ಭಾನುವಾರ, ಸೆಪ್ಟೆಂಬರ್ 15, 2019
26 °C

ಜನರು ಸತ್ತ ಮೇಲೆ ಪರಿಹಾರ ಕೊಡ್ತೀರಾ: ಖಂಡ್ರೆ ವಾಗ್ದಾಳಿ

Published:
Updated:
Prajavani

ಮೈಸೂರು: ‘ನೆರೆ ಸಂತ್ರಸ್ತರು ಸಂಕಷ್ಟಕ್ಕೆ ಸಿಲುಕಿ ತಿಂಗಳು ಗತಿಸಿತು. ಇದುವರೆಗೂ ನಯಾಪೈಸೆ ಪರಿಹಾರವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ. ಜನರು ಸತ್ತ ಮೇಲೆ ಪರಿಹಾರ ಕೊಡ್ತೀರಾ?’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

‘ಕೇಂದ್ರ ಸರ್ಕಾರವು ಕರ್ನಾಟಕವನ್ನು ಸಂಪೂರ್ಣ ಕಡೆಗಣಿಸಿದೆ. ಈ ಹಿಂದೆ ಮೈತ್ರಿ ಸರ್ಕಾರ ಇತ್ತು ಎಂದು ಕೊಡಗಿನ ಸಂಕಷ್ಟಕ್ಕೆ ಸ್ಪಂದಿಸಲಿಲ್ಲ. ಇದೀಗ ನಿಮ್ಮದೇ ಸರ್ಕಾರವಿದೆ. 25 ಸಂಸದರಿದ್ದಾರೆ. ಈಗ ನಿಮಗೆ ಏನಾಗಿದೆ. ದ್ವೇಷ–ಪ್ರತೀಕಾರ ಏಕೆ? ಎಲ್ಲವೂ ಮುಗಿದ ಬಳಿಕ ತಿಥಿಗೆ ಬರ್ತೀರಾ?’ ಎಂದು ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದರು.

‘ಹುಬ್ಬಳ್ಳಿ–ಧಾರವಾಡದಲ್ಲಿ ಮೋದಿ ಕುರಿತು, ಚಂದ್ರಯಾನ ವೀಕ್ಷಣೆಗಾಗಿ ಬಂದವರು ನೆರೆ ಸಂತ್ರಸ್ತರ ಅಳಲು ಆಲಿಸಲು ಬನ್ನಿ ಎಂದು ಸ್ವಾಗತ ಕೋರುವ ಫ್ಲೆಕ್ಸ್‌ ಹಾಕಿದ್ದಕ್ಕೆ, ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಂಧಿಸಿದ್ದೀರಿ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ನಡೆಸುತ್ತಿದ್ದೀರಿ’ ಎಂದು ಗುಡುಗಿದರು.

‘ಆರ್ಥಿಕ ಹಿಂಜರಿತದಿಂದ ಹಲವರು ಉದ್ಯೋಗ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಜನರ ನೈಜ ಸಮಸ್ಯೆಗೆ ಸ್ಪಂದಿಸದೆ, ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲಿಕ್ಕಾಗಿ ಜನ ವಿರೋಧಿ ನೀತಿ ಅನುಸರಿಸುತ್ತಿದ್ದೀರಿ. ಸರ್ವಾಧಿಕಾರಿ ಧೋರಣೆಯಿಂದ ಭಾವನಾತ್ಮಕವಾಗಿ ಜನರನ್ನು ದಾರಿ ತಪ್ಪಿಸುತ್ತಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೇಂದ್ರ ಸರ್ಕಾರವು ಹಿಟ್ಲರ್‌ ರೀತಿಯಲ್ಲಿ ವರ್ತಿಸುತ್ತಿದೆ. ಪ್ರತಿಪಕ್ಷಗಳು ಇರಲೇಬಾರದು ಎಂದು ಪ್ರಬಲ ಮುಖಂಡರ ವಿರುದ್ಧ ತನಿಖಾ ಸಂಸ್ಥೆ ಬಳಸಿಕೊಳ್ಳುತ್ತಿದೆ’ ಎಂದು ಆರೋಪಿಸಿದರು.

Post Comments (+)