ಶನಿವಾರ, ಮಾರ್ಚ್ 28, 2020
19 °C
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಮತ್ತೊಂದು ಅಕ್ರಮ ಬಯಲು

ರಾಜ್ಯ‍ಪಾಲರ ಕಣ್ಣು ತಪ್ಪಿಸಿ ಅಕ್ರಮ ನೇಮಕಾತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಕಾರ್ಯಸೌಧ

ಮೈಸೂರು: ರಾಜ್ಯಪಾಲರಿಗೆ ತಪ್ಪು ಮಾಹಿತಿ ನೀಡಿ ಅನಧಿಕೃವಾಗಿ 22 ಅತಿಥಿ ಉಪನ್ಯಾಸಕರ ಹುದ್ದೆಗಳನ್ನು ಸೃಷ್ಟಿಸಿ ಅನರ್ಹರನ್ನು ನೇಮಕ ಮಾಡಿರುವ ಪ್ರಕರಣ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಬೆಳಕಿಗೆ ಬಂದಿದೆ.

ಪ್ರೊ.ಕೆ.ಎಸ್.ರಂಗಪ್ಪ ಹಾಗೂ ಪ್ರೊ.ಎಂ.ಜಿ.ಕೃಷ್ಣನ್‌ ಅವರು ಕುಲಪತಿಗಳಾಗಿದ್ದ ಅವಧಿಯಲ್ಲಿ ಈ ಅಕ್ರಮ ನೇಮಕಾತಿ ನಡೆದಿದೆ. 2013ರ ಅ.10ರಂದು ನಿಯಮ ಬಾಹಿರವಾಗಿ ಈ 22 ಮಂದಿಯನ್ನು ಕಾಯಂಗೊಳಿಸಲಾಗಿದ್ದು, ಇದರಿಂದ ವಿ.ವಿ.ಗೆ ₹ 7.37 ಕೋಟಿ ಆರ್ಥಿಕ ಹೊರೆಯಾಗಿದೆ.

ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯು ವಿ.ವಿ.ಯಲ್ಲಿ ಅಕ್ರಮವಾಗಿ ತಾತ್ಕಾಲಿಕ ಸಿಬ್ಬಂದಿಯನ್ನು ಕಾಯಂಗೊಳಿಸಿರುವ ದೂರಿನ ಪರಿಶೀಲನೆಗಾಗಿ ಸಮಿತಿಯನ್ನು ನೇಮಿಸಿತ್ತು. ಈ ಸಮಿತಿಯು ಪರಿಶೀಲನೆ ನಡೆಸಿ ವಿಶೇಷ ವರದಿಯನ್ನು ನೀಡಿತ್ತು. ಅದರಂತೆ,  2017ರ ಜು. 20ರಿಂದ 9 ದಿನಗಳು ಪರಿಶೀಲನೆ ನಡೆಸಿ, 6 ಅತಿಥಿ ಉಪನ್ಯಾಸಕರ ಬದಲಿಗೆ, ಹೆಚ್ಚುವರಿಯಾಗಿ 22 ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಲಾಗಿದೆ ಎಂದು ತಿಳಿಸಿತ್ತು. ಆದರೆ, ವರದಿ ನೀಡಿ ಒಂದು ವರ್ಷವಾದರೂ ಈ ಬಗ್ಗೆ ಯಾವ ಕ್ರಮವನ್ನೂ ತೆಗೆದುಕೊಳ್ಳಲಾಗಿಲ್ಲ.

ಅಕ್ರಮ ಹೇಗೆ?:

ವಿ.ವಿ.ಯಲ್ಲಿ ಈ ಹಿಂದೆ ನೇಮಕಗೊಂಡಿದ್ದ 6 ಅತಿಥಿ ಉ‍ಪನ್ಯಾಸಕರು ತಮ್ಮನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಕಾನೂನು ಚೌಕಟ್ಟಿನಲ್ಲಿ ಅವಕಾಶವಿದ್ದರೆ ಮಾನವೀಯತೆಯ ದೃಷ್ಟಿಯಿಂದ ಕಾಯಂಗೊಳಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಆದರೆ 6 ಮಂದಿಯನ್ನು ಕಾಯಂಗೊಳಿಸುವ ಬದಲು, 22 ಮಂದಿಯನ್ನು ನೇಮಿಸಲಾಗಿದೆ.

ನೇಮಕಗೊಂಡಿರುವ 22 ಅತಿಥಿ ಉಪನ್ಯಾಸಕರು 2011ರಲ್ಲಿ ನಡೆದಿದ್ದ ಸಹಾಯಕ ಪ್ರಾಧ್ಯಾಪಕ ಹುದ್ದೆಯ ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಜಿ ಸಲ್ಲಿಸಿದ್ದರು. ವಿದ್ಯಾರ್ಹತೆ ಇರದಿದ್ದ ಕಾರಣ, ಇವರ ಅರ್ಜಿ ತಿರಸ್ಕೃತಗೊಂಡಿತ್ತು. ಈ 22 ಮಂದಿಯನ್ನು ಕಾಯಂಗೊಳಿಸುವಂತೆ ವಿ.ವಿ.ಯಿಂದ ರಾಜ್ಯಪಾಲರ ಕಚೇರಿಗೆ ಪತ್ರ ಹೋಗಿದ್ದು, ತಪ್ಪು ಮಾಹಿತಿಯನ್ನು ನೀಡಲಾಗಿದೆ ಎಂದು ಸಮಿತಿ ವರದಿಯಲ್ಲಿ ಉಲ್ಲೇಖಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು