಾ.ವಿ.ರಂಗನಾಥ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಚಂದ್ರಶೇಖರ್, ತುಳುಶಿವಳ್ಳಿ ಮಾಧ್ವಬ್ರಾಹ್ಮಣ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷ ಜಗದೀಶ್‌ಹೆಬ್ಬಾರ್‌ ಕಾರಿಜ, ಲೇಖಕ ಜಿ.ಎಸ್.ಭಟ್ಟ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.