ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶೀಘ್ರವೇ ರೈತ ಉತ್ಪಾದನಾ ಸಂಘ’

ನಾಗಾಪುರ ಗಿರಿಜನರ ಕೃಷಿ ಪ್ರೋತ್ಸಾಹಕ್ಕೆ ಸವಲತ್ತು: ನಿರ್ದೇಶಕ ಸಂಗಪ್ಪ ಭರವಸೆ
Last Updated 11 ಅಕ್ಟೋಬರ್ 2020, 6:17 IST
ಅಕ್ಷರ ಗಾತ್ರ

ಹುಣಸೂರು: ‘ಆದಿವಾಸಿ ಗಿರಿಜನರು ಸ್ವಯಂ ಕೃಷಿ ಮಾಡುವ ಹಂತಕ್ಕೆ ಬಂದಿರುವುದು ಶ್ಲಾಘನೀಯ’ ಎಂದು ರಾಜ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಸಂಗಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲ್ಲೂಕಿನ ನಾಗಾಪುರ ಪುನರ್ವಸತಿ ಕೇಂದ್ರದ 1, 2, 3, 5 ಘಟಕಗಳಿಗೆ ಶನಿವಾರ ಭೇಟಿ ನೀಡಿದ್ದ ಅವರು, ರೈತ ಉತ್ಪಾದಕರ ಸಂಘ ಸ್ಥಾಪನೆಗೆ ಗಿರಿಜನ ಕೃಷಿಕರೊಂದಿಗೆ ಆಶ್ರಮ ಶಾಲೆಯಲ್ಲಿಸಭೆ ನಡೆಸಿ, ಗಿರಿಜನರ ಬೇಸಾಯಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿ ಸಂಗ್ರಹಿಸಿದರು.

‘ಬೆಳೆಗಳ ದಾಸ್ತಾನಿಗೆ ಗೋದಾಮು, ಬಿತ್ತನೆ ಬೀಜ, ರಸಗೊಬ್ಬರ, ವೈಜ್ಞಾನಿಕ ತರಬೇತಿ ಮತ್ತು ಮಾರುಕಟ್ಟೆ ಸ್ಥಾಪನೆಗೆ ಗಿರಿಜನರಿಂದ ಹೆಚ್ಚಿನ ಬೇಡಿಕೆ ಇದ್ದು, ಈ ಸಂಬಂಧ ಯೋಜನೆ ಅಡಿಯಲ್ಲಿ ನಾಗಾಪುರ ಪುನರ್ವಸತಿ ಕೇಂದ್ರದಲ್ಲಿ ರೈತ ಉತ್ಪಾದನಾ ಸಂಘ ಸ್ಥಾಪಿಸಿ ಅದರೊಳಗೆ ಈ ಎಲ್ಲಾ ಬೇಡಿಕೆ ಈಡೇರಿಸುವ ಪ್ರಯತ್ನ ನಡೆಸಲಾಗುವುದು’ ಎಂದು ಭರವಸೆ ನೀಡಿದರು.

ಪ್ರವಾಸ: ‘ಆದಿವಾಸಿ ಗಿರಿಜನರಿಗೆ ಕೃಷಿ ಸಂಬಂಧ ರಾಜ್ಯದಾದ್ಯಂತ ಪ್ರಗತಿಪರ ರೈತರೊಂದಿಗೆ ಸಂವಾದ ಹಾಗೂ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗುವುದು. ಇದಲ್ಲದೆ ಕೃಷಿ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ ವೈಜ್ಞಾನಿಕ ಬೇಸಾಯ ಪದ್ಧತಿ ತಿಳಿಸುವ ಪ್ರಯತ್ನ ನಡೆಸಲಾಗುವುದು’ ಎಂದರು.

ರೈತ ಉತ್ಪಾದನೆ ಸಂಘ ಯೋಜನೆ ಕುರಿತ ಗಿರಿಜನರಿಗೆ ಮಾಹಿತಿ ನೀಡಿದ ಭಾರತೀಯ ಗಿರಿಜನ ಶಿಕ್ಷಣ ಸಂಸ್ಥೆಯ ನಿರ್ದೇಶಕ ಎಂ.ಬಿ.ಪ್ರಭು, ‘ಗಿರಿಜನರು 2 ದಶಕದಿಂದ ಕೃಷಿ ಮಾಡುವ ಬಗ್ಗೆ ಹಂತ ಹಂತವಾಗಿ ಕಲಿತು ಒಂದು ಹಂತಕ್ಕೆ ಬಂದಿದ್ದಾರೆ. ಈ ಜನರಿಗೆ ವೈಜ್ಞಾನಿಕ ಬೇಸಾಯ ಪದ್ಧತಿ ತಿಳಿಹೇಳಬೇಕಾಗಿದೆ. ಆರ್ಥಿಕ ಸುಧಾರಣೆಗಾಗಿ ಕೃಷಿಯೊಂದಿಗೆ ಹೈನುಗಾರಿಕೆ ಮತ್ತು ತೋಟಗಾರಿಕೆ ಬೇಸಾಯವನ್ನು ತಿಳಿಸುವ ಕೆಲಸ ಆಗಬೇಕು’ ಎಂದರು.

ಸಭೆಯಲ್ಲಿ ಗಿರಿಜನ ಕೃಷಿಕರಾದ ಜೆ.ಕೆ.ತಿಮ್ಮಯ್ಯ, ಜೆ.ಕೆ.ಮಣಿ, ಜೆ.ಕೆ.ಬಸವ, ಜೆ.ಕೆ.ಹರೀಶ್ ಕೃಷಿ ಅನುಭವ ಹಂಚಿಕೊಂಡರು.

ಸ್ಥಳ ಪರಿಶೀಲನೆ ತಂಡದಲ್ಲಿ ರಾಜ್ಯ ಪರಿಶಿಷ್ಟ ವರ್ಗ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಜಕುಮಾರ್, ಜಿಲ್ಲಾ ಪರಿಶಿಷ್ಟ ಕಲ್ಯಾಣ ಅಧಿಕಾರಿ ಪ್ರಭಾ ಅರಸು, ತಾಲ್ಲೂಕು ಎಸ್ಟಿ ಅಧಿಕಾರಿ ಬಸವರಾಜ್ ಮತ್ತು ಯೋಜನಾ ತಜ್ಞರಾದ ನಿಶ್ಚಿತ್ ಮತ್ತು ಕಿರಣ್ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT