ಭಾನುವಾರ, ನವೆಂಬರ್ 17, 2019
21 °C
ದೇಶದ ಆರ್ಥಿಕ ಹಿನ್ನಡೆ ಕುರಿತು ದುಂಡು ಮೇಜಿನ ಸಭೆಯಲ್ಲಿ ಅಭಿಪ್ರಾಯ

ಆರ್ಥಿಕ ಬಿಕ್ಕಟ್ಟು; ಜನಾಂದೋಲನಕ್ಕೆ ಕರೆ

Published:
Updated:
Prajavani

ಮೈಸೂರು: ದೇಶದಲ್ಲಿ ಆರ್ಥಿಕ ವ್ಯವಸ್ಥೆ ಹದಗೆಟ್ಟಿದ್ದು, ಪರ್ಯಾಯ ವ್ಯವಸ್ಥೆ ಸೃಷ್ಟಿಸಲು ಜನಾಂದೋಲನ ರೂಪಿಸಬೇಕಾದ ಅನಿವಾರ್ಯವಿದೆ ಎಂಬ ಅಭಿಪ್ರಾಯ ದೇಶದ ಆರ್ಥಿಕ ಹಿನ್ನಡೆ ಕುರಿತು ಆಯೋಜಿಸಿದ್ದ ದುಂಡು ಮೇಜಿನ ಸಭೆಯಲ್ಲಿ ವ್ಯಕ್ತವಾಯಿತು.

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ನಾಗರಿಕ ವೇದಿಕೆ ಬುಧವಾರ ರೋಟರಿ ಶಾಲಾ ಆವರಣದಲ್ಲಿ ಈ ಸಭೆ ಏರ್ಪಡಿಸಿತ್ತು. ವಿವಿಧ ಕ್ಷೇತ್ರದ ಪರಿಣತರು ಪಾಲ್ಗೊಂಡು ಮಾತನಾಡಿದರು.

ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯವಾಗಿದೆ. ದೇಶದಾದ್ಯಂತ ರೈತರು, ಕಾರ್ಮಿಕರು ಬೀದಿಗಿಳಿದು ಹೋರಾಡಬೇಕು. ಆಗ ಮಾತ್ರ ಸಮಸ್ಯೆಗೆ ಪರಿಹಾರ ಸಿಗಬಹುದು ಎಂಬ ವಿಚಾರ ಎಲ್ಲರ ಮಾತಿನಲ್ಲಿ ಪ್ರತಿಧ್ವನಿಸಿತು. ರೈತರ ಹೋರಾಟದ ಫಲವಾಗಿ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್‌ಸಿಇಪಿ)  ಒಪ್ಪಂದದಿಂದ ಭಾರತ ಹಿಂದೆ ಸರಿಯಿತು ಎಂಬ ವಿಚಾರ ಸಭೆಯಲ್ಲಿ ಪ್ರಸ್ತಾಪವಾಯಿತು.

‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏರುಪೇರುಗಳಿಂದಾಗಿ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿದ್ದಲ್ಲ. ಬದಲಾಗಿ ದೇಶಿ ಹೂಡಿಕೆ ಕಡಿಮೆ ಆಗಿದೆ, ಗ್ರಾಮೀಣ ಪ್ರದೇಶದಲ್ಲಿ ಖರೀದಿಸುವ ಶಕ್ತಿ ತಗ್ಗಿದೆ. ಖಾಸಗಿ ವಲಯದಲ್ಲಿ ಹೂಡಿಕೆ ಮಾಡಲು ಜನ ಹಿಂಜರಿಯುತ್ತಿದ್ದಾರೆ. ಆರ್ಥಿಕ ಅನಿಶ್ಚಿತತೆ ಉಂಟಾಗಿದೆ’ ಎಂದು ಆರ್ಥಿಕ ತಜ್ಞ ಪ್ರೊ.ಆರ್‌.ಎಂ.ಚಿಂತಾಮಣಿ ಹೇಳಿದರು.

ತಯಾರಿ ಮಾಡಿಕೊಳ್ಳದೆ ನೋಟು ಅಮಾನ್ಯೀಕರಣ ಹಾಗೂ ಜಿಎಸ್‌ಟಿ ಜಾರಿ ಮಾಡಿರುವುದು ಆರ್ಥಿಕ ಪರಿಸ್ಥಿತಿ ಮೇಲೆ ದೊಡ್ಡ ಹೊಡೆತ ನೀಡಿದೆ ಎಂದು ಅಭಿಪ್ರಾಯಪಟ್ಟರು.

ಪಾರ್ಲೆ ಸೇರಿದಂತೆ ಹಲವು ಕಂಪನಿಗಳು ಬಿಕ್ಕಟ್ಟು ಎದುರಿಸುತ್ತಿವೆ. ಉತ್ಪಾದನಾ ಘಟಕಗಳು ಸ್ಥಗಿತಗೊಂಡಿದ್ದು, ಉದ್ಯೋಗಿಗಳನ್ನು ಕಿತ್ತು ಹಾಕುತ್ತಿದ್ದಾರೆ. ಕಲ್ಲಿದ್ದಲು ವಲಯದ ಪೆಟ್ರೋಲಿಯಂ, ಸ್ಟೀಲ್‌, ಸಿಮೆಂಟ್‌, ರಸಗೊಬ್ಬರ, ವಿದ್ಯುತ್ ಉತ್ಪಾದನೆ ವಲಯದ ಉತ್ಪಾದನೆ ಸುಮಾರು ಶೇ 8ರಷ್ಟು ಕಡಿಮೆ ಆಗಿದೆ. ಚಾಲನಾ ಶಕ್ತಿ ವಲಯದಲ್ಲಿಯೇ ಉತ್ಪಾದನೆ ಕಡಿಮೆಯಾಗಿರುವುದು ಆತಂಕಕಾರಿ ವಿಚಾರ ಎಂದು ವಿವರಿಸಿದರು.

ಮಾಜಿ ಸ್ಪೀಕರ್‌ ಕೃಷ್ಣ ಮಾತನಾಡಿ, ‘ಶೇ 90ರಷ್ಟು ಅಧಿಕಾರಿಗಳು ಭ್ರಷ್ಟರಾಗಿದ್ದಾರೆ. ರಾಜಕಾರಣಿಗಳು ಹಾಗೂ ವಿದ್ಯುನ್ಮಾನ ಮಾಧ್ಯಮದಿಂದ ಸಮಾಜ ಹಾಳಾಗುತ್ತಿದೆ. ಜನಪರವಾಗಿ ಹೋರಾಟ ಮಾಡುವ ವೇದಿಕೆಗಳು ಸೃಷ್ಟಿಯಾದರೆ ಮಾತ್ರ ಬದಲಾವಣೆ ಸಾಧ್ಯ’ ಎಂದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್‌.ಆರ್‌.ಶೇಷಾದ್ರಿ, ‘ಕೇಂದ್ರ ಸರ್ಕಾರವು ಕೇವಲ ಲಾಭದ ಉದ್ದೇಶ ಹೊಂದಿದ್ದು, ಈ ದೇಶದ ಜನರ ಮೇಲೆ ಅನುಕಂಪವಾಗಲಿ, ಮಾನವೀಯತೆಯನ್ನಾಗಲಿ ಹೊಂದಿಲ್ಲ. ಬರೀ ಭ್ರಮ ಹುಟ್ಟಿಸಿದ್ದು, ನೈಜ ಸಮಸ್ಯೆ ಬಗೆಹರಿಸುತ್ತಿಲ್ಲ’ ಎಂದು ನುಡಿದರು.

ಉದ್ಯಮಿ ಸುರೇಶ್‌ ಕುಮಾರ್‌ ಜೈನ್‌, ‘ಜಿಲ್ಲೆಯಲ್ಲಿ ಶೇ 40ರಷ್ಟು ಕೈಗಾರಿಕೆಗಳು ಮುಚ್ಚಿದ್ದು, ಶೇ 30ರಷ್ಟು ಕೈಗಾರಿಕೆಗಳು ರೋಗಗ್ರಸ್ತವಾಗಿವೆ. ಹೆಚ್ಚಿನ ಕಾರ್ಖಾನೆಗಳ ಉತ್ಪಾದನಾ ಸಾಮರ್ಥ್ಯ ತಗ್ಗಿದ್ದು, ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ತಿಳಿಸಿದರು.

ಪಿಯುಸಿಎಲ್‌ನ ಕುಮಾರ್‌, ‘ಕೇಂದ್ರ ಸರ್ಕಾರದ ಏಕೈಕ ಕಾರ್ಯಸೂಚಿ ದೇಶದಲ್ಲಿ ಹಿಂದುತ್ವ ಸ್ವಾಪಿಸುವುದೇ ಆಗಿದೆ. ಎಲ್ಲವೂ ಆರ್‌ಎಸ್‌ಎಸ್‌ ಹಿಡಿತದಲ್ಲಿವೆ’ ಎಂದು ಆರೋಪಿಸಿದರು.

ಸಮಾಜವಾದಿ ಪ.ಮಲ್ಲೇಶ್‌, ನಿವೃತ್ತ ಮೇಜರ್‌ ಜನರಲ್‌ ಎಸ್‌.ಜಿ.ಒಂಬತ್ಕೆರೆ, ಸಿಪಿಐ ಪಕ್ಷದ ವಿಜಯಕುಮಾರ್‌, ಪಿಯುಸಿಎಲ್‌ನ ರಾಜ್ಯ ಸಂಚಾಲಕ ವಿ.ಎನ್.ಲಕ್ಷ್ಮಿನಾರಾಯಣ ಮಾತನಾಡಿದರು.

ಪ್ರತಿಕ್ರಿಯಿಸಿ (+)