ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಡ್ಡಿ ಪಾವತಿಗೆ ಪರದಾಡುತ್ತಿರುವ ಸರ್ಕಾರ’

ಜಿಲ್ಲಾ ಸಾಹಿತ್ಯ ಭವನದಲ್ಲಿ ಎಸ್.ನಿಜಲಿಂಗಪ್ಪ ಒಂದು ನೆನಪು ಕಾರ್ಯಕ್ರಮ
Last Updated 5 ಜನವರಿ 2021, 6:40 IST
ಅಕ್ಷರ ಗಾತ್ರ

ಮೈಸೂರು: ಸಾಲದ ಬಡ್ಡಿ ಪಾವತಿಸಲೂ ಕೇಂದ್ರ ಮತ್ತು ಎಲ್ಲ ರಾಜ್ಯ ಸರ್ಕಾರಗಳು ಪರದಾಡುತ್ತಿದ್ದು, ಇನ್ನೂ 2ರಿಂದ 3 ವರ್ಷಗಳ ಕಾಲ ಯಾವುದೇ ಅಭಿವೃದ್ಧಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ನಿವೃತ್ತ ಡಿಜಿಪಿ ಶಂಕರ ಬಿದರಿ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಡಾ.ಕೆ.ಎಸ್.ಗೌಡಯ್ಯ ಪ್ರತಿಷ್ಠಾನದ ವತಿಯಿಂದ ಇಲ್ಲಿನ ಜಿಲ್ಲಾ ಸಾಹಿತ್ಯ ಭವನದಲ್ಲಿ ಸೋಮವಾರ ನಡೆದ ‘ನವ ಕರ್ನಾಟಕ ಶಿಲ್ಪಿ ಎಸ್.ನಿಜಲಿಂಗಪ್ಪ ಒಂದು ನೆನಪು ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ಅಭಿನಂದನೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‌

ವಿವಿಧ ಪಿಂಚಣಿ ಯೋಜನೆಗಳಡಿ ಪಾವತಿಸಬೇಕಾದ ಹಣವನ್ನು ಬಾಕಿ ಉಳಿಸಿಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಸಹಾಯಧನ ನೀಡುತ್ತಿವೆ. ಹಾಗೆ ನೋಡಿದರೆ, ಕೃಷಿಯು ಕೇಂದ್ರ ಸರ್ಕಾರದ ವಿಷಯವೇ ಅಲ್ಲ. ಹಣ ಕೊಡುವುದನ್ನು ಬಿಟ್ಟು ಪ್ರತಿ ಕುಟುಂಬಕ್ಕೊಂದು ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.

’ಶಾಸಕರು ಮತ್ತು ಸಚಿವರಿಗೆ ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಬಿಟ್ಟು ಬೇರೆ ಕ್ಷೇತ್ರದ ಸಮಸ್ಯೆಗಳ ಅರಿವಿಲ್ಲ. ಇತ್ತೀಚೆಗೆ ಬಂದ ಎಲ್ಲ ಮುಖ್ಯಮಂತ್ರಿಗಳು ಹೆಚ್ಚಿನ ಹಣವನ್ನು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ನೀಡಿದರು. ಆದರೆ, ನಿಜಲಿಂಗಪ್ಪ ಅವರು ಎಂದೂ ಈ ರೀತಿ
ತಮ್ಮ ಸ್ವಂತ ಕ್ಷೇತ್ರದ ಕಡೆಗೆ ಪಕ್ಷಪಾತ ಮಾಡಲಿಲ್ಲ. ಇಂತಹ ರಾಜಕಾರಣಿಗಳು ಈಗ ವಿರಳಾತಿವಿರಳ’
ಎಂದರು.

ಪ್ರತಿ ಚುನಾವಣೆಯಲ್ಲೂ ಹಣದ ಹೊಳೆಯೇ ಹರಿಯುತ್ತದೆ. ಉಪಚುನಾವಣೆಗಳಲ್ಲಿಯಂತೂ ₹ 50ರಿಂದ ₹ 100 ಕೋಟಿ ವ್ಯಯಿಸಲಾಗುತ್ತಿದೆ. ಮತದಾರರು ಅಪ್ರಮಾಣಿಕರಾಗಿರುವುದರಿಂದಲೇ ಇಂತಹ ಸ್ಥಿತಿಗೆ ತಲುಪಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಹೋರಾಟಗಾರರಾದ ವೈ.ಸಿ.ರೇವಣ್ಣ, ಎಂ.ಸೋಮಶೇಖರಯ್ಯ, ಪಿ.ಲಿಂಗಯ್ಯ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.

ವಿಧಾನಪರಿಷತ್ತಿನ ಮಾಜಿ ಸದಸ್ಯ ಎಂ.ಪಿ.ನಾಡಗೌಡ, ಶಾಸಕ ಎಲ್.ನಾಗೇಂದ್ರ, ಡಾ.ಕೆ.ಎಸ್.ಗೌಡಯ್ಯ ಪ್ರತಿಷ್ಠಾನದ ಅಧ್ಯಕ್ಷ ಜಿ.ಪ್ರಕಾಶ್, ಕನ್ನಡ ಸಾಹಿತ್ಯ ಪರಿಷತ್ತಿನ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಪ್ರಧಾನ ಸಂಚಾಲಕ ಮೂಗೂರು ನಂಜುಂಡಸ್ವಾಮಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಅಧ್ಯಕ್ಷ ಕೆ.ಎಸ್.ಶಿವರಾಮು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT