ಶುಕ್ರವಾರ, ಸೆಪ್ಟೆಂಬರ್ 24, 2021
27 °C
ಪ್ರಾಥಮಿಕ, ಪ್ರೌಢಶಿಕ್ಷಣ ಪಡೆದದ್ದೂ ಇಲ್ಲಿಯೇ

ಹಿರಣ್ಣಯ್ಯ ಜನಿಸಿದ್ದು ಮೈಸೂರಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮಾಸ್ಟರ್ ಹಿರಣ್ಣಯ್ಯ ಅವರಂತಹ ಅಸಾಧಾರಣ ಪ್ರತಿಭೆ ಜನಿಸಿದ್ದು ಮೈಸೂರಿನಲ್ಲಿ. ಇವರು ಶಿಕ್ಷಣ ಪಡೆದದ್ದೂ ಇಲ್ಲೇ. ಇವರ ‘ಲಂಚಾವತಾರ’ ನಾಟಕ 500 ಪ್ರದರ್ಶನಗಳನ್ನು ಕಂಡಿದ್ದೂ ಇಲ್ಲಿನ ಪುರಭವನದ ಆವರಣದಲ್ಲೇ. ಅಷ್ಟು ಮಾತ್ರವಲ್ಲ, ಹಿರಣ್ಣಯ್ಯ ಅವರು ನಿಜ ಜೀವನದಲ್ಲೂ ರಾಜಕಾರಣಿಗಳನ್ನು ಕಟು ಮಾತುಗಳಲ್ಲಿ ವಿಮರ್ಶಿಸುತ್ತಿದ್ದರು ಎಂಬುದಕ್ಕೇ ಮೈಸೂರು ಸಾಕ್ಷಿಯಾಗಿದೆ.

ಹಿರಣ್ಣಯ್ಯ ಅವರಿಗೂ ಮೈಸೂರಿಗೂ ಬಿಡಿಸಲಾರದ ನಂಟು. ಇವರು 1934ರ ಫೆ.15ರಂದು ಇಲ್ಲಿನ ಚಾಮುಂಡಿಪುರಂನಲ್ಲಿ ಕೆ.ಹಿರಣ್ಣಯ್ಯ ಹಾಗೂ ಶಾರದಮ್ಮ ದಂಪತಿಗೆ ಜನಿಸಿದರು. ಆರಂಭದಲ್ಲಿ ಇವರ ಹೆಸರು ನರಸಿಂಹಮೂರ್ತಿ. ಇಲ್ಲಿನ ಬನುಮಯ್ಯ ಮಾಧ್ಯಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ನಂತರ ಶಾರದಾವಿಲಾಸ ಕಾಲೇಜಿನಲ್ಲಿ ಇಂಟರ್‌ ಮೀಡಿಯಟ್‌ ಶಿಕ್ಷಣ ಪಡೆದು, ರಂಗಶಿಕ್ಷಣ ಪಡೆಯಲು ಚೆನ್ನೈಗೆ ತೆರಳುತ್ತಾರೆ.

ಅಷ್ಟೊತ್ತಿಗೆ ಇವರ ತಂದೆ ಕೆ.ಹಿರಣ್ಣಯ್ಯ ಇಲ್ಲಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿದ್ದ ಪ್ರಸಿದ್ಧ ನಾಟಕಕಾರ ಟಿ.ಪಿ.ಕೈಲಾಸಂ ಹಾಗೂ ಇತರರ ಒತ್ತಾಯಕ್ಕೆ ಮಣಿದು ಹಿರಣ್ಣಯ್ಯ ಮಿತ್ರಮಂಡಳಿಯನ್ನು ಆರಂಭಿಸುತ್ತಾರೆ. ಇವರ ನಿಧನದ ನಂತರ ಹಿರಣ್ಣಯ್ಯ ಬಳ್ಳಾರಿ ಮತ್ತು ಬೆಂಗಳೂರಿನತ್ತ ಹೊರಡುತ್ತಾರೆ.

1962ರಲ್ಲಿ ಲಂಚಾವತಾರ ನಾಟಕವನ್ನು ಇಲ್ಲಿ ಮೊದಲ ಬಾರಿ ಪ್ರದರ್ಶಿಸುತ್ತಾರೆ. ಒಟ್ಟು 500 ಪ್ರದರ್ಶನಗಳನ್ನು ಈ ನಾಟಕ ಇಲ್ಲಿನ ಪುರಭವನದ ಆವರಣದಲ್ಲಿ ಕಾಣುತ್ತದೆ.‌

ನಾಟಕದಲ್ಲಿ ಮಾತ್ರ ಇವರು ನೇರ ಮತ್ತು ಕಟುಮಾತುಗಳಿಗೆ ಹೆಸರಾಗಿರಲಿಲ್ಲ. ನಿಜ ಜೀವನದಲ್ಲೂ ರಾಜಕಾರಣವನ್ನು ಮತ್ತು ರಾಜಕಾರಣಿಗಳನ್ನು ಕಟುವಾದ ಶಬ್ದದಿಂದ ವಿಮರ್ಶೆ ಮಾಡುತ್ತಿದ್ದರು ಎಂಬುದಕ್ಕೆ ಮೈಸೂರು ಸಾಕ್ಷಿಯಾಗಿದೆ. 2014ರ ಮೇ 11ರಂದು ಇಲ್ಲಿನ ಕಾರ್ಯಕ್ರಮವೊಂದರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಟುವಾದ ಮಾತುಗಳಲ್ಲಿ ನಿಂದಿಸುತ್ತಾರೆ. ಆಗ ಕೋಪಗೊಂಡ ಸಿದ್ದರಾಮಯ್ಯ ಬೆಂಬಲಿಗರು ಸಮಾರಂಭದ ವೇದಿಕೆಗೆ ನುಗ್ಗಿ ಮೇಜುಗಳನ್ನು ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಾರೆ. ತಕ್ಷಣವೇ ಸಿದ್ದರಾಮಯ್ಯ ಅವರ ಮನೆಗೆ ತೆರಳುವ ಹಿರಣ್ಣಯ್ಯ ತಾವು ನೀಡಿದ ಹೇಳಿಕೆ ಮತ್ತು ಅದರ ಸಂದರ್ಭವನ್ನು ವಿವರಿಸುತ್ತಾರೆ. ಕೊನೆಗೆ, ಸಿದ್ದರಾಮಯ್ಯ ಅವರೇ ಪೊಲೀಸ್ ರಕ್ಷಣೆಯಲ್ಲಿ ಇವರನ್ನು ಬೆಂಗಳೂರಿಗೆ ಕಳುಹಿಸುತ್ತಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.