ಸೋಮವಾರ, ಸೆಪ್ಟೆಂಬರ್ 20, 2021
24 °C
‘ಕಾರ್ಗಿಲ್ ಪಾರ್ಕ್’ ನಿರ್ಮಾಣಕ್ಕೆ ಯೋಜನೆ: ಶಾಸಕ ರಾಮದಾಸ್

ಹುತಾತ್ಮ ಯೋಧರ ಸ್ಮರಣೆ: ಮೈಸೂರಿನಲ್ಲಿ ಕಾರ್ಗಿಲ್‌ ವಿಜಯೋತ್ಸವ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಗರದಲ್ಲಿ ಸೋಮವಾರ ಕಾರ್ಗಿಲ್ ವಿಜಯೋತ್ಸವ ದಿನವನ್ನು ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಆಚರಿಸಲಾಯಿತು.

ಮೈಸೂರು ಎಕ್ಸ್‌ಸರ್ವೀಸ್‌ಮ್ಯಾನ್ ಮೂವ್‌ಮೆಂಟ್ ವತಿಯಿಂದ ಕೆ.ಸಿ.ಬಡಾವಣೆಯಲ್ಲಿರುವ ‘ಹುತ್ಮಾತ ಯೋಧ ಪ್ರಶಾಂತ್’ ಉದ್ಯಾನದಲ್ಲಿ ನಡೆದ ಕಾರ್ಗಿಲ್ ವಿಜಯೋತ್ಸವದಲ್ಲಿ, ಪ್ರಶಾಂತ್ ಅವರ ಪೋಷಕರಿಗೆ ಗೌರವ ಸಮರ್ಪಿಸಲಾಯಿತು. ಪ್ರಶಾಂತ್ ಹುತಾತ್ಮರಾಗುವ ಸಂದರ್ಭದಲ್ಲಿ ಅವರೊಂದಿಗೆ ಇದ್ದ ಹರೀಶ್ ಅವರು ಘಟನೆಯನ್ನು ಸ್ಮರಿಸಿದರು.

ಈ ವೇಳೆ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್, ‘ಹುತಾತ್ಮ ಯೋಧ ಪ್ರಶಾಂತ್ ಉದ್ಯಾನವನ್ನು ಸುಮಾರು ₹ 1 ಕೋಟಿ ವೆಚ್ಚದಲ್ಲಿ ‘ಕಾರ್ಗಿಲ್ ಉದ್ಯಾನ’ವನ್ನಾಗಿ ಅಭಿವೃದ್ಧಿಪಡಿಸುವ ಯೋಜನೆ ಇದೆ. ಇಲ್ಲಿ ಸೈನ್ಯ ಮತ್ತು ಯುದ್ಧಕ್ಕೆ ಸಂಬಂಧಿಸಿದ ವಸ್ತುಗಳನ್ನು ಪ್ರದರ್ಶನಕ್ಕಿಡಲಾಗುವುದು’ ಎಂದು ಹೇಳಿದರು.

ಮುಂದಿನ ವರ್ಷ ಕೇಂದ್ರ ರಕ್ಷಣಾ ಸಚಿವರನ್ನು ಇಲ್ಲಿಗೆ ಕರೆಸಿ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಭರವಸೆ ನೀಡಿದರು.

ಪಾಲಿಕೆ ಸದಸ್ಯರಾದ ಛಾಯಾದೇವಿ, ವಲಯ-3ರ ಸಹಾಯ ಆಯುಕ್ತ ಹಾಗೂ ಮಾಜಿ ಸೈನಿಕರೂ ಆದ ರಾಜೇಶ್, ಮೈಸೂರು ಎಕ್ಸ್ ಸರ್ವೀಸ್ ಮ್ಯಾನ್ ಮೂವ್‌ಮೆಂಟ್‌ ಸಂಸ್ಥಾಪಕ ವಿ.ಮಹೇಶ್, ಅಧ್ಯಕ್ಷ ಪ್ರೀನ್ಸ್‌, ಕಾರ‌್ಯದರ್ಶಿ ಶ್ರೀಧರ್‌ ಇದ್ದರು.

ನಂತರ ಕಾರ್ಯಕರ್ತರು ಕಾರಂಜಿ ಕೆರೆ, ಮಾಲ್‌ ಆಫ್‌ ಮೈಸೂರು, ಎಂ.ಜಿ.ರಸ್ತೆ ಮಾರುಕಟ್ಟೆ, ಅಗ್ರಹಾರ ವೃತ್ತ, ಆರ್‌ಟಿಒ, ಜಿಲ್ಲಾ ಪಂಚಾಯಿತಿ, ಜಿಲ್ಲಾಧಿಕಾರಿ ಕಚೇರಿ, ಒವೆಲ್‌ ಮೈದಾನದವರೆಗೆ ಬೈಕ್‌ ರ‍್ಯಾಲಿ ನಡೆಸಿದರು.

ಒವೆಲ್ ಮೈದಾನದಲ್ಲಿ ಶಾಸಕ ಎಲ್.ನಾಗೇಂದ್ರ ಅವರು ಮಾಜಿ ಯೋಧರನ್ನು ಸನ್ಮಾನಿಸಿದರು. ಬಳಿಕ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ‘ಯುದ್ಧ ಸ್ಮಾರಕ’ವನ್ನು ನಿರ್ಮಿಸುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.

ನಿವೃತ್ತ ಸೈನಿಕರಿಗೆ ಸನ್ಮಾನ: ಕಾರ್ಗಿಲ್ ದಿನದ ಅಂಗವಾಗಿ ಟೀಂ ಮೈಸೂರು ತಂಡದ ಕಾರ್ಯಕರ್ತರು ಇಲ್ಲಿನ ಫೀಲ್ಡ್‌ ಮಾರ್ಷಲ್ ಕಾರ್ಯಪ್ಪ ಅವರ ಪುತ್ಥಳಿಯ ಮುಂಭಾಗ ನಿವೃತ್ತ ಸೈನಿಕರಾದ ಸುಬೇದಾರ್ ಎಂ.ಎಂ.ಮುತ್ತಪ್ಪ, ಹವಲ್ದಾರ್ ಪಿ.ಕೆ.ಬಿದ್ದಪ್ಪ, ಹವಲ್ದಾರ್ ಗಣೇಶ್, ನಾಯಕ್ ಬಿ.ಬದ್ರಿ ನಾರಾಯಣ ಸಿಂಗ್, ಜಿ.ಹಿರಿಯಣ್ಣ ಸನ್ಮಾನಿಸಿದರು. ಈ ವೇಳೆ ಕಾರ್ಗಿಲ್ ಯುದ್ಧದ ರೋಚಕ ಕ್ಷಣಗಳನ್ನು ಯೋಧ ಪಿ.ಕೆ.ಬಿದ್ದಪ್ಪ ನೆನಪಿಸಿಕೊಂಡರು.

ತಂಡದ ಸಂಚಾಲಕ ಗೋಕುಲ್ ಗೋವರ್ಧನ್, ಸದಸ್ಯ ಪ್ರಸನ್ನ, ಸಂಯೋಜಕ ಮಂಜು, ಪಾಲಿಕೆ ಸದಸ್ಯ ರವೀಂದ್ರ, ಚಾಮರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸೋಮಶೇಖರ್ ರಾಜು, ರೈತ ಮೋರ್ಚಾದ ದಿನೇಶ್, ತಂಡದ ಹಿರಿಯ ಸದಸ್ಯರಾದ ಹರೀಶ್ ಬಾಬು, ಇದ್ದರು.

ರಕ್ತದಾನ ಶಿಬಿರ: ಇಲ್ಲಿನ ಜೀವಧಾರ ಲಯನ್ಸ್ ರಕ್ತನಿಧಿ ಕೇಂದ್ರದಲ್ಲಿ ‘ರಕ್ತದಾನ ಮಹಾದಾನ ಗೋ ಭಕ್ತ ಸಂಘಟನೆ ಟ್ರಸ್ಟ್’ (ಆರ್‌ಜಿಎಸ್‌ ಗ್ರೂಪ್), ರಾವಣ ರಾಜ್‌ಪೂತ್ ಸಮಾಜ ಹಾಗೂ ಶ್ರೀ ಘನಚಿ ಸಮಾಜ ವತಿಯಿಂದ ಕಾರ್ಗಿಲ್ ದಿನದ ಅಂಗವಾಗಿ 40 ಯೂನಿಟ್ ರಕ್ತವನ್ನು ದಾನಿಗಳಿಂದ ಸಂಗ್ರಹಿಸಲಾಯಿತು.

ಮುಖಂಡರಾದ ದೇವೇಂದ್ರ ಪರಿಯರಿಯ, ಕೆ. ಮಹೇಂದ್ರ ಸಿಂಗ್ ಕಾಳಪ್ಪ, ರಾಕಿ ಬಲ್ವಾನ್ ಸಿಂಗ್, ಸಿಕ್ಕಿ ಮ್ ಪ್ರಕಾಶ್ ಚಂದ್, ಚಿರಂಜೀ ಲಾಲ್,ಕರ್ಮರಾಮ್ ಸಿಂಗ್,ಪೃಥ್ವಿ ಸಿಂಗ್ ತಂದವತ್, ಜನಕ್ ಸಿಂಗ್, ಗಿರೀಶ್, ಮುತ್ತಣ್ಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.