ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರನ್ನು ರಕ್ಷಿಸದ ಕೃಷಿ ನೀತಿ: ಬಡಗಲಪುರ ನಾಗೇಂದ್ರ ವಿಷಾದ

Last Updated 6 ಆಗಸ್ಟ್ 2021, 16:10 IST
ಅಕ್ಷರ ಗಾತ್ರ

ಮೈಸೂರು: ‘ದೇಶದಲ್ಲಿ ರೈತರ ಜೀವನಕ್ಕೆ ಭದ್ರತೆ ಒದಗಿಸಲು, ಕನಿಷ್ಠ ಆದಾಯದ ಖಾತರಿ ನೀಡುವ ಕೃಷಿ ನೀತಿಯೇ ಜಾರಿಗೊಂಡಿಲ್ಲ’ ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ವಿಷಾದಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಸಾರ್ವಜನಿಕ ಆಡಳಿತ ಮತ್ತು ರಾಜ್ಯಶಾಸ್ತ್ರ ವಿಭಾಗವು ಶುಕ್ರವಾರ ‘ಕೃಷಿ ನೀತಿ ಮತ್ತು ಸಮಕಾಲೀನ ಕೃಷಿ ಬಿಕ್ಕಟ್ಟು’ ಕುರಿತು ಆಯೋಜಿಸಿದ್ದ ವೆಬಿನಾರ್‌ನಲ್ಲಿ ಮಾತನಾಡಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಅನೇಕ ಕೃಷಿ ನೀತಿ, ಕಾನೂನುಗಳು ರೂಪುಗೊಂಡಿದ್ದರೂ ಕೃಷಿಕರ ಅಸ್ತಿತ್ವವನ್ನು ಗಟ್ಟಿಗೊಳಿಸಲು ಸಾಧ್ಯವಾಗಿಲ್ಲ. ಉತ್ತಮ ಶಿಕ್ಷಣ, ಆರೋಗ್ಯ ಸೇವೆ ದೊರಕುತ್ತಿಲ್ಲ. ರೈತರ ಆತ್ಮಹತ್ಯೆಗಳು ಹೆಚ್ಚುತ್ತಿವೆ. ಅನೇಕ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ’ ಎಂದರು.

‘ಕೃಷಿ ಮಾರುಕಟ್ಟೆ ಕಾಯ್ದೆ, ಬೆಲೆ ಭರವಸೆಗಳ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ, ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, ವಿದ್ಯುತ್‌ ಕಾಯ್ದೆಗಳು ರೈತ ವಿರೋಧಿ, ಜನವಿರೋಧಿ ಹಾಗೂ ದೇಶ ವಿರೋಧಿ ಕಾನೂನುಗಳು. ಸಂವಿಧಾನದ ಆಶೋತ್ತರಕ್ಕೆ ವಿರುದ್ಧವಾಗಿ ಕಾಯ್ದೆಗಳನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ’ ಎಂದು ಆರೋಪಿಸಿದರು.

‘ಕೇಂದ್ರ ಸರ್ಕಾರವು ಈ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವ ತುರ್ತು ಏನಿತ್ತು? ಆಹಾರ ಕ್ಷಾಮ ಉಂಟಾಗಿತ್ತೇ? ದೇಶ ದಿವಾಳಿಯಾಗಿತ್ತೇ? ಇದು ಪ್ರಜಾಪ್ರಭುತ್ವ ವಿರೋಧಿ ನಡೆ ಅಲ್ಲವೇ? ಚರ್ಚೆಗೆ ಯಾಕೆ ಅವಕಾಶ ನೀಡಲಿಲ್ಲ? ಯಾವ ಸಮುದಾಯದ ಜತೆ ಚರ್ಚೆ ಮಾಡಿದ್ದೀರಿ’ ಎಂದು ಪ್ರಶ್ನಿಸಿದರು.

ಇನ್‌ಸ್ಟಿಟ್ಯೂಟ್‌ ಫಾರ್‌ ಸೋಷಿಯಲ್‌ ಅಂಡ್‌ ಎಕನಾಮಿಕ್ಸ್‌ ಚೇಂಜ್‌ನ ಮಾಜಿ ನಿರ್ದೇಶಕ ಪ್ರೊ.ಆರ್‌.ಎಸ್‌.ದೇಶಪಾಂಡೆ ಮಾತನಾಡಿ, ‘ಕೃಷಿ ಕಾಯ್ದೆಗಳ ಜಾರಿಯಿಂದ ರೈತರಿಗೆ ಅನುಕೂಲವಿದೆ. ಎಪಿಎಂಸಿ ಮಧ್ಯವರ್ತಿಗಳ ಹಿಡಿತದಿಂದ ರೈತರಿಗೆ ಬಿಡುಗಡೆ ಸಿಗಲಿದೆ. ಅವರು ಸ್ವತಂತ್ರವಾಗಿ ಭಾರತದ ಯಾವುದೇ ಮಾರುಕಟ್ಟೆಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಬಹುದು’ ಎಂದು ಹೇಳಿದರು.

‘ಕೇಂದ್ರ ಸರ್ಕಾರವು ಜಾರಿಗೊಳಿಸುವ ಕಾನೂನುಗಳನ್ನು ರಾಜ್ಯ ಸರ್ಕಾರಗಳು ಪಾಲಿಸಬೇಕಾದದ್ದು ನಿಯಮ. ಆದರೆ, ರಾಜ್ಯ ಸರ್ಕಾರಕ್ಕೂ ತನ್ನದೇ ಆದ ಅಧಿಕಾರವಿದೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತನ್ನಿ ಎಂದು ಕೇಂದ್ರ ಸರ್ಕಾರ ಒತ್ತಡ ಹೇರಿದರೆ ಅದಕ್ಕೆ ವಿರೋಧ ವ್ಯಕ್ತಪಡಿಸುವ ಅಧಿಕಾರವೂ ರಾಜ್ಯಗಳಿಗೆ ಇದೆ’ ಎಂದರು.

ವಿಭಾಗದ ಮುಖ್ಯಸ್ಥ ಪ್ರೊ.ಮುಜಾಫರ್‌ ಅಸಾದಿ, ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹರೀಶ್‌ ರಂಗಸ್ವಾಮಿ, ಕಾರ್ಯಕ್ರಮದ ಸಂಯೋಜಕರಾದ ಸಿ.ಎಲ್‌. ಸೋಮಶೇಖರ್‌, ಪ್ರವೀಣ್‌ ಕುಮಾರ್‌ ಮೆಲ್ಲಳ್ಳಿ, ಡಾ.ಕೃಷ್ಣ ಹೊಂಬಾಳ್‌, ಡಾ.ಗೋಪಾಲ್‌ ಸಿಂಗ್‌ ಭಾಗವಹಿಸಿದ್ದರು.

‘ಕೃಷಿ ವ್ಯಾಪಾರವಲ್ಲ; ಸಂಸ್ಕೃತಿ’

‘ಕೃಷಿಯನ್ನು ವ್ಯವಹಾರದ ರೀತಿ ನೋಡಬಾರದು. ಕೃಷಿ ಒಂದು ಸಂಸ್ಕೃತಿ. ಕೃಷಿಕನಿಗೂ ಭೂಮಿಗೂ ಅವಿನಾಭಾವ ಸಂಬಂಧ ಇರುತ್ತದೆ. ವ್ಯಾಪಾರದ ಹೆಸರಿನಲ್ಲಿ ಕೃಷಿಕರನ್ನು ದಿಕ್ಕು ತಪ್ಪಿಸಬಾರದು. ರೈತನಿಗೆ ಕೃಷಿ ಬಿಟ್ಟರೆ ಬೇರೆ ಗೊತ್ತಿಲ್ಲ. ಹೀಗಾಗಿ, ಕೃಷಿಯನ್ನು ವ್ಯಾಪಕ ನೆಲೆಯಲ್ಲಿ ನೋಡಬೇಕು. ಉಪ ಕಸಬು ಮಾಡುವವರನ್ನೂ ಕೃಷಿಕರೆಂದು ಪರಿಗಣಿಸಬೇಕು’ ಎಂದು ಬಡಗಲಪುರ ನಾಗೇಂದ್ರ ಹೇಳಿದರು.

‘ಬೃಹತ್‌ ಆರ್ಥಿಕ ಶಕ್ತಿಯಾಗಿ ಬೆಳೆಯಲಿ’

ಕಾರ್ಯಕ್ರಮ ಉದ್ಘಾಟಿಸಿದ ಪ್ರೊ.ಜಿ. ಹೇಮಂತ್‌ ಕುಮಾರ್‌ ಮಾತನಾಡಿ, ‘ಹಸಿರು ಕ್ರಾಂತಿಯಿಂದ ಹಸಿವನ್ನು ನೀಗಿಸಿಕೊಂಡೆವು. ಆಹಾರ ಧಾನ್ಯಗಳ ಸಂಗ್ರಹವನ್ನು ಹೆಚ್ಚಿಸಿಕೊಂಡೆವು. ಬೀಜ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಬಳಿಕ ಕೃಷಿ ಉತ್ಪಾದನೆ ಹೆಚ್ಚಾಯಿತು. ಆದರೂ ರೈತಸ್ನೇಹಿ ಮಾರುಕಟ್ಟೆ ವ್ಯವಸ್ಥೆ ಇಲ್ಲ. ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 2030ರ ವೇಳೆಗೆ ಭಾರತವು ಬೃಹತ್‌ ಆರ್ಥಿಕ ಶಕ್ತಿಯಾಗಿ ಬೆಳೆಯಬೇಕಾದರೆ ಕೃಷಿ ಕ್ಷೇತ್ರ ಅಭಿವೃದ್ಧಿ ಆಗಬೇಕು’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT