ಭಾನುವಾರ, ಜನವರಿ 17, 2021
28 °C
ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಉ‍ಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಅಭಿಪ್ರಾಯ

ಎನ್‌ಇಪಿ ಜಾರಿಯಿಂದ ‘ನವ ಭಾರತ ನಿರ್ಮಾಣ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಆತ್ಮನಿರ್ಭರ ಭಾರತ’ ಯೋಜನೆಯ ಯಶಸ್ಸು ಮತ್ತು ಪ್ರಧಾನಿ ಅವರ ‘ನವಭಾರತ ನಿರ್ಮಾಣ’ದ ಕನಸು ನನಸಾಗಬೇಕಾದರೆ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಪರಿಣಾಮಕಾರಿ ಜಾರಿ ಅಗತ್ಯವಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ಕೆಆರ್‌ಎಂಎಸ್‌ಎಸ್‌), ಮೈಸೂರು ವಿವಿ ಮತ್ತು ಕೆಎಸ್‌ಒಯು ಸಂಯುಕ್ತ ಆಶ್ರಯದಲ್ಲಿ ‘ಕರ್ನಾಟಕದಲ್ಲಿ ಹೊಸ ಶಿಕ್ಷಣ ನೀತಿ ಅನುಷ್ಠಾನ: ಸವಾಲುಗಳು ಮತ್ತು ಮುಂದಿನ ದಾರಿ’ ಎಂಬ ವಿಷಯದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ವ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ವರ್ಚುವಲ್‌ ವೇದಿಕೆಯಲ್ಲಿ ಮಾತನಾಡಿದರು.

ಎನ್‌ಇಪಿ ಪರಿಣಾಮಕಾರಿ ಜಾರಿಗೆ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆಯಿಟ್ಟಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಈ ವಿಚಾರದಲ್ಲಿ ಕರ್ನಾಟಕ ಮುಂದಿದೆ. ಎನ್‌ಇಪಿ ಜಾರಿ ಸಂಬಂಧ ರಚಿಸಿದ್ದ ಕಾರ್ಯಪಡೆ ಈಗಾಗಲೇ ವರದಿಯನ್ನು ನೀಡಿದ್ದು, ಅದಕ್ಕೆ ಸಂಪುಟ ಒಪ್ಪಿಗೆ ಸೂಚಿಸಿದೆ. ಇದೀಗ ನೀತಿಯನ್ನು ಕಾರ್ಯರೂಪಕ್ಕಿಳಿಸುವ ಸಮಿತಿಯನ್ನು ರಚಿಸುವ ಕೆಲಸವಷ್ಟೇ ಬಾಕಿಯಿದೆ ಎಂದು ಹೇಳಿದರು.

ಭಾರತದಲ್ಲಿ ಶಿಕ್ಷಣ ಹೇಗಿರಬೇಕು? ಯಾವ ದಿಕ್ಕಿನಲ್ಲಿ ಸಾಗಬೇಕು? ಎಂಬ ಬಗ್ಗೆ ಸ್ಪಷ್ಟ ಮಾರ್ಗಸೂಚಿಯನ್ನು ನೀಡಿರುವ ಎನ್‌ಇಪಿ, ಮುಂದಿನ ಕೆಲವು ವರ್ಷಗಳಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸಲಿದೆ ಎಂದು ತಿಳಿಸಿದರು.

ಇದೀಗ ಕಾಗದದಲ್ಲೇ ಇರುವ ನೀತಿಯ ಬಗ್ಗೆ ಮಾತನಾಡುವುದು ಸುಲಭ. ಆದರೆ ಪರಿಣಾಮಕಾರಿ ಜಾರಿಗೆ ಕಠಿಣ ಪರಿಶ್ರಮ ನಡೆಸಬೇಕಿದೆ. ಶಿಕ್ಷಣದ ಬಗ್ಗೆ ಜನರ ಮನಸ್ಸಿನಲ್ಲಿರುವ ಭಾವನೆಯನ್ನು ಬದಲಾಯಿಸುವ ವೇಳೆ ಸಾಕಷ್ಟು ಸವಾಲುಗಳು ಎದುರಾಗಲಿವೆ. ಇದಕ್ಕೆ ಸಂಬಂಧಪಟ್ಟ ಪ್ರತಿಯೊಬ್ಬರೂ ಬದ್ಧತೆಯಿಂದ ಕೆಲಸ ಮಾಡಬೇಕು. ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಪಾತ್ರವೂ ಮುಖ್ಯವಾಗಿದೆ ಎಂದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ ಎಲ್ಲ ಆಯಾಮಗಳಿಂದ ನೋಡಿದರೂ ಸಮಗ್ರವಾಗಿದೆ. ಪೂರ್ವ ಪ್ರಾಥಮಿಕದಿಂದ ಹಿಡಿದು ಉನ್ನತ ಶಿಕ್ಷಣದವರೆಗಿನ ಶಿಕ್ಷಣ ವ್ಯವಸ್ಥೆ ಹೇಗಿರಬೇಕು ಎಂಬುದನ್ನು ತಿಳಿಸುತ್ತದೆ. ಶಿಕ್ಷಣ ಕ್ಷೇತ್ರದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಲಿದೆ ಎಂದರು.

ಕೆಆರ್‌ಎಂಎಸ್‌ಎಸ್‌ ಅಧ್ಯಕ್ಷ ಡಾ.ರಘು ಅಕಮಂಚಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೈಸೂರು ವಿ.ವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿವಿ ಕುಲಸಚಿವ ಡಾ.ಆರ್‌.ಶಿವಪ್ಪ, ಕೆಎಸ್‌ಒಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್‌, ಕುಲಸಚಿವ ಡಾ.ಲಿಂಗರಾಜ ಗಾಂಧಿ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ಡಾ.ಗೋಪಾಲಕೃಷ್ಣ ಜೋಶಿ ಪಾಲ್ಗೊಂಡಿದ್ದರು.

‘ಸರ್ಕಾರವನ್ನು ಕಾಯುವುದು ಬೇಡ’

ಎನ್‌ಇಪಿ ಜಾರಿಗೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ತನ್ನ ಬದ್ಧತೆ ತೋರಿಸಿದೆ. ವಿಶ್ವವಿದ್ಯಾಲಯಗಳು, ಸರ್ಕಾರದ ಪ್ರಮುಖರು, ಧಾರ್ಮಿಕ ಮುಖಂಡರ ಆಶೀರ್ವಾದೊಂದಿಗೆ ಈ ನೀತಿಯ ಅನುಷ್ಠಾನ ಸಂಬಂಧ ಒಂದು ನಿರ್ದಿಷ್ಟವಾದ ಯೋಜನೆಯೊಂದಿಗೆ ಮುಂದುವರಿಯುವ ಅಗತ್ಯತೆಯಿದೆ ಎಂದು ಯುಜಿಸಿ ಮತ್ತು ಎನ್‌ಇಪಿ ಕರಡು ಸಮಿತಿ ಸದಸ್ಯ ಡಾ.ಎಂ.ಕೆ.ಶ್ರೀಧರ್‌ ತಿಳಿಸಿದರು.

 ‘ಆದರೆ ಸರ್ಕಾರ ಅಥವಾ ವಿಶ್ವವಿದ್ಯಾಲಯಗಳು ಎಲ್ಲವನ್ನೂ ಮಾಡಿಕೊಡುತ್ತದೆ ಎಂದು ನಿರೀಕ್ಷೆ ಮಾಡಿದರೆ ನಾವು ಗುರಿತಲುಪಲು ಸಾಧ್ಯವಿಲ್ಲ. ಯಾರಿಗೂ ಕಾಯದೆಯೇ ನಮ್ಮ ಹಂತದಲ್ಲಿ, ನಮ್ಮ ಸಂಸ್ಥೆಯ ಹಂತದಲ್ಲಿ ಮತ್ತು ನನ್ನ ಹಂತದಲ್ಲಿ ಏನು ಮಾಡಬೇಕು ಎಂದು ಯೋಚಿಸಬೇಕಿದೆ’ ಎಂದು ಕಿವಿಮಾತು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.