ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕಿತರಿಗೆ ಸಕಾಲಕ್ಕೆ ದೊರಕದ ಊಟ–ತಿಂಡಿ: ಗುತ್ತಿಗೆದಾರನ ವಿರುದ್ಧ ಆಕ್ರೋಶ

ಹೊಸ ಪೀಡಿತರಿಗಾದರೂ ಅನುಕೂಲವಾಗಲಿ
Last Updated 30 ಏಪ್ರಿಲ್ 2021, 16:22 IST
ಅಕ್ಷರ ಗಾತ್ರ

ಮೈಸೂರು: ‘ನಮಗೆ ಬಹಳ ಹಿಂಸೆ ಆಗ್ತಿದೆ. ಹೊತ್ತಿಗೆ ಸರಿಯಾಗಿ ಊಟ–ತಿಂಡಿ ಕೊಡುತ್ತಿಲ್ಲ. ಆಹಾರ ಪೂರೈಸುವ ಗುತ್ತಿಗೆದಾರನ ವಿರುದ್ಧ ದೂರಿದರೂ ಪ್ರಯೋಜನವಿಲ್ಲ. ನಮ್ಮದು ಮುಗಿಯುತ್ತಾ ಬಂತು. ಇಲ್ಲಿಗೆ ಚಿಕಿತ್ಸೆಗೆಂದು ದಾಖಲಾಗುವ ಹೊಸ ಸೋಂಕಿತರಿಗಾದರೂ ಒತ್ತೊತ್ತಿಗೆ ಊಟ ಕೊಡಿ. ಅವರಾದರೂ ಚೆನ್ನಾಗಿರಲಿ. ಬೇಗ ಗುಣಮುಖರಾಗಲಿ...’

ನಂಜನಗೂಡು ತಾಲ್ಲೂಕು ಆಸ್ಪತ್ರೆಯಲ್ಲಿ ಕೋವಿಡ್‌ ಪೀಡಿತರಾಗಿ ಚಿಕಿತ್ಸೆಗಾಗಿ ದಾಖಲಾಗಿರುವ ವಯೋವೃದ್ಧ ದೊಡ್ಡಕಾನ್ಯದ ರಾಮೇಗೌಡರ ಅಳಲಿದು.

‘ಬೆಳಿಗ್ಗೆ 11 ಗಂಟೆಯ ಆಸುಪಾಸಿಗೆ ತಿಂಡಿ ಕೊಟ್ಟರೇ ನಮ್ಮ ಪರಿಸ್ಥಿತಿ ಏನಾಗಬೇಡ. ಹೊರಗೋಗಿ ತಿನ್ನಲು ಆಗಲ್ಲ. ತರಿಸಿಕೊಳ್ಳೋಣ ಅಂದರೇ ಸ್ಪಂದನೆಯೇ ಸಿಗಲ್ಲ. ಅನಿವಾರ್ಯವಾಗಿ ಅವರು ಕೊಟ್ಟಾಗಲೇ ತಿನ್ನಬೇಕಿದೆ. ರೋಗದ ಜೊತೆಗೆ ಇದೊಂದು ನಿತ್ಯವೂ ಸಮಸ್ಯೆಯಾಗಿ ಕಾಡುತ್ತಿದೆ’ ಎಂದು ಶುಕ್ರವಾರ ‘ಪ್ರಜಾವಾಣಿ’ ಬಳಿ ದುಃಖಿಸಿದರು.

‘ಉಳಿದ ಅನ್ನವನ್ನೇ ಚಿತ್ರಾನ್ನ, ಪುಳಿಯೋಗರೆಯಾಗಿ ಮಾಡಿ ಕೊಡುತ್ತಿದ್ದಾರೆ. ಬಿಸಿಯೇ ಇರಲ್ಲ. ಗುಣಮಟ್ಟವೂ ಅಷ್ಟಕ್ಕಷ್ಟೇ. ಮಧ್ಯಾಹ್ನದ ಹೊತ್ತಿನ ಅನ್ನ–ಸಾಂಬಾರ್‌ ತಿನ್ನಲಾಗಲ್ಲ. ಒಟ್ಟಾರೆ ಇಲ್ಲಿನ ಊಟದ ವ್ಯವಸ್ಥೆಯೇ ಅಸ್ತವ್ಯಸ್ತವಾಗಿದೆ. ರೋಗಿಗಳಿಗೆ ಕೊಡಬೇಕಾದ ಊಟ ಇದಾಗಿಲ್ಲ’ ಎಂದು ನಂಜನಗೂಡಿನ ಮಲ್ಲಿಕಾರ್ಜುನ್‌ ದೂರಿದರು.

ಇವರಿಬ್ಬರ ದೂರಿಗೆ ಅಕ್ಕಪಕ್ಕದ ವಾರ್ಡ್‌ನಲ್ಲಿರುವ ಇತರೆ ರೋಗಿಗಳು ಸಹಮತ ವ್ಯಕ್ತಪಡಿಸಿದರು. ಶುಚಿತ್ವವೇ ಇಲ್ಲ. ದಿನಕ್ಕೊಂದು ಬಾರಿಯಷ್ಟೇ ಕಸ ಗುಡಿಸೋದು, ನೆಲ ಒರೆಸುವುದು. ಶೌಚಾಲಯದ ಸ್ಥಿತಿ ಹೇಳತೀರದು. ಹೆಚ್ಚಿಗೆ ದೂರುವಂತಿಲ್ಲ. ನಮಗೆಲ್ಲಿ ತೊಂದರೆ ಮಾಡುತ್ತಾರೋ ಎಂಬ ಭಯ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಏನೂ ಮಾಡಲಾಗಲ್ಲ. ಅನಿವಾರ್ಯವಾಗಿ ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಂಡು ಗುಣಮುಖರಾಗುವತ್ತ ಚಿತ್ತ ಹರಿಸಿದ್ದೇವೆ ಎಂದೂ ಅವರು ಹೇಳಿದರು.

ಕೋವಿಡ್‌ ಪೀಡಿತರ ದೂರಿನ ಬಳಿಕ ‘ಪ್ರಜಾವಾಣಿ’ ಸಂಬಂಧಿಸಿದ ಅಧಿಕಾರಿಗಳ ಪ್ರತಿಕ್ರಿಯೆಗಾಗಿ ಸಂಪರ್ಕಿಸಿದ ಬಳಿಕ ಚಿತ್ರಣವೇ ಬದಲಾಯಿತು.

ದೂರಿತ್ತವರ ಬಳಿಗೆ ತೆರಳಿದ ಆಸ್ಪತ್ರೆಯ ಸಿಬ್ಬಂದಿ, ಎಲ್ಲ ಸಮಸ್ಯೆ ಪರಿಹರಿಸಲು ತಕ್ಷಣವೇ ಕ್ರಮಕೈಗೊಳ್ಳುವುದಾಗಿ ತಿಳಿಸಿದರು ಎಂದು ಸೋಂಕಿತರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT