ತಪ್ಪಿಗೆ ಶಿಕ್ಷೆ ಅನುಭವಿಸುವುದು ಧ್ಯಾನ

7
ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಅಭಿಮತ

ತಪ್ಪಿಗೆ ಶಿಕ್ಷೆ ಅನುಭವಿಸುವುದು ಧ್ಯಾನ

Published:
Updated:
Deccan Herald

ಮೈಸೂರು: ದೇವರುಗಳೇ ತಪ್ಪು ಮಾಡುತ್ತವೆ; ಹೀಗಿರುವಾಗ ತಪ್ಪು ಮಾಡಿದ ಮನುಷ್ಯರು ಒಪ್ಪಿಕೊಂಡು ಶಿಕ್ಷೆ ಅನುಭವಿಸುವುದು ದೊಡ್ಡ ಧ್ಯಾನ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಅಭಿಪ್ರಾಯಪಟ್ಟರು.

ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಸಂಕಲ್ಪ ಮೈಸೂರು ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಮನಃ ಪರಿವರ್ತನ’ ರಂಗ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇವರನ್ನು ಸೃಷ್ಟಿಸಿರುವವರು ಗ್ರಾಮಾಂತರ ಪ್ರದೇಶದ ಅನಕ್ಷರಸ್ಥರು. ತಾವು ಕಂಡ ಒಳಿತು ಕೆಡಕುಗಳನ್ನು ಆಧರಿಸಿ ದೇವರುಗಳನ್ನು ಹುಟ್ಟುಹಾಕಿದರು. ಹಾಗಾಗಿ, ದೇವರುಗಳೂ ತಪ್ಪು ಮಾಡುತ್ತವೆ. ದೇವರುಗಳಿಗೂ ಶಿಕ್ಷೆಯಾಗುತ್ತದೆ. ಅದರಂತೆಯೇ, ಮಾನವರೂ ತಪ್ಪು ಮಾಡಿ ಶಿಕ್ಷೆ ಅನುಭವಿಸುತ್ತಾರೆ. ಪ್ರಾಯಶ್ಚಿತ್ತವೇ ಬಹುದೊಡ್ಡ ಪರಿವರ್ತನೆ ಎಂದು ಅವರು ಅಭಿಪ್ರಾಯಪಟ್ಟರು.

ಸಾಹಿತಿ ಪ್ರಸಾದ್ ರಕ್ಷಿದಿ ಮಾತನಾಡಿ, ‘ಶಿಕ್ಷೆಯೇ ಶಿಕ್ಷಣ. ಅದು ಪರಿವರ್ತನೆಗೆ ದಾರಿ ತೋರುವ ಮಾಧ್ಯಮ. ಆದರೆ, ಶಿಕ್ಷೆ ಹಿಂಸೆಯಾಗಬಾರದು. ಶಿಕ್ಷೆ ಕಾನೂನಿನ ಚೌಕಟ್ಟಿನಲ್ಲಿ ನಡೆಯಬೇಕು. ಕಾನೂನನ್ನು ಕೈಗೆತ್ತಿಕೊಂಡು ಶಿಕ್ಷೆ ನೀಡುವುದು ಅಪರಾಧ. ಆರೋಪಿಗಳನ್ನು ಕಂಬಕ್ಕೆ ಕಟ್ಟಿ ಹೊಡೆಯುವುದು ಮುಂತಾದ ಅನಾಗರಿಕ ಪದ್ಧತಿಗಳು ಕೊನೆಯಾಗಬೇಕು ಎಂದರು.

ಮೈಸೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ವಿ.ಆನಂದ್ ರೆಡ್ಡಿ ಮಾತನಾಡಿ, ಈ ರಂಗಶಿಬಿರ ನಿರಂತರವಾಗಿ ನಡೆಯಲಿ. ಕೈದಿಗಳು ಕಲಾವಿದರಾಗಿ ಸಮಾಜಮುಖಿಗಳಾಗಲಿ ಎಂದು ಆಶಿಸಿದರು.

ಸಂಕಲ್ಪ ಸಂಸ್ಥೆಯ ನಿರ್ದೇಶಕ ಹುಲಗಪ್ಪ ಕಟ್ಟಿಮನಿ ಮಾತನಾಡಿ, ಗುರುಗಳಾದ ಬಿ.ವಿ.ಕಾರಂತರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಾಗುತ್ತಿದ್ದೇವೆ. ತಪ್ಪಿನ ಅರಿವು ಮೂಡಿಸಿ, ಮನುಷ್ಯರಾಗಿ ಮಾಡುವುದು ನಮ್ಮ ಆಶಯ ಎಂದು ತಿಳಿಸಿದರು.

ಬೋಗಾದಿಯ ಕೆ.ಎಂ.ಹೆಮ್ಮನಹಳ್ಳಿಯಲ್ಲಿರುವ ಮಹಾಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಖೈದಿಗಳಿಗೆ ಮನ ಪರಿವರ್ತನ ಶಿಬಿರ ನಡೆಯಲಿದೆ. ಶಿಬಿರ ಮುಕ್ತಾಯವಾದ ಬಳಿಕ ‘ಹಿಂಸೆಯ ಒಳ- ಹೊರಗು’ ನಾಟಕವನ್ನು ಕೈದಿಗಳು ನಡೆಸಿಕೊಡಲಿದ್ದಾರೆ.

ಈ ಸಂದರ್ಭದಲ್ಲಿ ಕೈದಿಗಳು ನೇಯ್ದಿರುವ ಕೌದಿ, ಬಿಡಿಸಿರುವ ಕಲಾಕೃತಿಗಳು, ಚಿತ್ರಕಲೆಗಳ ಪ್ರದರ್ಶನ ಗಮನ ಸೆಳೆಯಿತು.
ಕೆ.ಎಂ.ಹೆಮ್ಮನಹಳ್ಳಿಯ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಗಣೇಶ್, ಹಿರಿಯ ಪ್ರಾಧ್ಯಾಪಕ ಪ್ರಸಾದ್, ದೀಪಕ್ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !