ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಿಗೆ ಪ್ರತ್ಯೇಕ ವಿಶಾಲ ಜಾಗ, ಮಾಲಿನ್ಯ ತಡೆಗಟ್ಟುವುದೇ ಗುರಿ

Last Updated 10 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ನಿಮ್ಮ ಗೆಲುವಿಗೆ ಕಾರಣ ಏನು?

ಕಳೆದ 40 ವರ್ಷಗಳಿಂದ ವಾರ್ಡಿನಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿರುವುದು ಬಹುಮುಖ್ಯ ಕಾರಣ. ವಿಜಯಶಂಕರ್ ಅವರು ಸಂಸದರಾಗಿದ್ದಾಗ ಅವರ ಸಂಸದರ ನಿಧಿ ತಂದು ವಿವಿಧ ಸಮುದಾಯಗಳಿಗೆ ಸೇರಿದ 4 ಸಮುದಾಯ ಭವನ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದು ಜನರಲ್ಲಿ ಬೆರೆಯಲು ಕಾರಣವಾಯಿತು. ಬಿಜೆಪಿ ಪಕ್ಷವು ವಿವಿಧ ಮಟ್ಟಗಳಲ್ಲಿ ಜವಾಬ್ದಾರಿ ವಹಿಸಿತು. ಈ ಬಾರಿ ಜನರೇ ಚುನಾವಣೆಗೆ ನಿಲ್ಲಲು ಒತ್ತಾಯಿಸಿದರು. ನನ್ನ ಎದುರು ಸ್ಪರ್ಧಿಸಿದ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಬೇರೆ ವಾರ್ಡಿಗೆ ಸೇರಿದವರಾಗಿದ್ದರು. ಇವೆಲ್ಲವೂ ಗೆಲುವಿಗೆ ಕಾರಣವಾಯಿತು.

ವಾರ್ಡಿನಲ್ಲಿ ಸಮಸ್ಯೆಗಳಿವೆಯೇ?

ಒಳಚರಂಡಿ ಸಮಸ್ಯೆ ವಿಪರೀತ ಇದೆ. 3 ಸಾವಿರ ಜನಸಂಖ್ಯೆ ಇದ್ದಾಗ ಮಾಡಿದ ಒಳಚರಂಡಿ ಪೈಪುಗಳು 12 ಸಾವಿರ ಜನರ ಒತ್ತಡವನ್ನು ಹೇಗೆ ತಾನೇ ಸಹಿಸಲು ಸಾಧ್ಯ? ರಸ್ತೆಗಳು ಸ್ವಲ್ಪ ಹಾಳಾಗಿವೆ. ಗುಜರಿಯಿಂದ ಜನಸಾಮಾನ್ಯರಿಗೆ ಕಿರಿಕಿರಿಯಾಗುತ್ತಿದೆ. ಭಾರಿ ಭಾರ ಹೊತ್ತ ವಾಹನಗಳ ಓಡಾಟದಿಂದ ಕುಡಿಯುವ ನೀರು ಹಾಗೂ ಒಳಚರಂಡಿ ಪೈಪುಗಳು ಒಡೆದು ಹೋಗುತ್ತಿವೆ. ಪರಿಸರ ಮಾಲಿನ್ಯ ಹೆಚ್ಚಿದೆ.

ನಿಮ್ಮ ಕನಸುಗಳೇನು?

ಗುಜರಿಯನ್ನು ಬೇರೆಡೆ ವಿಶಾಲವಾದ ಪ್ರದೇಶಕ್ಕೆ ಸ್ಥಳಾಂತರ ಮಾಡುವುದೇ ಮುಂದಿನ ಗುರಿ. ಸದ್ಯ, ಈಗ ಇರುವ ಜಾಗದಲ್ಲಿ ಅಂಗಡಿಗಳು ಚಿಕ್ಕದಾಗಿವೆ. ವ್ಯಾಪಾರಸ್ಥರಿಗೆ ಅನಾನುಕೂಲವಾಗಿದೆ. ಬೇರೆಡೆ ಸೂಕ್ತ ಜಾಗದಲ್ಲಿ ವಿಶಾಲವಾದ ಜಾಗ ನೀಡಿದರೆ ಅವರ ವ್ಯಾಪಾರಕ್ಕೆ ಅನುಕೂಲವಾಗುತ್ತದೆ. ಸರಕು ಸಾಗಣೆ ವಾಹನಗಳ ಹೆಚ್ಚಿನ ಓಡಾಟದಿಂದ ಸಾರ್ವಜನಿಕರಿಗೆ ಆಗುತ್ತಿರುವ ಕಿರಿಕಿರಿಯನ್ನು ತಪ್ಪಿಸಬಹುದು. ಚಿನ್ನ, ಬೆಳ್ಳಿ ಕರಗಿಸುವವರು ಪರಿಸರಕ್ಕೆ ಹಾನಿಯಾಗಬಲ್ಲ ಆಸಿಡ್‌ಅನ್ನು ಬಳಸುತ್ತಿದ್ದಾರೆ. ಇದನ್ನು ಪರಿಸರಕ್ಕೆ ಹಾಗೆಯೇ ಬಿಡುತ್ತಿರುವುದರಿಂದ ಪರಿಸರ ಮಾಲಿನ್ಯವಾಗುತ್ತಿದೆ. ಇದನ್ನು ತಪ್ಪಿಸುವ ಕನಸು ಇದೆ. ಇನ್ನು ವಾರ್ಡಿನಲ್ಲಿ 6 ಪ್ರಮುಖ ಉದ್ಯಾನಗಳಿವೆ. ಇವುಗಳನ್ನು ದುರಸ್ತಿಗೊಳಿಸಬೇಕು. ವ್ಯಾಯಾಮಶಾಲೆ ತೆರೆಯಬೇಕು ಎಂಬ ಕನಸೂ ಇದೆ.

ಇವುಗಳನ್ನು ಹೇಗೆ ಸಾಕಾರಗೊಳಿಸುವಿರಿ?

ಉದ್ಯಾನದ ಅಭಿವೃದ್ಧಿಗೆ, ರಸ್ತೆ ದುರಸ್ತಿಗೆ ಪಾಲಿಕೆ ಅನುದಾನ. ಹೆಚ್ಚಿನ ಅಭಿವೃದ್ಧಿಗೆ ಸಂಸದರು ಹಾಗೂ ಶಾಸಕರ ನಿಧಿ. ಇನ್ನು ಗುಜರಿ ಸ್ಥಳಾಂತರ ಹಾಗೂ ಪರಿಸರ ಮಾಲಿನ್ಯ ತಡೆಗೆ ಪಾಲಿಕೆಯಲ್ಲಿ ನಿರಂತರವಾದ ಹೋರಾಟ. ಉದಾಹರಣೆಗೆ, ಕಳೆದ ಬಾರಿ ಕೌನ್ಸಿಲ್‌ನಲ್ಲಿ ವಾರ್ಡಿನ ಮಹತ್ವದ ವಿಚಾರವೊಂದನ್ನು ಪ್ರಸ್ತಾಪಿಸಿದೆ. ಅಂಗಡಿ ಕಟ್ಟಡದ ಮಾಲೀಕರು ಕಂದಾಯ ಪಾವತಿಸದೇ ಇದ್ದರೆ ಬಾಡಿಗೆಗೆ ಇರುವ ಅಂಗಡಿ ಮಾಲೀಕರ ವ್ಯಾಪಾರ ಪರವಾನಗಿಯನ್ನು ಪಾಲಿಕೆ ಅಧಿಕಾರಿಗಳು ನವೀಕರಣ ಮಾಡುತ್ತಿರಲಿಲ್ಲ. ಈ ವಿಷಯವನ್ನು ಪ್ರಸ್ತಾಪಿಸಿದೆ. ಸಮಸ್ಯೆ ಬಗೆಹರಿಸುವ ಆಶ್ವಾಸನೆ ದೊರಕಿದೆ. ಹೀಗೆ, ವಾರ್ಡಿನ ಸಮಸ್ಯೆಗಳ ಕುರಿತು ಕೌನ್ಸಿಲ್‌ನಲ್ಲಿ ನಿರಂತರವಾಗಿ ಪ್ರಸ್ತಾಪಿಸುತ್ತೇನೆ.‌

ವಾರ್ಡಿನ ಪುನರ್‌ವಿಂಗಡನೆಯಿಂದ ಸಮಸ್ಯೆಗಳಾಗಿವೆಯಾ?

ಖಂಡಿತ ಹಾಗಿದೆ. ಮುಖ್ಯವಾಗಿ, ಅಧಿಕಾರಿಗಳಿಗೆ ಇದು ಯಾವ ವಲಯ ಕಚೇರಿಗೆ ಸೇರುತ್ತದೆ ಎಂಬುದರ ಸ್ಪಷ್ಟ ಕಲ್ಪನೆ ಇಲ್ಲ. ಇನ್ನು ಜನಸಾಮಾನ್ಯರ ‍ಪಾಡು ಹೇಗಾಗಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT