ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತಿಗೆ ಕೂಲಿ ಇಲ್ಲ, ಮಗುವಿಗೆ ಊಟವಿಲ್ಲ...

ತಾಯಿ-ಮಗುವಿನ ಕೇಂದ್ರ ತೆರೆದು ಒಡನಾಡಿಯಲ್ಲಿ ಆಶ್ರಯ
Last Updated 22 ಏಪ್ರಿಲ್ 2021, 22:17 IST
ಅಕ್ಷರ ಗಾತ್ರ

ಮೈಸೂರು: ಪತಿಗೆ ಕೂಲಿ ಇಲ್ಲದೇ, ಆಹಾರಕ್ಕೆ ತೊಂದರೆ ಉಂಟಾಗಿ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಮಹಿಳೆಗೆ ಮೈಸೂರಿನ ಒಡನಾಡಿ ಸೇವಾ ಸಂಸ್ಥೆ ಆಶ್ರಯ ನೀಡಿದೆ.

‌‘ತಾಯಿ–ಮಗುವಿನ ತುರ್ತು ಕೇಂದ್ರ’ ತೆರೆದು ವಾಸ್ತವ್ಯ ಹಾಗೂ ಊಟಕ್ಕೆ ವ್ಯವಸ್ಥೆ ಮಾಡಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಬೆಳಚಲವಾಡಿ ಗ್ರಾಮದ ಮಹಿಳೆ ಹಾಗೂ ಆಕೆಯ ಮೂರೂವರೆ ವರ್ಷದ ಗಂಡು ಮಗು ಆಶ್ರಯ ‍ಪಡೆದವರು.

‘ಆತ್ಮಹತ್ಯೆಗೆ ಮುಂದಾಗಿದ್ದ ಈ ಮಹಿಳೆಯನ್ನು ಪರಿಚಯಸ್ಥರೊಬ್ಬರು ನಮ್ಮ ಸಂಸ್ಥೆಗೆ ಕರೆದುಕೊಂಡು ಬಂದರು. ಕೋವಿಡ್‌ ಪ್ರಕರಣ ಹೆಚ್ಚುತ್ತಿರುವ ಕಾರಣ ಪರೀಕ್ಷೆ ಮಾಡಿಸದೆ ಉಳಿದವರ ಜೊತೆಗೆ ಇರಿಸಲು ಸಾಧ್ಯವಿಲ್ಲ. ಈ ರೀತಿ ಸಮಸ್ಯೆಗೆ ಸಿಲುಕಿದವರಿಗೆ ಆಶ್ರಯ ನೀಡಲು ಪ್ರತ್ಯೇಕ ಕೇಂದ್ರ ತೆರೆದಿದ್ದೇವೆ’ ಎಂದು ಒಡನಾಡಿ ಸಂಸ್ಥೆಯ ಪರಶುರಾಂ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋವಿಡ್‌ ಕರ್ಫ್ಯೂ, ಲಾಕ್‌ಡೌನ್‌ ಸಂದರ್ಭಗಳಲ್ಲಿ ಬಡವರು, ನೊಂದ ಮಹಿಳೆಯರು, ಮಕ್ಕಳು, ಬೀದಿ ಬದಿಯಲ್ಲಿ ವಾಸಿಸುವವರಿಗೆ ತುಂಬಾ ಕಷ್ಟ. ಊಟಕ್ಕೂ ಪ‍ರದಾಡಬೇಕಾಗುತ್ತದೆ. ಇಂಥವರಿಗಾಗಿ ಸರ್ಕಾರ ಏನಾದರೂ ವ್ಯವಸ್ಥೆ ಮಾಡಬೇಕು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರೊಂದಿಗೂ ಮಾತನಾಡಿದ್ದೇನೆ. ಪ್ರತಿ ಜಿಲ್ಲಾ ಕೇಂದ್ರದಲ್ಲಿ ಆಶ್ರಯ ತಾಣ ತೆರೆಯಲು ಕೋರಿದ್ದೇನೆ’ ಎಂದರು.

ವಿಚಾರ ಗೊತ್ತಾಗಿ ಮಹಿಳೆಯ ಪತಿ ಕೂಡ ಒಡನಾಡಿಗೆ ಬಂದು ಹೋಗಿದ್ದಾರೆ. ಎಲ್ಲಾದರೂ ಕೆಲಸ ಹುಡುಕಿ ಪತ್ನಿಯನ್ನು ಕರೆದುಕೊಂಡು ಹೋಗುವುದಾಗಿ ಹೇಳಿದ್ದಾರೆ.

‘‍ಪತಿಯು ಮನೆಗೆ ದವಸ–ಧಾನ್ಯ ತರುತ್ತಿಲ್ಲ ಎಂಬ ಬೇಸರ ಮಹಿಳೆಗಿದೆ. ಆತನಿಗೆ ಯಾವುದೇ ಕೆಟ್ಟ ಅಭ್ಯಾಸ ಇದ್ದಂತಿಲ್ಲ. ಆದರೆ, ಕೂಲಿ ಸಿಗುತ್ತಿಲ್ಲ’ ಎನ್ನುತ್ತಾರೆ ಪರಶುರಾಂ.

ಕಷ್ಟದ ಬದುಕು: ‘ಗ್ರಾಮದ ಸುತ್ತಮುತ್ತ ಎಲ್ಲೂ ಕೂಲಿ ಸಿಗುತ್ತಿಲ್ಲ. ಹಣವಿಲ್ಲದೇ ಪತಿ ಏನನ್ನೂ ತರುತ್ತಿಲ್ಲ. ಮಗುವಿಗೆ ಹಾಲು ಖರೀದಿಸಲೂ ಹಣವಿಲ್ಲ. ಅತ್ತೆ, ಮಾವನಿಗೆ ವಯಸ್ಸಾಗಿದೆ. ಬದುಕು ಕಷ್ಟಕರವಾಗಿದೆ’ ಎಂದು ಮಹಿಳೆ ಸಮಸ್ಯೆ
ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT