ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಬೆಯ ಮೂಷಿಕ ಭೋಜನ

Last Updated 26 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಮೊನ್ನೆ ಸಂಜೆ ನನ್ನ ಡಿ.ಟಿ.ಪಿ ಸ್ನೇಹಿತರು ಕರೆ ಮಾಡಿ ‘ಆರು ಗಂಟೆಯ ಹೊತ್ತಿಗೆ ಮನೆಗೆ ಬನ್ನಿ ನಿಮ್ಮ ಲೇಖನವನ್ನು ಡಿ.ಟಿ.ಪಿ ಮಾಡಿ ಆಗಿದೆ’ ಎಂದು ಹೇಳಿದರು. ಆ ಕಾರಣ ಸಂಜೆಯ ವಾಯುವಿಹಾರಕ್ಕೆ ರಜೆ ಹಾಕಿ ಅವರ ಬಡಾವಣೆಯ ಕಡೆಗೆ ಹೊರಟೆ. ನಾನು ಅಲ್ಲಿಗೆ ತಲುಪಿದಾಗ ಅವರ ಮನೆಯಾಕೆ ‘ಈಗ ತಾನೆ ಅವರು ಅಂಗಡಿ ಕಡೆ ಹೋಗಿದ್ದಾರೆ ಅರ್ಧ ಗಂಟೆಯಲ್ಲಿ ಬಂದು ಬಿಡುತ್ತಾರೆ’ ಎಂದರು. ಆಗ ನಾನು ಇಷ್ಟು ಸಮಯವನ್ನಾದರೂ ವಾಕಿಂಗ್‌ಗೆ ವಿನಿಯೋಗಿಸುವ ಯೋಚನೆಯಿಂದ ನಾನೂ ಸಹ ಬೇಗನೆ ಬಿಡುತ್ತೇನೆ ಎಂದು ಹೇಳಿ ಪಕ್ಕದ ಬೀದಿ ಕಡೆಗೆ ಹೊರಳಿದೆ.

ಅದು ಜನ ವಿರಳವಾದ ಬೀದಿ, ಜೊತೆಗೆ ಸಂಜೆಯ ಗಾಳಿ ಬೀಸುತ್ತಿದ್ದರಿಂದ ತರಗೆಲೆಗಳ ಮೆದು ಸರಸರ ಸದ್ದು ಕೇಳಿಸಿಕೊಳ್ಳುತ್ತ ಸ್ವಲ್ಪವೇ ದೂರ ನಡೆದಿದ್ದ ನನಗೆ ನನ್ನ ಕಿವಿಯ ಪಕ್ಕದಲ್ಲಿಯೇ ಸರ್ರನೆ ಏನೋ ಹಾರಿ ಹೋದಂತಾಯಿತು. ತಕ್ಷಣ ಎದುರಿನ ತೆರೆದ ಚರಂಡಿಯಲ್ಲಿ ಪಕ್ಷಿಯೊಂದು ರಭಸವಾಗಿ ಹೊರಳಾಡಿ ಇಲಿಯೊಂದನ್ನು ತನ್ನ ಕಾಲುಗಳಲ್ಲಿ ಸಿಕ್ಕಿಸಿಕೊಂಡು ಮೇಲೇಳುತ್ತಿದ್ದಂತೆ ನನಗೆ ಅದು ಗೂಬೆ ಎಂದು ಗೊತ್ತಾಯಿತು ಅದು ಅತ್ಯಂತ ವೇಗವಾಗಿ ಹಾರಿಹೋಗಿ ಮರಗಳ ನಡುವೆ ಮರೆಯಾಯಿತು.

ಜನರ ಕಣ್ಣಿಗೆ ಯಾವತ್ತೂ ಕಾಣಿಸಿಕೊಳ್ಳದ ಗೂಬೆ ನನ್ನ ಕಣ್ಣೆಗೆ ಬಿದ್ದು ಎಂದೋ ಅಕಸ್ಮಾತ್‌ ಆಗಿಯೋ ನಮ್ಮ ಹಳ್ಳಿಯ ಮನೆಯ ತೋಟದಲ್ಲಿ ಗೂಬೆಯನ್ನು ನೋಡಿದ್ದ ನೆನಪು. ಈಗ ಮತ್ತೆ ನಗರವಾಸದಲ್ಲಿ ಇಲಿ ಬೇಟೆಯ ಈ ಗೂಬೆಯನ್ನು ನೋಡುವ ಮೂಲಕ ನವೀಕರಣಗೊಂಡಿತು. ಆಗ, ಹಿಂದೆ ನೋಡಿದ್ದ ಗೂಬೆ ಆಕಾರದಲ್ಲಿ ದೊಡ್ಡದಾಗಿತ್ತು. ಈಗ ಇಲಿಯನ್ನು ಎತ್ತಿಕೊಂಡು ಹೋದದ್ದು ಚಿಕ್ಕದಾಗಿತ್ತು.

ಇರಲಿ, ಗೂಬೆಯ ಆಹಾರ ಕ್ರಮದಲ್ಲಿ ಇಲಿ ಮುಖ್ಯವಾದದ್ದು ಎಂದು ತಿಳಿದಿದ್ದೇವೆ. ಹಗಲೆಲ್ಲಾ ಮರದ ಪೊಟರೆಯಂತಹ ಅಡುಗುದಾಣದಲ್ಲಿ ಅವಿತಿಟ್ಟುಕೊಳ್ಳುವ ಗೂಬೆ ರಾತ್ರಿಯಾಗುತ್ತಿದ್ದಂತೆ ಮರೆಯಿಂದ ಹೊರಬಂದು ಆಹಾರದ ಬೇಟೆಗಾಗಿ ಹೊಂಚು ಹಾಕಲಾರಂಭಿಸುತ್ತದೆ. ಇಲಿಯೂ ಸಹ ಹಗಲು ಹೊತ್ತು ಬಿಲದಲ್ಲಿ ಅಡಗಿದ್ದು ರಾತ್ರಿಯಾಗುತ್ತಿದ್ದಂತೆಯೇ ಹೊರಗೆ ಬಂದು ಆಹಾರ ಅರಸತೊಡುಗುತ್ತದೆ. ಗೂಬೆ ಮತ್ತು ಇಲಿ ಎರಡೂ ಸಹ ರಾತ್ರಿ ಹೊತ್ತಿನಲ್ಲಿಯೇ ಆಹಾರಕ್ಕಾಗಿ ಹೊರಬರುವುದರಿಂದ ಇಲಿಯ ಬೇಟಿಗಾಗಿ ಮರದ ಮೇಲೆ ಕುಳಿತುಕೊಂಡು ಹೊಂಚು ಹಾಕುವ ಗೂಬೆಗೆ ‘ಇಲಿ ಭೋಜನ‘ ದಕ್ಕುತ್ತದೆ. ಇಲಿ ಹಾಗೂ ಗೂಬೆಯ ಕಣ್ಣುಗಳು ಅತ್ಯಂತ ಚುರುಕ್ಕಾಗಿದ್ದರೂ ಗೂಬೆಯ ಕಣ್ಣಿನ ದೃಷ್ಟಿಗೆ ಹೋಲಿಕೆಯೇ ಇಲ್ಲ. ಗೂಬೆಗೆ ಹಗಲು ಹೊತ್ತು ಕಣ್ಣು ಕಾಣಿಸುವುದಿಲ್ಲ ಎಂಬ ಮಾತಿದೆ (ನನಗಂತೂ ಗೊತ್ತಿಲ್ಲ) ಆದರೆ ಒಂದು ವೇಳೆ ಗೂಬೆ ಹಗಲು ಬೇಟೆಗೆ ಇಳಿದರೆ ಇಲಿ ತಯಾರಿರಬೇಕಲ್ಲ...! ಇದೆಲ್ಲಾ ಏನೇ ಇರಲಿ, ಮುಖ್ಯವಾಗಿ ಪ್ರಾಣಿಗಳಿಗೆ ಆಹಾರ ಅರಸುವ ಕ್ರಮ ಹಗಲು ರಾತ್ರಿ ಎರಡೂ ಹೊತ್ತಿನಲ್ಲಿ ಪ್ರಕೃತಿದತ್ತವಾಗಿಯೇ ಬಂದಿರುತ್ತವೆ. ಹಾಗೆ ನೋಡಿದರೆ ಪಕ್ಷಿ ಸಮೂಹ ಹಾಗೂ ಸಾಕು ಪ್ರಾಣಿಗಳನ್ನು ಉಳಿದಂತೆ ಇತರೆ ಪ್ರಾಣಿಗಳು ರಾತ್ರಿ ಹೊತ್ತನ್ನು ಅವಲಂಬಿಸಿರುತ್ತವೆ. ಗೂಬೆ ಮುಂತಾದ ಇನ್ನೂ ಕೆಲವು ಪಕ್ಷಿ ಸಮೂಹಕ್ಕೆ ಸೇರಿದವುಗಳೇ. ಎಲ್ಲವೂ ಪ್ರಕೃತಿ ನಿಯಮ ಪಾಲಕರೇ.. ಮನುಷ್ಯನನ್ನು ಹೊರತುಪಡಿಸಿ.

ಗೂಬೆ ಮನುಷ್ಯನ ಕಣ್ಣಿಗೆ ಬೀಳದಿದ್ದರೂ ಅದನ್ನು ಮಾನವ ತನ್ನ ‘ಅಪಶಕುನದ‘ ಪಾಲಿಗೆ ಸೇರಿಸಿರುವುದು ವಿಪರ್ಯಾಸವೇ ಸರಿ. ಗೂಬೆ ಹೊರಡಿಸುವ ಸದ್ದು ಕಿವಿಗೆ ಬಿದ್ದರೆ ‘ಸಾವಿನ ಶಕುನ’ ಎಂದು ನಂಬುವವರಿದ್ದಾರೆ. ನಾವು ಚಿಕ್ಕವರಿದ್ದಾಗ ನಮ್ಮ ಹಳ್ಳಿ ಮನೆಯ ಹಿಂದಿನ ತೋಟದಲ್ಲಿ ಗೂಬೆ ರಾತ್ರಿ ಹೊತ್ತು ಗೂಕ್...ಗೂಕ್ ಎಂದು ಕೂಗುತ್ತಿದರೆ ಕೂಡಲೇ ಮನೆಯ ಹೆಂಗಸರು ಕುಡುಗೋಲನ್ನು ಬೆಂಕಿಗೆ ಹಾಕಿ ಕಾಯಿಸುತ್ತಿದ್ದರು. ಹೀಗೆ ಕುಡುಗೋಲು ಕೆಂಪಗೆ ಬಿಸಿಯಾದರೆ ಗೂಬೆ ಹೆದರಿ ದೂರ ಹೋಗುತ್ತದೆ ಎಂದು ನಂಬಿಕೆ ಇತ್ತು (ಈಗ ಗೊತ್ತಿಲ್ಲ). ಅಲ್ಲಾ, ಗೂಬೆ ಮರದ ಮೇಲೆ ಕುಳಿತು ಸ್ವರ ಹೊರಡಿಸುವುದಕ್ಕೂ ಮನೆಯೊಳಗೆ ಕುಡುಗೋಲು ಬಿಸಿಯಾಗುವುದಕ್ಕೂ ಯಾವ ‘ಸ್ಯಾಟಲೈಟ್‌ ಅಥವಾ ಇಂಟರ್ನೆಟ್ ಸಂಬಂಧವಯ್ಯಾ..’ ಎಂದು ಕೇಳಿದರೆ ಉತ್ತರ ಹೇಳುವ ಹಿರೀಕರು ಸಿಗಬೇಕಲ್ಲ.. !

ಇನ್ನು ಗೂಬೆಯನ್ನು ‘ರೈತಮಿತ್ರ’ ಎನ್ನುತ್ತಾರೆ. ಏಕೆಂದರೆ ಗೂಬೆ ಇಲಿಗಳನ್ನು ಬೇಟೆಯಾಡಿ ತಿನ್ನುತ್ತವೆ. ಹಾಗಾಗಿ ಇಲಿಗಳು ಬೆಳೆಯನ್ನು ನಾಶ ಮಾಡುವುದು ಕಡಿಮೆಯಾಗುತ್ತದೆ. ವಿಪರ್ಯಾಸ ನೋಡಿ...ಒಂದು ಕಡೆ ಗೂಬೆಯ ಧ್ವನಿ ಕೇಳಿ ಅಪಶಕುನ ಎನ್ನುವ ಮನುಷ್ಯ ತನ್ನ ಬೆಳೆ ಉಳಿದರೆ ಅದೇ ಗೂಬೆಯನ್ನು 'ಮಿತ್ರ' ಎನ್ನುತ್ತಾನೆ. ಇದು ಮನುಷ್ಯನ ಅಜ್ಞಾನ ಮತ್ತು ಸ್ವಾರ್ಥ ಎನ್ನದೆ ಮತ್ತೇನು ಹೇಳಬೇಕು... ?

ಇದೆಲ್ಲ ಏನೇ ಇರಲಿ, ಈ ಪ್ರಕೃತಿ ಜೀವಜಗತ್ತಿನಲ್ಲಿ ಪ್ರತಿಯೊಂದು ಜೀವಿಗೂ (ಮನುಷ್ಯ ಸೇರಿದಂತೆ) ತನ್ನದೇ ಆದ ಆಹಾರ ಕ್ರಮವಿರುತ್ತದೆ. ಅದಕ್ಕಾಗಿಯೇ ನಮ್ಮ ಹಿರಿಯರು ಬಹಳ ಹಿಂದೆಯೇ ‘ಜೀವೋ ಜೀವಸ್ಯ ಭೋಜನಂ' (ಒಂದು ಜೀವಿ ಇನ್ನೊಂದು ಜೀವಿಗೆ ಆಹಾರ) ಎಂದಿದ್ದಾರೆ. ಪ್ರಾಣಿ ಸಮೂಹ ಇದನ್ನು ಪಾಲಿಸುತ್ತಲೇ ಇವೆ. ಆದರೆ ಮನುಷ್ಯ ಮಾತ್ರ ತನ್ನ ಎಲ್ಲೆ ಮೀರುತ್ತ ಪ್ರಕೃತಿಯ ಮೇಲೆ ಆಕ್ರಮಣ ಮಾಡುತ್ತಾ ಎಲ್ಲವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಾ ಹೋಗುತ್ತಿದ್ದಾನೆ.

ತಮ್ಮ ಆಹಾರ ಸರಪಳಿ ಕಳಚುತ್ತಿರುವ ಇಂದಿನ ಕಾಲದಲ್ಲಿ ಪ್ರಾಣಿಗಳು ಅನಿವಾರ್ಯವಾಗಿ ಜನವಸತಿ ಕಡೆಗೆ ದಾಳಿ ಇಡುತ್ತಿವೆ. ಆದರೆ 'ಎಲ್ಲವೂ ತನ್ನದೆಂಬ' ಮನುಷ್ಯನ ಸ್ವಾರ್ಥ ಪ್ರಾಣಿಗಳಿಗೆ ಇಲ್ಲ. ಬದಲಾಗಿ ‘ಇಂದು ನಾಳೆಗೆಂದು ತಂದು ಕೂಡಿಡಬೇಡ..ಸಿಕ್ಕಿದ್ದನುಂಡು ಬದುಕಿರು’ ಎಂಬಂತೆ ಪ್ರಾಣಿಗಳು ಬದುಕಲು ಹೆಣಗಾಡುತ್ತಿವೆ ಎಂಬುದು ನನ್ನ ಅನಿಸಿಕೆ. ನೀವೇನಂತೀರಿ... ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT