ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡಿಗಳ ಮನೆ ಬಾಗಿಲಿಗೇ ಆಸ್ಪತ್ರೆ

ಸಂಚಾರಿ ಆರೋಗ್ಯ ವಾಹನಗಳ ಮೂಲಕ ಜನರಿಗೆ ಚಿಕಿತ್ಸಾ ಸೌಲಭ್ಯ
Last Updated 11 ಜನವರಿ 2019, 19:45 IST
ಅಕ್ಷರ ಗಾತ್ರ

ಮೈಸೂರು: ಪರಿಶಿಷ್ಟ ಪಂಗಡದ ಬುಡಕಟ್ಟು ಸಮುದಾಯವರು ವಾಸವಿರುವ ಕುಗ್ರಾಮಗಳಿಗೆ ಸಂಚಾರಿ ಆರೋಗ್ಯ ಘಟಕ ಸೇವೆಯನ್ನು ಆರಂಭಿಸಿದ್ದು, ಮನೆ ಬಾಗಿಲಿನಲ್ಲೇ ಜನರಿಗೆ ಚಿಕಿತ್ಸಾ ಸೌಲಭ್ಯ ನೀಡಲಾಗುತ್ತಿದೆ.

ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ನೀಡುತ್ತಿರುವ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಈ ಯೋಜನೆ ಗ್ರಾಮೀಣ ಮತ್ತು ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವವರಿಗೆ ವರದಾನವಾಗಿದೆ. ಆರೋಗ್ಯ ತಪಾಸಣೆ ಜತೆಗೆ ಔಷಧೋಪಚಾರವನ್ನು ಒದಗಿಸಲಾಗುತ್ತಿದೆ. ಅಲ್ಲದೆ, ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ಪಟ್ಟಣಗಳಿಂದ ಬಹುದೂರದ ಕುಗ್ರಾಮಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಸಮುದಾಯವರಿಗೆ ಈ ಯೋಜನೆ ನೆರವಾಗಿದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಕೂಲಿ ಬಿಟ್ಟು 30–40 ಕಿ.ಮೀ ಪ್ರಯಾಣಿಸಿ ಆಸ್ಪತ್ರೆಗೆ ಬಂದು ಹೋಗುವ ಗೋಜಲು ತಪ್ಪಿದೆ. ಹಣವೂ ಉಳಿತಾಯವಾಗಿದೆ. ಸಾರಿಗೆ ಸೌಲಭ್ಯ ಇಲ್ಲದ ಗ್ರಾಮಗಳ ಜನರಿಗೆ ನೀಡಲಾಗುತ್ತಿರುವ ಈ ಸೇವೆಗೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ.

ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳ ಬುಡಕಟ್ಟು ಜನರು, ಹಾಡಿಗಳಲ್ಲಿ ವಾಸಿಸುತ್ತಿರುವವರು, ಅಂಗನವಾಡಿ ಮಕ್ಕಳು, ಆಶ್ರಮ ಶಾಲೆಯ ವಿದ್ಯಾರ್ಥಿಗಳು, ಹಾಸ್ಟೆಲ್‌ಗಳಲ್ಲಿ ಈ ಸೇವೆ ಪಡೆಯುತ್ತಿದ್ದಾರೆ.

‘ಹಾಡಿಗಳಿಗೆ ರೂಟ್‌ಮ್ಯಾಪ್‌ ಮಾಡಿಕೊಂಡು ವಾಹನದಲ್ಲಿ ತೆರಳಿ ಆರೋಗ್ಯ ತಪಾಸಣೆ ನಡೆಸಿ ಸ್ಥಳದಲ್ಲೇ ಔಷಧೋಪಚಾರ ನೀಡುತ್ತಾರೆ. ಆಶ್ರಮ ಶಾಲೆಗಳ ಎಲ್ಲಾ ಮಕ್ಕಳ ರಕ್ತ ತಪಾಸಣೆ ನಡೆಸಿ ವರದಿ ನೀಡಿದ್ದಾರೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಸಮೀಪದ ಆಸ್ಪತ್ರೆಗೆ ಕಳುಹಿಸಿಕೊಡುತ್ತಾರೆ’ ಎಂದು ಮೈಸೂರು ಜಿಲ್ಲೆಯ ಯೋಜನಾ ಸಮನ್ವಯಾಧಿಕಾರಿ ಪ್ರಭಾ ಅರಸ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಇದಕ್ಕಾಗಿ ವಿಶೇಷವಾಗಿ ವಿನ್ಯಾಸ ಮಾಡಲಾಗಿರುವ ವಾಹನ ಬಳಸಲಾಗುತ್ತಿದೆ. ಆರೋಗ್ಯ ಪರೀಕ್ಷೆಗೆ ಪ್ರಾಥಮಿಕವಾಗಿ ಅಗತ್ಯವಾಗಿರುವ ಎಲ್ಲ ಉಪಕರಣಗಳು, ಸೌಲಭ್ಯಗಳು ಹವಾನಿಯಂತ್ರಿತ ಈ ವಾಹನದಲ್ಲಿವೆ. ರಕ್ತ ಪರೀಕ್ಷೆ ಪ್ರಯೋಗಾಲಯದ ಸಲಕರಣೆಗಳು, ಉಷ್ಣಮಾಪಕ, ತೂಕ ಮಾಪಕ, ಎತ್ತರ ಅಳೆಯುವ ಮಾಪಕ, ಆಗ್ನಿಶಾಮಕ ಉಪಕರಣ, ಆಮ್ಲಜನಕದ ಸಿಲಿಂಡರ್, ಗ್ಲೂಕೋಸ್ ಬಾಟಲಿಗಳು, ಹಿಮೋ ಮೀಟರ್, ರಕ್ತದೋತ್ತಡ ಅಳೆಯುವ ಸಾಧನಗಳು ಇವೆ.

ಶೀತ, ನೆಗಡಿ, ಜ್ವರ, ವಾಂತಿ, ರಕ್ತದೊತ್ತಡ ಮುಂತಾದ ಸಾಮಾನ್ಯ ಆರೋಗ್ಯ ಸಮಸ್ಯೆಗಳ ಔಷಧಿಗಳು, ಚುಚ್ಚುಮದ್ದು, ಸಿರಪ್‌, ಮುಲಾಮುಗಳು ಇವೆ.

‘ಕೆಲ ಹಾಡಿಗಳ ಜನರು ಈ ವ್ಯವಸ್ಥೆಗೆ ಇನ್ನೂ ಹೊಂದಿಕೊಂಡಿಲ್ಲ. ಚಿಕಿತ್ಸೆ ಪಡೆಯಲು ಹಿಂದೇಟು ಹಾಕುತ್ತಾರೆ. ಅರಿವು ಮೂಡಿಸಿ ಚಿಕಿತ್ಸೆ ನೀಡುವ ಪ್ರಯತ್ನ ನಡೆಸುತ್ತಿದ್ದೇವೆ’ ಎನ್ನುತ್ತಾರೆ ಸಂಚಾರಿ ಆರೋಗ್ಯ ಘಟಕದಲ್ಲಿ ಕಾರ್ಯನಿರ್ವಹಿಸುವ ವೈದ್ಯೆ ಡಾ.ಶಾಂತಲಾ.

ಎಲ್ಲೆಲ್ಲಿ ಸಂಚಾರಿ ಆರೋಗ್ಯ ಘಟಕ

ಮೈಸೂರು ಜಿಲ್ಲೆ

* ಹುಣಸೂರು

* ಎಚ್‌.ಡಿ.ಕೋಟೆ

* ಪಿರಿಯಾಪಟ್ಟಣ

ಚಾಮರಾಜನಗರ ಜಿಲ್ಲೆ

* ಕೊಳ್ಳೇಗಾಲ

* ಚಾಮರಾಜನಗರ

* ಗುಂಡ್ಲುಪೇಟೆ

ಕೊಡಗು ಜಿಲ್ಲೆ‌

* ವಿರಾಜಪೇಟೆ

* ಸೋಮವಾರಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT