ಸೋಮವಾರ, ಜೂನ್ 14, 2021
22 °C
ಮೈಸೂರಿನಲ್ಲಿ ತ್ರಿ ಶತಕ ದಾಟಿದ ಕೋವಿಡ್‌–19 ಸಾವು: ಭಾನುವಾರ 620 ಜನರಿಗೆ ಸೋಂಕು

ಮೈಸೂರು: ಐದಂಕಿ ತಲುಪಿದ ಸೋಂಕಿತರ ಸಂಖ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಭಾನುವಾರ ಐದಂಕಿ ತಲುಪಿದೆ. ಇದರ ಬೆನ್ನಿಗೆ ಪೀಡಿತರ ಸಾವಿನ ಸಂಖ್ಯೆಯೂ ತ್ರಿಶತಕ ದಾಟಿದೆ. ರಾಜಧಾನಿ ಬೆಂಗಳೂರು ಹೊರತು ಪಡಿಸಿದರೆ, ಮೈಸೂರು ಜಿಲ್ಲೆಯಲ್ಲೇ ಹೆಚ್ಚಿನ ಸಾವು ಸಂಭವಿಸಿವೆ.

620 ಜನರು ಹೊಸದಾಗಿ ಸೋಂಕು ಪೀಡಿತರಾಗಿದ್ದಾರೆ. 386 ಮಂದಿಯಷ್ಟೇ ಗುಣಮುಖರಾಗಿ ಮನೆಗೆ ಮರಳಿ, ಹೋಂ ಕ್ವಾರಂಟೈನ್ ಆಗಿದ್ದಾರೆ. ಗುಣಮುಖರಿಗಿಂತ ಸೋಂಕಿತರ ಸಂಖ್ಯೆಯೇ ಹೆಚ್ಚಿದೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಭಾನುವಾರ 10,535ಕ್ಕೆ ತಲುಪಿದೆ. ಗುಣಮುಖರ ಸಂಖ್ಯೆಯೂ 6,475 ಆಗಿದೆ. 3756 ಜನರು ಕೋವಿಡ್–19ಗೆ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಹೆಚ್ಚಿದೆ. ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಆರೋಗ್ಯ ಇಲಾಖೆಯ ಪ್ರಕಟಣೆ 10 ಜನರ ಸಾವನ್ನು ದೃಢಪಡಿಸಿದೆ. ಇವರಲ್ಲಿ 9 ಪುರುಷರಿದ್ದರೆ, ಒಬ್ಬರು ಮಹಿಳೆಯರು. ಈ ಎಲ್ಲರೂ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಜೊತೆಗೆ ವಿವಿಧ ಅನಾರೋಗ್ಯಕ್ಕೀಡಾಗಿದ್ದವರು ಎಂಬುದನ್ನು ತಿಳಿಸಿದೆ. 46 ವರ್ಷದಿಂದ 80 ವರ್ಷದವರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 304 ಆಗಿದೆ.

ವಿವಿಧೆಡೆ ಚಿಕಿತ್ಸೆ ಪಡೆಯುತ್ತಿರುವ 3,756 ಜನರಲ್ಲಿ 243 ಮಂದಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ, 1,055 ಜನರು ಕೋವಿಡ್ ಕೇರ್ ಸೆಂಟರ್‌ನಲ್ಲಿ ಆರೈಕೆಯಲ್ಲಿದ್ದಾರೆ. 97 ಮಂದಿ ಹೆಲ್ತ್‌ ಕೇರ್‌ ಸೆಂಟರ್‌ಗೆ ದಾಖಲಾಗಿದ್ದಾರೆ.

ಮನೆಯಲ್ಲೇ 2,087 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ತಮ್ಮ ನಿವಾಸಗಳಲ್ಲೇ ಐಸೊಲೇಷನ್‌ ಆಗುವವರ ಸಂಖ್ಯೆ ಮತ್ತೆ ತುಸು ಹೆಚ್ಚಿದೆ. 137 ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದು, 137 ಜನರು ಖಾಸಗಿ ಕೋವಿಡ್ ಕೇರ್ ಸೆಂಟರ್‌ಗೆ ಆರೈಕೆಗಾಗಿ ದಾಖಲಾಗಿದ್ದಾರೆ. ಈ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂಬುದು ಜಿಲ್ಲಾಡಳಿತದ ಅಂಕಿ–ಅಂಶಗಳಿಂದ ತಿಳಿದು ಬಂದಿದೆ.

ಆ್ಯಂಟಿಜನ್ ರ‍್ಯಾಪಿಡ್‌ ಟೆಸ್ಟ್ ಇಂದು

ಜಿಲ್ಲಾ ಆರೋಗ್ಯ ಇಲಾಖೆ ಆ.17ರ ಸೋಮವಾರ ನಗರವೂ ಸೇರಿದಂತೆ, ಜಿಲ್ಲೆಯ ವಿವಿಧೆಡೆ ಕೋವಿಡ್-19 ಆ್ಯಂಟಿಜನ್ ರ‍್ಯಾಪಿಡ್‌ ತಪಾಸಣಾ ಶಿಬಿರ ಆಯೋಜಿಸಿದೆ.

ಮೈಸೂರಿನ ಟೌನ್‌ಹಾಲ್‌, ಉದಯಗಿರಿಯ ಕೂಬಾ ಸ್ಕೂಲ್, ಹೆಬ್ಬಾಳದ ಸಿಐಟಿಬಿ ಕಲ್ಯಾಣ ಮಂಟಪ, ಮಾನಸ ಗಂಗೋತ್ರಿಯ ಬಯಲು ರಂಗಮಂದಿರ, ರಾಜೀವ್‌ ನಗರದ ಆಲ್‌ ಕರೀಮ್ ಶಾಲೆ ಆವರಣದಲ್ಲಿ ಕೋವಿಡ್–19 ತಪಾಸಣೆಗಾಗಿ ಸಾರ್ವಜನಿಕರಿಂದ ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಮೈಸೂರು ಮಕ್ಕಳ ಕೂಟ, ಕುರುಬಾರಹಳ್ಳಿ ವೃತ್ತದ ಬಳಿಯ ಆಸ್ಪತ್ರೆ, ಎನ್‌.ಎಚ್‌.ಪಾಳ್ಯದ ಸರ್ಕಾರಿ ಆಸ್ಪತ್ರೆ, ಉದ್ಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ, ಬೆಳವಾಡಿ ಶಾಲೆಯ ಆವರಣದಲ್ಲೂ ಪರೀಕ್ಷೆ ನಡೆಯಲಿದೆ.

ಕೋವಿಡ್‌ ಅಂಕಿ–ಅಂಶ

ಜಿಲ್ಲೆಯಲ್ಲಿ ಒಟ್ಟು–10,535, ಸಕ್ರಿಯ ಪ್ರಕರಣ–3,756, ಗುಣಮುಖ–6,475, ಸಾವು–304

ದಿನದ ಏರಿಕೆ–620, ಗುಣಮುಖ–386, ಸಾವು–10

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು