ಮಂಗಳವಾರ, ನವೆಂಬರ್ 24, 2020
22 °C
ಮೈಸೂರು ನಗರಕ್ಕೆ ಹೊಂದಿಕೊಂಡಂತಿದ್ದ ಗ್ರಾಮ ಪಂಚಾಯಿತಿಗಳು ಮೇಲ್ದರ್ಜೆಗೆ: ಪ.ಪಂ, ನಗರಸಭೆ ಸ್ಥಾನಮಾನ

ಬೃಹತ್ ಮೈಸೂರು ಮಹಾನಗರ ಪಾಲಿಕೆಗೆ ಮುನ್ನುಡಿ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಗುರು ವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೈಸೂರು ಸುತ್ತಮುತ್ತಲಿನ ಗ್ರಾಮಗಳ ಜನರ ಬಹು ವರ್ಷಗಳ ಬೇಡಿಕೆಗೆ ಹಸಿರು ನಿಶಾನೆ ದೊರೆತಿದೆ.

ಮೈಸೂರಿಗೆ ಹೊಂದಿಕೊಂಡಂತೆ, ರಿಂಗ್‌ ರಸ್ತೆಯ ಒಳಭಾಗ ಹಾಗೂ ಹೊರಭಾಗದಲ್ಲಿರುವ ಕೆಲವು ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೇ ರಿಸುವ ಪ್ರಸ್ತಾವಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, ಈ ಭಾಗದ ಜನರಲ್ಲಿ ಹರ್ಷವನ್ನುಂಟು ಮಾಡಿದೆ.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೊಳಪಡುವ ಹಿನಕಲ್‌, ಕೂರ್ಗಳ್ಳಿ, ಬೆಳವಾಡಿ, ಹೂಟಗಳ್ಳಿ ಗ್ರಾಮಗಳನ್ನು ಒಳಗೊಂಡಂತೆ ಹೂಟಗಳ್ಳಿ ನಗರಸಭೆ ರಚನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಇದರ ಜೊತೆಯಲ್ಲೇ ಬೋಗಾದಿ, ಶ್ರೀರಾಂಪುರ, ಕಡಕೋಳ, ರಮ್ಮನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಗಳನ್ನಾಗಿ ಮೇಲ್ದರ್ಜೆಗೇರಿಸಲು ಸಹ ಅನುಮೋದನೆ ನೀಡಿದೆ.

ಈ ಬೆಳವಣಿಗೆ ಭವಿಷ್ಯದಲ್ಲಿ ಬೃಹತ್ ಮೈಸೂರು ಮಹಾನಗರ ಪಾಲಿಕೆ ರಚನೆಗೆ ಮುನ್ನುಡಿ ಬರೆಯಲಿದೆ ಎನ್ನಲಾಗಿದೆ.

ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲ್ಲ: ಗ್ರಾಮ ಪಂಚಾಯಿತಿ ಚುನಾವಣೆಗೆ ಸಕಲ ಸಿದ್ಧತೆ ಪೂರ್ಣಗೊಂಡಿವೆ. ಡಿಸೆಂಬರ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಹೆಚ್ಚಿದೆ. ಆದರೆ ಇದೀಗ ಮೇಲ್ದರ್ಜೆಗೇರಿದ ಯಾವೊಂದು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಚುನಾವಣೆ ನಡೆಯಲ್ಲ ಎಂಬುದನ್ನು ಮೂಲಗಳು ಖಚಿತ ಪಡಿಸಿವೆ.

ಈ ಗ್ರಾಮ ಪಂಚಾಯಿತಿಗಳಲ್ಲಿ ಚುನಾವಣೆ ನಡೆದರೆ, ಆಯ್ಕೆಯಾದ ಸದಸ್ಯರು ತಮ್ಮ ಅಧಿಕಾರ ಹೋಗುತ್ತದೆ ಎಂಬ ಭಯಕ್ಕೆ ನ್ಯಾಯಾಲಯದ ಮೊರೆ ಹೋಗುತ್ತಾರೆ. ಆಗ ಇಡೀ ಪ್ರಕ್ರಿಯೆ ನನೆಗುದಿಗೆ ಬೀಳುತ್ತದೆ. ಇದರಿಂದ ಪಟ್ಟಣ ಪಂಚಾಯಿತಿ, ನಗರಸಭೆ ರಚನೆಗೆ ಹಿನ್ನಡೆಯಾ
ಗುತ್ತದೆ ಎಂಬ ಕಾರಣದಿಂದ ತರಾತುರಿ ಯಲ್ಲಿ ಸಚಿವ ಸಂಪುಟದ ಅನುಮೋದನೆ ಪಡೆದುಕೊಳ್ಳಲಾಗಿದೆ ಎಂಬುದು ಗೊತ್ತಾಗಿದೆ. ಸಚಿವ–ಸಂಸದರ ಆಪ್ತ ವಲಯ ಇದನ್ನು ಖಚಿತ ಪಡಿಸಿದೆ.

ಕೊನೆ ಕ್ಷಣದ ಸೇರ್ಪಡೆ

ಮೈಸೂರಿಗೆ ಹೊಂದಿಕೊಂಡಂತಿರು ವ ಕೆಲವೊಂದು ಗ್ರಾಮ ಪಂಚಾಯಿತಿಗಳನ್ನು ಮಹಾನಗರ ಪಾಲಿಕೆಗೆ ಸೇರ್ಪಡೆಗೊಳಿಸಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ, ಸಂಸದ ಪ್ರತಾಪಸಿಂಹ ಹರಸಾಹಸ ನಡೆಸಿದ್ದರು. ಶಾಸಕ–ಸಂಸದರ ಕಸರತ್ತಿಗೆ ಪಾಲಿಕೆ ಆಡಳಿತ ಸಾಥ್ ನೀಡದೆ ಹಗ್ಗಜಗ್ಗಾಟ ನಡೆಸಿತ್ತು. ಇದು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು.

ಗ್ರಾಮ ಪಂಚಾಯಿತಿಗಳಿಗೆ ವಾರ್ಡ್‌ವಾರು ಮೀಸಲಾತಿ ಈಗಾಗಲೇ ನಿಗದಿಯಾಗಿತ್ತು. ಶೀಘ್ರದಲ್ಲೇ ಚುನಾವಣೆ ನಡೆದರೆ, ಇನ್ನೈದು ವರ್ಷ ಇವುಗಳ ಸೇರ್ಪಡೆಯನ್ನು ಮುಂದೂಡಬಹುದು ಎಂಬ ಲೆಕ್ಕಾಚಾರ ಪಾಲಿಕೆಯ ಬಹುತೇಕ ಸದಸ್ಯರದ್ದಾಗಿತ್ತು. ಇದಕ್ಕಾಗಿಯೇ ಕೌನ್ಸಿಲ್‌ ಸಭೆಯಲ್ಲಿ ಅಡ್ಡಿಪಡಿಸಿದರು. ಶಾಸಕರ ಯತ್ನ ಫಲಿಸದಂತೆ ನೋಡಿಕೊಂಡಿದ್ದರು. ಇದರಲ್ಲಿ ಜೆಡಿಎಸ್‌ನೊಳಗಿನ ಮುಸುಕಿನ ಗುದ್ದಾಟವೂ ಸೇರಿಕೊಂಡಿತ್ತು.

ಈ ವಿದ್ಯಮಾನ ಅನುಭವಿ, ಹಿರಿಯ ರಾಜಕಾರಣಿ ಜಿ.ಟಿ.ದೇವೇಗೌಡರಿಗೆ ಹಿನ್ನಡೆ ಸೃಷ್ಟಿಸಿತ್ತು. ಇದನ್ನು ಸರಿಪಡಿ ಸಿಕೊಳ್ಳಲಿಕ್ಕಾಗಿಯೇ ಸಂಸದ ಪ್ರತಾಪ ಸಿಂಹ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಜೊತೆಗೂಡಿ ಜಿಟಿಡಿ ಕಾರ್ಯತಂತ್ರ ರೂಪಿಸಿದ್ದರು.

ಮುಂದಿನ ವಾರ ಯಾವ ದಿನವಾದರೂ ಗ್ರಾಮ ಪಂಚಾಯಿತಿ ಚುನಾವಣೆಗೆ ಅಧಿಸೂಚನೆ ಪ್ರಕಟಗೊಳ್ಳಬಹುದು ಎಂಬುದು ಗೊತ್ತಾಗುತ್ತಿದ್ದಂತೆ, ಸಚಿವ ಸಂಪುಟ ಸಭೆಯ ಕಾರ್ಯಸೂಚಿಯಲ್ಲಿ ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆ ಗೇರಿಸುವ ಪ್ರಸ್ತಾವ ಇಲ್ಲದಿದ್ದರೂ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಮೂಲಕ ಕೊನೆ ಕ್ಷಣದಲ್ಲಿ ಸೇರ್ಪಡೆಗೊಳಿಸಿ, ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಲ್ಲಿ ಸಂಸದ ಪ್ರತಾಪ ಸಿಂಹ ಪಾತ್ರ ಬಹಳಷ್ಟಿದೆ ಎಂಬುದು ಮೂಲಗಳಿಂದ ಖಚಿತ ಪಟ್ಟಿದೆ.

‘ಈಡೇರಿದ ಬೇಡಿಕೆ’

‘ಒಳ್ಳೆಯ ಬೆಳವಣಿಗೆಯೊಂದು ನಡೆದಿದೆ. ಬಹು ವರ್ಷಗಳ ಬೇಡಿಕೆಗೆ ಮನ್ನಣೆ ಸಿಕ್ಕಿದೆ. ಈಗಾಗಲೇ ಆರ್ಥಿಕವಾಗಿ ಶ್ರೀಮಂತ ಪಂಚಾಯಿತಿ ಎಂಬ ಹೆಗ್ಗಳಿಕೆ ನಮ್ಮ ಕೂರ್ಗಳ್ಳಿ ಗ್ರಾಮ ಪಂಚಾಯಿತಿಯದ್ದಾಗಿತ್ತು. ಇದೀಗ ನಗರಸಭೆ ಆಗುವುದರಿಂದ ಕೇಂದ್ರ–ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ದೊರಕಲಿದೆ. ಜೊತೆಗೆ ಇಲ್ಲಿನ ಜನರಿಗೂ ಹಲವು ಸೌಲಭ್ಯ ದೊರಕಲಿವೆ’ ಎಂದು ಸ್ಥಳೀಯ ನಿವಾಸಿ, ಆಟೊ ಚಾಲಕ ರವಿ ತಿಳಿಸಿದರು.

‘ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳೇ ನಡೆಯುತ್ತಿರಲಿಲ್ಲ. ಅಧಿಕಾರಿಗಳು ಅಷ್ಟಕ್ಕಷ್ಟೇ, ಚುನಾಯಿತ ಸದಸ್ಯರೂ ಸ್ಪಂದಿಸುತ್ತಿರಲಿಲ್ಲ. ಇದೀಗ ನಮ್ಮೂರು ಸಹ ಹೂಟಗಳ್ಳಿ ನಗರಸಭೆ ವ್ಯಾಪ್ತಿಗೆ ಸೇರಲಿರುವು ದರಿಂದ ಅಭಿವೃದ್ಧಿಯ ಪರಿಕಲ್ಪನೆಯೇ ಬದಲಾಗಲಿದೆ’ ಎನ್ನುತ್ತಾರೆ ಬೆಳವಾಡಿಯ ದುರ್ಗೇಶ್‌.

‘ಯಾವುದೇ ಕೆಲಸ ಮಾಡುವಂತೆ ಪಂಚಾಯಿತಿ ಸಿಬ್ಬಂದಿ, ಸದಸ್ಯರಿಗೆ ಕೇಳಿದರೆ ಬರೀ ಸಬೂಬು ಹೇಳುತ್ತಿದ್ದರು. ನಗರಸಭೆ ಆಗಿದ್ದರಿಂದ ಹೆಚ್ಚಿನ ವಿದ್ಯಾವಂತ ಅಧಿಕಾರಿಗಳು ಇಲ್ಲಿಗೆ ಬರಲಿದ್ದಾರೆ. ಆಡಳಿತವೂ ಸುಗಮವಾಗಿ ನಡೆಯಲಿದೆ. ಸಮಸ್ಯೆಗೆ ಸ್ಪಂದನೆ ಸಿಗಲಿದೆ ಎಂಬ ನಿರೀಕ್ಷೆ ನನ್ನದಾಗಿದೆ’ ಎಂದು ಹೂಟಗಳ್ಳಿಯ ಸುರೇಶ್‌ ‘ಪ್ರಜಾವಾಣಿ’ಗೆ
ತಿಳಿಸಿದರು.

ಹೆಚ್ಚಿನ ಅನುದಾನಕ್ಕೆ ಅನುಕೂಲ: ಪ್ರತಾಪಸಿಂಹ

‘ಬೃಹತ್ ಮೈಸೂರು ಮಹಾನಗರ ಪಾಲಿಕೆ ರಚನೆಗೆ ಮುನ್ನುಡಿ ಬರೆಯಲಾ ಗಿದೆ. ಪಾಲಿಕೆಯ ವಿಸ್ತಾರ ಹೆಚ್ಚಿದಷ್ಟು ಕೇಂದ್ರ–ರಾಜ್ಯ ಸರ್ಕಾರದಿಂದ ಹೆಚ್ಚೆಚ್ಚು ಅನುದಾನ, ಪ್ರಮುಖ ಯೋಜನೆಗಳನ್ನು ಮೈಸೂರಿಗೆ ತರಬಹುದು. ಮೆಟ್ರೊ, ಮೊನೊ ರೈಲು ಸಂಚಾರ ಆರಂಭಕ್ಕೂ ಇದು ಪೂರಕವಾಗಲಿದೆ’ ಎಂದು ಸಂಸದ ಪ್ರತಾಪಸಿಂಹ ತಿಳಿಸಿದರು.

‘ಪೆರಿಫೆರಲ್ ರಿಂಗ್ ರೋಡ್‌ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ಕಬಿನಿ, ಕಾವೇರಿಯಿಂದ ಬೃಹತ್ ಮೈಸೂರಿಗೆ 24X7 ಕುಡಿಯುವ ನೀರು ಪೂರೈಸಲು ಪೂರಕವಾಗಲಿದೆ. ರಿಂಗ್‌ರೋಡ್‌ ಸುತ್ತಲೂ ಕಸ ಹಾಕುವುದಕ್ಕೆ ಮುಕ್ತಿ ಸಿಗಲಿದ್ದು, ಮೈಸೂರಿನ ಅಂದ ಮತ್ತಷ್ಟು ಹೆಚ್ಚಲಿದೆ. ಮೈಸೂರಿಗೆ ಹೊಂದಿಕೊಂಡಂತಿದ್ದ ಗ್ರಾಮಗಳಿಗೆ ಇನ್ಮುಂದೆ ಹೈಟೆಕ್‌ ಸ್ಪರ್ಶದ ಅಭಿವೃದ್ಧಿ ಸಿಗಲಿದೆ’ ಎಂದು ಅವರು ಹೇಳಿದರು.

‘ಅಭಿವೃದ್ಧಿಗೆ ಅನಿವಾರ್ಯ’

‘ಮೇಲ್ದರ್ಜೆಗೇರಿದ ಗ್ರಾಮ ಪಂಚಾಯಿತಿಗಳನ್ನು ಮೈಸೂರು ಮಹಾನಗರ ಪಾಲಿಕೆಗೆ ಸೇರ್ಪಡೆಗೊಳಿಸಲು ಸಂಸದರ ಜೊತೆ ಹಲವು ಕಸರತ್ತು ನಡೆಸಿದೆ. ಪಾಲಿಕೆ ಆಡಳಿತ ಆಸ್ಪದ ಕೊಡಲಿಲ್ಲ. ನಮಗೂ ಅನಿವಾರ್ಯವಾಗಿತ್ತು. ಆದ್ದರಿಂದ ಎಲ್ಲರ ಸಹಕಾರದಿಂದ ಪಟ್ಟಣ ಪಂಚಾಯಿತಿಗಳಾಗಿ, ನಗರಸಭೆಯಾಗಿ ಮೇಲ್ದರ್ಜೆಗೇರಿಸಲಾಗಿದೆ’ ಎಂದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಇದೀಗ ಮೇಲ್ದರ್ಜೆಗೇರಿದ ಬಹುತೇಕ ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿನ ಸ್ವಚ್ಛತೆಯ ಮೇಲುಸ್ತುವಾರಿ ನೋಡಿಕೊಳ್ಳ
ಲಾಗುತ್ತಿರಲಿಲ್ಲ. ಕುಡಿಯುವ ನೀರು ಪೂರೈಸುವಷ್ಟು ಶಕ್ತಿ ಹೊಂದಿರಲಿಲ್ಲ. ಇನ್ಮುಂದೆ ಇಲ್ಲಿನ ಅಭಿವೃದ್ಧಿಯ ಚಿತ್ರಣವೇ ಬದಲಾಗಲಿದೆ.
ಈ ಹಾದಿಯಲ್ಲಿ ಸಾಕಷ್ಟು ಕಸರತ್ತು ನಡೆಸಬೇಕಾಯಿತು. ಸಚಿವ ಸಂಪುಟದ ಸದಸ್ಯರೆಲ್ಲರಿಗೂ ಕೃತಜ್ಞತೆ ಸಲ್ಲಿಸುವೆ’ ಎಂದು ಜಿ.ಟಿ.ದೇವೇಗೌಡ ಹೇಳಿದರು.

ನಗರಸಭೆ/ಪಟ್ಟಣ ಪಂಚಾಯಿತಿ ವ್ಯಾಪ್ತಿಗೊಳಪಡುವ ಗ್ರಾಮಗಳು

* ಹೂಟಗಳ್ಳಿ ನಗರಸಭೆ

ಹೂಟಗಳ್ಳಿ, ಹಿನಕಲ್, ಬೆಳವಾಡಿ, ಕೂರ್ಗಳ್ಳಿ

* ಬೋಗಾದಿ ಪಟ್ಟಣ ಪಂಚಾಯಿತಿ

ಬೋಗಾದಿ, ದಾಸನಕೊಪ್ಪಲು, ಮರಟಿಕ್ಯಾತನಹಳ್ಳಿ, ಕೆ.ಹೆಮ್ಮನಹಳ್ಳಿ, ಗಾಣಿಗರಹುಂಡಿ, ಸಾಹುಕಾರಹುಂಡಿ, ಬಸವನಪುರ, ಕೇರ್ಗಳ್ಳಿ, ಬಡಗಲಹುಂಡಿ

* ಶ್ರೀರಾಂಪುರ ಪಟ್ಟಣ ಪಂಚಾಯಿತಿ

ಶ್ರೀರಾಂಪುರ, ಮಹದೇವಪುರ, ಪರಸಯ್ಯನಹುಂಡಿ, ಲಿಂಗಾಬೂದಿಪಾಳ್ಯ, ಕೊಪ್ಪಲೂರು, ಕಳಲವಾಡಿ, ಗುರೂರು, ರಮಾಬಾಯಿ ನಗರ ಹಾಗೂ ಶ್ರೀರಾಂಪುರ‌ ಗ್ರಾಮ ಪಂಚಾಯಿತಿ ವ್ಯಾಪ್ತಿ

* ಕಡಕೊಳ ಪಟ್ಟಣ ಪಂಚಾಯಿತಿ

ಕಡಕೊಳ ಮತ್ತು ಹೊಸಹುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು

* ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ

ರಮ್ಮನಹಳ್ಳಿ, ಕಾಳಿಸಿದ್ದನಹುಂಡಿ, ಹಂಚ್ಯಾ, ಸಾತಗಳ್ಳಿ, ಭಾರತನಗರ, ಆಲನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಡನಹಳ್ಳಿ ಹಾಗೂ ರಿಂಗ್ ರಸ್ತೆಯ ಹೊರಗೆ ಬರುವ‌ ಆಲನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.