ಶುಕ್ರವಾರ, ಜುಲೈ 30, 2021
28 °C
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರ ಆಕ್ರೋಶ

ಮೈಸೂರು | ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಬಾರದು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರೈತರು ಸೋಮವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ಜನಾಂದೋಲನ ಮಹಾಮೈತ್ರಿ ಸಂಘಟನೆಗಳು ಪ್ರತಿಭಟನೆಗೆ ಸಾಥ್ ನೀಡಿದ್ದವು.

ಸಣ್ಣ ಹಿಡುವಳಿದಾರರೇ ಹೆಚ್ಚಾಗಿರುವ ರಾಜ್ಯದಲ್ಲಿ ಸರ್ಕಾರ ಉದ್ದೇಶಿಸಿರುವ ತಿದ್ದುಪಡಿಗಳನ್ನು ತಂದರೆ ಅಕ್ಷರಶಃ ರೈತರ ಬದುಕು ಬೀದಿಗೆ ಬೀಳಲಿದೆ. ಇವರು ಉದ್ಯೋಗ ಅರಸಿ ವಲಸೆ ಹೋಗುವ ಸ್ಥಿತಿಯನ್ನು ನಿರ್ಮಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.‌

ಗ್ರಾಮೀಣ ರೈತರ ಕೃಷಿ ಸಂಸ್ಕೃತಿ ಅವಸಾನವಾಗಿ ಬಂಡವಾಳಿಗರ ಕೃಷಿ ಸಂಸ್ಕೃತಿ ಬೆಳೆಯುತ್ತದೆ. ಆಹಾರದ ಕೊರತೆ ಏರ್ಪಡುತ್ತದೆ. ಆಗ ಗ್ರಾಹಕರು ಹೆಚ್ಚಿನ ಬೆಲೆ ತೆತ್ತು ಆಹಾರ ಖರೀದಿಸಬೇಕಾಗುತ್ತದೆ. ಇಷ್ಟೆಲ್ಲ ಮಾರಕ ಪರಿಣಾಗಳನ್ನುಂಟು ಮಾಡುವ ತಿದ್ದುಪಡಿ ಬೇಡವೇ ಬೇಡ ಎಂದು ಅವರು ಒಕ್ಕೊರಲಿನಿಂದ ಆಗ್ರಹಿಸಿದರು.

ಬಂಡವಾಳಿಗರು ವಾಣಿಜ್ಯ ಉದ್ದೇಶಕ್ಕೆ ಮಾತ್ರ ಏಕ ರೀತಿ ಬೆಳೆ ಬೆಳೆಯುತ್ತಾರೆ. ಕುಲಾಂತರಿ ಬೀಜಗಳನ್ನು ಬಳಕೆ ಮಾಡುತ್ತಾರೆ. ಹೆಚ್ಚು ಹೆಚ್ಚು ರಾಸಾಯನಿಕ ಬಳಕೆ ಮಾಡುತ್ತಾರೆ. ಆಗ ಇಡೀ ಪರಿಸರವೇ ನಾಶವಾಗುತ್ತದೆ. ಇಂತಹ ಪರಿಸರಕ್ಕೆ ಮಾರಕವಾದ ತಿದ್ದುಪಡಿ ತರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಒಂದು ವೇಳೆ ತಿದ್ದುಪಡಿ ತರುವ ಪ್ರಯತ್ನ ಕೈಬಿಡದೇ ಹೋದರೆ ಇನ್ನು ಮುಂದೆ ಇನ್ನಷ್ಟು ತೀವ್ರವಾದ ಪ್ರತಿಭಟನೆ ನಡೆಸಲಾಗುವುದು ಎಂಬ ಎಚ್ಚರಿಕೆ ಪತ್ರವನ್ನು ಅವರು ಜಿಲ್ಲಾಧಿಕಾರಿ ಕಚೇರಿಗೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಮುಖಂಡ ಎಂ.ಎಸ್.ಅಶ್ವತ್ಥ ನಾರಾಯಣರಾಜೇ ಅರಸ್, ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಮರಂಕಯ್ಯ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶೆಟ್ಟಹಳ್ಳಿ ಚಂದ್ರೇಗೌಡ, ತಾಲ್ಲೂಕು ಘಟಕದ ಕಾರ್ಯದರ್ಶಿ ಪ್ರಭಾಕರ್, ತಾಲ್ಲೂಕು ಘಟಕದ ಸಹಕಾರ್ಯದರ್ಶಿ ಮಂಡಕಳ್ಳಿ ಮಹೇಶ್ ಹಾಗೂ ಇತರರು ಇದ್ದರು.

ತರಬೇತಿ ಮುಂದುವರಿಸಿ ಸಂಬಳ ನೀಡಲು ಆಗ್ರಹ

‘ನೀಮ್‌’ (ನ್ಯಾಷನಲ್ ಎಂಪ್ಲಾಯಿಮೆಂಟ್ ಎನಾನ್ಸ್‌ಮೆಂಟ್ ಮಿಷನ್) ಟ್ರೈನಿಗಳು ಹಾಗೂ ಅಪ್ರೆಂಟೀಸ್ ಟ್ರೈನಿಗಳ ತರಬೇತಿಯನ್ನು ಮುಂದುವರಿಸಬೇಕು ಹಾಗೂ ಸಂಬಳ ನೀಡಬೇಕು ಎಂದು ಆಗ್ರಹಿಸಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.

ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಜೇಷನ್ (ಎಐಡಿವೈಒ) ನೇತೃತ್ವದಲ್ಲಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ವಿವಿಧ ಕಂಪನಿಗಳಲ್ಲಿ ಈಗ ಕೆಲಸ ಆರಂಭವಾಗಿದೆ. ಈ ಹಿಂದೆ ಇವರು ಕೆಲಸ ಮಾಡುತ್ತಿದ್ದ ಕಂಪನಿಗಳಲ್ಲಿ 3 ವರ್ಷಗಳ ಗುತ್ತಿಗೆ ಇದ್ದರೂ ಕೆಲಸಕ್ಕೆ ಇವರನ್ನು ಕರೆಯುತ್ತಿಲ್ಲ ಎಂದು ಅವರು ದೂರಿದರು.

ಲಾಕ್‌ಡೌನ್ ಸಮಯದಲ್ಲಿ ಶಿಷ್ಯವೇತನ ನೀಡಬೇಕು ಎಂಬ ಆದೇಶ ಇದ್ದರೂ ಹಲವರಿಗೆ ಶಿಷ್ಯ ವೇತನ ನೀಡಿಲ್ಲ. ಇದರಿಂದ ಇವರ ಬದುಕು ಮೂರಾಬಟ್ಟೆಯಾಗಿದೆ ಎಂದು ಕಿಡಿಕಾರಿದರು.

ಎಸ್.ಹರೀಶ್, ಶಿವಮೂರ್ತಿ ಸೇರಿದಂತೆ ಹಲವರು ಇದ್ದರು.

ಕಾಮಗಾರಿ ಸ್ಥಗಿತಗೊಳಿಸಲು ಆಗ್ರಹ

ಕೆಆರ್‌ಎಸ್‌ ಜಲಾಶಯದ ಆವರಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಯೊಂದಿಗೆ ಸರ್ ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆ ನಿರ್ಮಾಣ ಕಾಮಗಾರಿಯನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಏಕಪ್ರತಿಮೆ ಹೋರಾಟ ಸಮಿತಿ ಆಗ್ರಹಿಸಿದೆ.

ಈ ಕುರಿತು ಮನವಿ ಪತ್ರವನ್ನು ಸೋಮವಾರ ಪ್ರೊ.ನಂಜರಾಜಅರಸ್, ಮುಖಂಡ ಸೀತಾರಾಂ, ಹೊಸಕೋಟೆ ಬಸವರಾಜು, ಬಸವರಾಜನಾಯಕ ಹಾಗೂ ಇತರರು ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್‌ ಅವರಿಗೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.