ಸೋಮವಾರ, ಮೇ 16, 2022
28 °C
ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಲದ ಬಿಗಿಪಟ್ಟು: ಬಾಗಿಲು ತೆರೆಯದ ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌

ಸಿನಿಮಾ ಪ್ರಿಯರಲ್ಲಿ ಸಂಭ್ರಮ: ಮಲ್ಟಿಪ್ಲೆಕ್ಸ್‌ಗಳಲ್ಲಿ ಕಲರವ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಥಿಯೇಟರ್‌ಗಳಲ್ಲಿ ಆಸನ ಭರ್ತಿಗಿದ್ದ ಮಿತಿಯನ್ನು ಕೇಂದ್ರ–ರಾಜ್ಯ ಸರ್ಕಾರ ವಾಪಸ್‌ ಪಡೆದ ಬಳಿಕ ಸಿನಿಮಾ ಪ್ರಿಯರಲ್ಲಿ ಸಂಭ್ರಮ ಮನೆ ಮಾಡಿದ್ದರೆ; ಮಲ್ಟಿಪ್ಲೆಕ್ಸ್‌ಗಳಲ್ಲಿ ಸ್ಕ್ರೀನ್‌ ಹೊಂದಿರುವ ಮಾಲೀಕರಲ್ಲಿ ನಿರಾಳ ಭಾವ ವ್ಯಕ್ತವಾಗಿದೆ.

ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಲದಲ್ಲಿ ಸದಸ್ಯತ್ವ ಹೊಂದಿರುವ ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ ಮಾಲೀಕರು ತಮ್ಮ ಬಿಗಿಪಟ್ಟನ್ನು ಮುಂದುವರೆಸಿರುವುದರಿಂದ ಮೈಸೂರು ಜಿಲ್ಲೆ ಸೇರಿದಂತೆ ನೆರೆಯ ಚಾಮರಾಜನಗರ, ಹಾಸನ ಜಿಲ್ಲೆಗಳ ವಿವಿಧೆಡೆ ಹಲವು ಚಿತ್ರಮಂದಿರಗಳು ಇಂದಿಗೂ ಬಾಗಿಲು ತೆರೆದಿಲ್ಲ. ಇದು ಥಿಯೇಟರ್‌ಗಳಲ್ಲಿ ಸಿನಿಮಾ ವೀಕ್ಷಿಸಬೇಕು ಎಂದು ಹಂಬಲಿಸುವ ಬಡವರು, ಶ್ರಮಿಕರು, ಮಧ್ಯಮ ವರ್ಗದ ಅಸಂಖ್ಯಾತ ಜನರ ಕನಸಿಗೆ ಅಡ್ಡಿಯಾಗಿದೆ.

‘ಮೈಸೂರಿನಲ್ಲಿ ಅ.15ರಿಂದಲೇ ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ಪ್ರದರ್ಶನ ನಡೆದಿತ್ತು. ಹಲವು ಬಾರಿ ಸಿನಿಮಾ ವೀಕ್ಷಿಸಿದರೂ ಮನದಲ್ಲಿ ಸಂತಸವಿರಲಿಲ್ಲ. ಪರಸ್ಪರ ದೂರ ಕುಳಿತು ಚಲನಚಿತ್ರ ವೀಕ್ಷಿಸಿದ್ದೆವು. ಪ್ರೇಕ್ಷಕರ ಕೊರತೆಯೂ ಕಾಡುತ್ತಿತ್ತು. ಇದೀಗ ಹೌಸ್‌ಫುಲ್‌ಗೆ ಅವಕಾಶ ಸಿಕ್ಕಿದೆ. ಪ್ರತಿ ಸ್ಕ್ರೀನ್‌ ವೀಕ್ಷಕರಿಂದ ತುಂಬಿವೆ. 11 ತಿಂಗಳ ಬಳಿಕ ಕುಟುಂಬದೊಟ್ಟಿಗೆ ಅಕ್ಕಪಕ್ಕದಲ್ಲೇ ಕುಳಿತು ಚಲನಚಿತ್ರ ವೀಕ್ಷಿಸಿದ್ದು ಖುಷಿ ನೀಡಿತು’ ಎಂದು ರಶ್ಮಿ ತಿಳಿಸಿದರು.

‘ಥಿಯೇಟರ್‌ನಲ್ಲಿ ಸಿನಿಮಾ ನೋಡಿ ವರ್ಷವಾಗುತ್ತಾ ಬಂತು. ಮೈಸೂರಿನ ಪ್ರತಿಷ್ಠಿತ ಚಲನಚಿತ್ರ ಮಂದಿರಗಳು ಇಂದಿಗೂ ಬಾಗಿಲು ತೆರೆದಿಲ್ಲ. ಇದು ನಮ್ಮ ಸಿನಿಮಾ ವೀಕ್ಷಣೆಯ ಆಸೆಗೆ ತಣ್ಣೀರೆರಚಿದೆ’ ಎಂದು ಆಟೊ ಚಾಲಕ ಜಗದೀಶ್‌ ಬೇಸರ ವ್ಯಕ್ತಪಡಿಸಿದರು.

11 ತಿಂಗಳ ಬಳಿಕ ಹೌಸ್‌ಫುಲ್‌: ‘ಬರೋಬ್ಬರಿ 11 ತಿಂಗಳ ಬಳಿಕ ಡಿಆರ್‌ಸಿಯ ಸ್ಕ್ರೀನ್‌ಗಳು ಹೌಸ್‌ಫುಲ್‌ ಆಗಿವೆ. ಇದುವರೆವಿಗೂ ನಷ್ಟದಲ್ಲಿಯೇ ಸ್ಕ್ರೀನ್‌ ನಡೆಸುತ್ತಿದ್ದ ನಮಗೆ ಇನ್ಮುಂದಾದರೂ ಆದಾಯ ಸಿಗುವ ನಿರೀಕ್ಷೆ ಗರಿಗೆದರಿದೆ. ಸಂಕಷ್ಟ ದೂರವಾಗಲಿದೆ ಎಂಬ ಭರವಸೆ ಮೂಡಿದೆ’ ಎಂದು ಡಿಆರ್‌ಸಿಯ ವೈಶಾಲಿ ‘ಪ್ರಜಾವಾಣಿ’ ಬಳಿ ಹರ್ಷ ವ್ಯಕ್ತಪಡಿಸಿದರು.

‘ಪ್ರಜ್ವಲ್‌ ದೇವರಾಜ್‌ ಅಭಿನಯದ ‘ಇನ್ಸ್‌ಪೆಕ್ಟರ್‌ ವಿಕ್ರಂ’ ಸಿನಿಮಾ ಬಿಡುಗಡೆಯಾಗಿದೆ. ಮೊದಲ ಪ್ರದರ್ಶನಕ್ಕೆ 212 ಆಸನ ಸಾಮರ್ಥ್ಯದ ಸ್ಕ್ರೀನ್‌ನ ಹಾಲ್‌ನಲ್ಲಿ 179 ವೀಕ್ಷಕರು ಚಲನಚಿತ್ರ ವೀಕ್ಷಿಸಿದರು. ‘ಮಂಗಳವಾರ ರಜಾ ದಿನ’ ಸಿನಿಮಾದ ಮಧ್ಯಾಹ್ನದ ಶೋಗೆ 200 ಆಸನ ಸಾಮರ್ಥ್ಯದ ಸ್ಕ್ರೀನ್‌ನ ಹಾಲ್‌ನಲ್ಲಿ 148 ಸಿನಿಪ್ರಿಯರು ಸಿನಿಮಾ ವೀಕ್ಷಿಸಿದರು. ಇದು ನಮ್ಮ ಪಾಲಿಗೆ ಒಳ್ಳೆಯ ಬೆಳವಣಿಗೆ’ ಎಂದು ಅವರು ತಿಳಿಸಿದರು.

ಫೆಬ್ರುವರಿಯಲ್ಲಿ 54 ಸಿನಿಮಾ ಬಿಡುಗಡೆ

ಥಿಯೇಟರ್‌ನಲ್ಲಿರುವ ಎಲ್ಲ ಸೀಟು ಭರ್ತಿಗೆ ಕೇಂದ್ರ–ರಾಜ್ಯ ಸರ್ಕಾರ ಅನುಮತಿ ನೀಡುತ್ತಿದ್ದಂತೆ ಚಲನಚಿತ್ರ ರಂಗದ ಚಟುವಟಿಕೆಗಳು ಚುರುಕುಗೊಂಡಿವೆ. ಫೆಬ್ರುವರಿ ತಿಂಗಳೊಂದರಲ್ಲೇ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ 54 ಸಿನಿಮಾಗಳು ಬಿಡುಗಡೆಯಾಗಲಿವೆ ಎಂದು ಡಿಆರ್‌ಸಿಯ ವೈಶಾಲಿ ಮಾಹಿತಿ ನೀಡಿದರು.

ಒಟಿಟಿ ವೇದಿಕೆ ಲಭ್ಯವಿದ್ದರೂ, ಸಿನಿಮಾದ ಅನುಭವ ಪಡೆಯಲಿಕ್ಕಾಗಿ ಪ್ರೇಕ್ಷಕರು ಥಿಯೇಟರ್‌ಗೆ ಬರಲಿದ್ದಾರೆ. ಮೈಸೂರಿನಲ್ಲಿನ ಮಲ್ಟಿಪ್ಲೆಕ್ಸ್‌ಗಳಾದ ಡಿಆರ್‌ಸಿ, ಐನಾಕ್ಸ್‌, ಮೈಸೂರು ವಿಷನ್‌ ತಮ್ಮಲ್ಲಿನ ಎಲ್ಲ ಸ್ಕ್ರೀನ್‌ಗಳಲ್ಲೂ ಸಿನಿಮಾ ಪ್ರದರ್ಶನ ನಡೆಸಿದ್ದಾರೆ. ಶೋಗಳ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ. ಇವೆಲ್ಲದರ ಜೊತೆಗೆ ಕೋವಿಡ್‌ ಮಾರ್ಗಸೂಚಿ ಪಾಲನೆಯನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಪುನರಾರಂಭಗೊಳ್ಳದ 8 ಥಿಯೇಟರ್‌

ಮೈಸೂರಿನಲ್ಲಿ 11 ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ಗಳಿವೆ. ಪದ್ಮ, ಬಾಲಾಜಿ, ಮಹದೇಶ್ವರ ಥಿಯೇಟರ್‌ಗಳು ಪ್ರದರ್ಶನ ಆರಂಭಿಸಿವೆ. ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆಯೂ ಹೆಚ್ಚಿದೆ. ಉಳಿದ 8 ಥಿಯೇಟರ್‌ಗಳು ಪುನರಾರಂಭಗೊಂಡಿಲ್ಲ.

ಕೆ.ಆರ್‌.ನಗರ, ಸಾಲಿಗ್ರಾಮ, ಬಿಳಿಕೆರೆ, ನಂಜನಗೂಡಿನಲ್ಲಿ ಯಾವೊಂದು ಥಿಯೇಟರ್‌ ಸಿನಿಮಾ ಪ್ರದರ್ಶನ ಆರಂಭಿಸಿಲ್ಲ. ಪಿರಿಯಾ‍ಪಟ್ಟಣದಲ್ಲಿ ಪ್ರದರ್ಶನ ಶುರುವಾಗಿದೆ. ಹುಣಸೂರು, ತಿ.ನರಸೀಪುರದಲ್ಲಿ ತಲಾ ಒಂದು ಚಿತ್ರಮಂದಿರ ಚಿತ್ರ ಪ್ರದರ್ಶನಕ್ಕೆ ತೆರೆದಿದ್ದರೆ, ಉಳಿದವು ಮಹಾಮಂಡಲದ ಬಿಗಿಪಟ್ಟಿಗೆ ಬೆಂಬಲ ವ್ಯಕ್ತಪಡಿಸಿ ಪ್ರದರ್ಶನ ಪುನರಾರಂಭಿಸಿಲ್ಲ ಎಂದು ಮೈಸೂರಿನ ಗಾಯತ್ರಿ ಥಿಯೇಟರ್‌ ಮಾಲೀಕ ರಾಜಾರಾಮ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು