ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ನಿಲ್ಲದ ಬಿಪಿಎಲ್‌ ಕಾರ್ಡ್‌ ಅಕ್ರಮ

ಅನಧಿಕೃತ ಪಡಿತರ ಚೀಟಿ ರದ್ದು, ₹ 1.19 ಕೋಟಿ ದಂಡ ವಸೂಲಿ
Last Updated 1 ಜುಲೈ 2022, 19:30 IST
ಅಕ್ಷರ ಗಾತ್ರ

ಮೈಸೂರು: ‘ಅನ್ನಭಾಗ್ಯ’ ಯೋಜನೆಯಡಿ ಅಕ್ರಮವಾಗಿ ಆಹಾರ ಧಾನ್ಯ ಪಡೆದಿರುವ ಶ್ರೀಮಂತರು, ಸರ್ಕಾರಿ ನೌಕರರ ವಿರುದ್ಧ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದು, 2019–20ರಿಂದ ಈವರೆಗೆ ಬರೋಬ್ಬರಿ ₹ 1.19 ಕೋಟಿ ದಂಡ ವಸೂಲಿ ಮಾಡಿದ್ದಾರೆ. 11,123 ಅನಧಿಕೃತ ಪಡಿತರ ಚೀಟಿಗಳನ್ನು ರದ್ದುಪಡಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡತನ ರೇಖೆಗಿಂತ ಕೆಳಗಿರುವವರಿಗೆ (ಬಿಪಿಎಲ್‌, ಈಗ ಆದ್ಯತೇತರ ಕುಟುಂಬಗಳು ಎಂದು ಪರಿಗಣಿಸಲಾಗುತ್ತಿದೆ) ನೀಡುವ ಪಡಿತರ ಚೀಟಿಗಳನ್ನು ಪಡೆದು ಸೌಲಭ್ಯಕ್ಕೆ ಕನ್ನ ಹಾಕುತ್ತಿರುವುದು ಕಂಡುಬಂದಿದೆ. ಹೀಗೆ ಯೋಜನೆ ದುರ್ಬಳಕೆ ಮಾಡಿಕೊಂಡವರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸುವುದು, ಆಗಲೂ ಬಗ್ಗದಿದ್ದಾಗ ದಂಡ ವಿಧಿಸುವ ಕಾರ್ಯವನ್ನು ಇಲಾಖೆಯಿಂದ ಕೈಗೊಳ್ಳಲಾಗುತ್ತಿದೆ.

‘ಆರ್ಥಿಕವಾಗಿ ದುರ್ಬಲರಾದವರಿಗೆ’ ನೀಡುವ ಚೀಟಿಗಳನ್ನು ‘ಆರ್ಥಿಕವಾಗಿ ಸಬಲರಾದವರು’ ಕೂಡ ಪಡೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

ನೂರಾರು ಮಂದಿ:ಸರ್ಕಾರದಿಂದ ನೀಡಿದ್ದ ಎಚ್ಚರಿಕೆ ಹಿನ್ನೆಲೆಯಲ್ಲಿ, ಕೆಲವರು ಪಡಿತರ ಚೀಟಿಗಳನ್ನು ಇಲಾಖೆಗೆ ವಾಪಸ್ ಮಾಡಿದ್ದಾರೆ. ಅವರಲ್ಲಿ ಕೆಲವರಿಗೆ ಎಪಿಎಲ್‌ ಕಾರ್ಡ್‌ಗೆ ಪರಿವರ್ತಿಸಿಕೊಡಲಾಗಿದೆ. ಕೋವಿಡ್–19 ಸಾಂಕ್ರಾಮಿಕದಿಂದ ಮಾಡಲಾಗಿದ್ದ ಲಾಕ್‌ಡೌನ್‌ ಸಂಕಷ್ಟದ ಸಮಯದಲ್ಲಿ ಕಾರ್ಯಾಚರಣೆಗೆ ಆದ್ಯತೆ ಕೊಟ್ಟಿರಲಿಲ್ಲ. ಬಳಿಕ ತೀವ್ರಗೊಳಿಸಲಾಗಿದೆ. ಕಾರ್ಡ್‌ ರದ್ದುಪಡಿಸುವ ಜೊತೆಗೆ ಅವರು ಈವರೆಗೆ ಪಡೆದಿರುವ ಆಹಾರ ಧಾನ್ಯದ ಮೌಲ್ಯವನ್ನು ಆಧರಿಸಿ ದಂಡ ವಿಧಿಸಲಾಗುತ್ತಿದೆ. ಇನ್ನೂ ದಂಡ ಪಾವತಿಸಬೇಕಾದವರೂ ನೂರಾರು ಸಂಖ್ಯೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅನಧಿಕೃತವಾಗಿ ಬಿಪಿಎಲ್‌ ಪಡಿತರ ಚೀಟಿ ಹೊಂದಿದ್ದವರಲ್ಲಿ ಶಿಕ್ಷಕರು, ಪೊಲೀಸರು, ಸೆಸ್ಕ್‌, ಸರ್ಕಾರದ ವಿವಿಧ ಇಲಾಖೆಗಳ ನೌಕರರು ಹೆಚ್ಚಿನ ಪ್ರಮಾಣದಲ್ಲಿ ಇರುವುದನ್ನು ಗುರುತಿಸಲಾಗಿದೆ. ಈವರೆಗೆ ಅನರ್ಹರಿಗೆ ಗರಿಷ್ಠ ₹ 45ಸಾವಿರದಿಂದ ₹ 50ಸಾವಿರದವರೆಗೆ ದಂಡ ವಿಧಿಸಿದ ಉದಾಹರಣೆಯೂ ಇದೆ. ಅಷ್ಟು ಪ್ರಮಾಣದ ಅಕ್ಕಿಯನ್ನು ಅವರು ಪಡೆದಿದ್ದರು! ಇಲಾಖೆಯವರು ಪತ್ತೆ ಹಚ್ಚಿದರೆ, ಅನರ್ಹರು ಯಾವಾಗಿನಿಂದ ಎಷ್ಟು ಪ್ರಮಾಣದಲ್ಲಿ ಅಕ್ಕಿ ಅಥವಾ ಆಹಾರ ಧಾನ್ಯ ಪಡೆದಿದ್ದಾರೆ ಎನ್ನುವುದನ್ನು ಲೆಕ್ಕ ಹಾಕಿ, ಪ್ರಸಕ್ತ ಮಾರುಕಟ್ಟೆ ದರದಂತೆ (ಅಕ್ಕಿಗಾದರೆ ಕೆ.ಜಿ.ಗೆ ₹ 23ರಂತೆ) ದಂಡ ವಿಧಿಸಲಾಗುತ್ತಿದೆ. ಕ್ರಿಮಿನಲ್ ಮೊಕದ್ದಮೆ ದಾಖಲಿಸಲೂ ಅವಕಾಶವಿದೆ ಎನ್ನುತ್ತಾರೆ ಅಧಿಕಾರಿಗಳು.

ಸರ್ಕಾರಿ ನೌಕರಿ ಸಿಕ್ಕವರಲ್ಲಿ ಕೆಲವರು, ಸ್ವಯಂಪ್ರೇರಣೆಯಿಂದ ವಾಪಸ್ ಮಾಡಿದ್ದಿದೆ. ಎಚ್‌ಆರ್‌ಎಂಎಸ್ (ಮಾನವ ಸಂಪನ್ಮೂಲ ನಿರ್ವಹಣೆ ವ್ಯವಸ್ಥೆ) ಜಾರಿಯಾದ ಮೇಲೆ ಸರ್ಕಾರಿ ನೌಕರರ ಮಾಹಿತಿ ಸುಲಭವಾಗಿ ಸಿಕ್ಕಿಬಿಡುತ್ತಿದೆ. ಇದು, ಕಾರ್ಯಾಚರಣೆಗೆ ಸಹಕಾರಿಯಾಗಿದೆ ಎನ್ನುತ್ತಾರೆ ಅವರು.

ಪರಿಶೀಲನೆ...

‘ಸರ್ಕಾರವು ಕೆ.ಜಿ. ಅಕ್ಕಿಗೆ ₹ 35ರಂತೆ ಪಾವತಿಸಿ ದುರ್ಬಲ ಕುಟುಂಬಗಳಿಗೆ ಉಚಿತವಾಗಿ ನೀಡುತ್ತಿದೆ. ಈ ಯೋಜನೆಯ ಲಾಭವನ್ನು ಆರ್ಥಿಕವಾಗಿ ಸದೃಢವಾಗಿರುವ ಕೆಲವು ಕುಟುಂಬಗಳು ಸುಳ್ಳು ಮಾಹಿತಿ ನೀಡಿಯೋ, ಗೊತ್ತಿಲ್ಲದೆಯೋ ಪಡೆದಿರುವುದು ಕಂಡುಬಂದಿದೆ’ ಎನ್ನುತ್ತಾರೆ ಅಧಿಕಾರಿಗಳು.

ಕಾರ್ಯಾಚರಣೆ ಮುಂದುವರಿದಿದ್ದು, ಇತರರಿಗೆ ಎಚ್ಚರಿಕೆಯ ಸಂದೇಶ ರವಾನಿಸಲಾಗುತ್ತಿದೆ. ಸರ್ಕಾರದ ಸೌಲಭ್ಯ ದುರ್ಬಳಕೆ ಸರಿಯಲ್ಲ ಎಂದು ತಿಳಿಸಲಾಗುತ್ತಿದೆ. ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು, 3 ಹೆಕ್ಟೇರ್‌ಗಿಂತ ಹೆಚ್ಚಿನ ಜಮೀನು ಹೊಂದಿರುವವರು, ವಾರ್ಷಿಕ ₹ 1.20 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿದವರು ಬಿಪಿಎಲ್‌ ಪಡಿತರ ಚೀಟಿ ಪಡೆದಿದ್ದಾರೆಯೇ ಎಂದು ಪರಿಶೀಲಿಸಲಾಗುತ್ತಿದೆ.

‘2019–20ರಿಂದ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಗಂಭೀರವಾಗಿ ಪರಿಗಣಿಸುವಂತೆ ಆಹಾರ ಇನ್‌ಸ್ಪೆಕ್ಟರ್‌ಗಳಿಗೆ ಸೂಚಿಸಲಾಗಿದೆ. ಅನಧಿಕೃತ ಚೀಟಿ ಎಂಬುದು ಗೊತ್ತಾಗುತ್ತಿದ್ದಂತೆಯೆ ಅದನ್ನು ಎಪಿಎಲ್‌ಗೆ ಪರಿವರ್ತಿಸಲಾಗುತ್ತದೆ. ಬಳಿಕ ದಂಡ ವಸೂಲಿ ಮಾಡಲಾಗುತ್ತಿದೆ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಂಟಿ ನಿರ್ದೇಶಕಿ ಕುಮುದಾ ಶರತ್ ‘ಪ್ರಜಾವಾಣಿ’ಗೆ ತಿಳಿಸಿದರು.

6,661 ಅರ್ಜಿ ಬಾಕಿ

ಜಿಲ್ಲೆಯಲ್ಲಿ 1,009 ನ್ಯಾಯಬೆಲೆ ಅಂಗಡಿಗಳಿವೆ. 7,07,547 ಆದ್ಯತಾ (ಬಿಪಿಎಲ್‌– 6,57,039, ಅಂತ್ಯೋದಯ ಯೋಜನೆ–50,508) ಚೀಟಿಗಳಿವೆ. 1,07,647 ಎಪಿಎಲ್‌ ಚೀಟಿಗಳಿವೆ. ಹೊಸದಾಗಿ ಬಿಪಿಎಲ್‌ ಪಡಿತರ ಚೀಟಿ ಕೋರಿ ಸಲ್ಲಿಕೆಯಾಗಿರುವ 6,661 ಅರ್ಜಿಗಳ ಪರಿಶೀಲನೆ ಬಾಕಿ ಇದೆ. ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯುವುದಕ್ಕಾಗಿ ಬಿಪಿಎಲ್‌ ಪಡಿತರ ಚೀಟಿಯನ್ನು ಮಾನದಂಡವನ್ನಾಗಿ ಮಾಡಿದ್ದರಿಂದ, ಚೀಟಿ ಕೋರಿ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಮರಳಿಸಬೇಕು

ಶ್ರೀಮಂತರೂ ಸುಳ್ಳು ಮಾಹಿತಿ ಕೊಟ್ಟು ಬಿಪಿಎಲ್‌ ಪಡಿತರ ಚೀಟಿ ತೆಗೆದುಕೊಂಡಿರುವುದು ಬೆಳಕಿಗೆ ಬಂದಿದೆ. ಅಂಥವರು ಕೂಡಲೇ ಚೀಟಿಗಳನ್ನು ಮರಳಿಸಬೇಕು.

–ಕುಮುದಾ ಶರತ್, ಉಪನಿರ್ದೇಶಕಿ, ಆಹಾರ ಇಲಾಖೆ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT