ಸೋಮವಾರ, ಆಗಸ್ಟ್ 8, 2022
23 °C
ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರೊ.ಟಿ.ಟಿ. ಬಸವನಗೌಡ ಮನವಿ

ಬುಡಕಟ್ಟು ಅಧ್ಯಯನ ವರದಿ ಜಾರಿಗೊಳ್ಳಲಿ : ಪ್ರೊ.ಟಿ.ಟಿ. ಬಸವನಗೌಡ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸಂಶೋಧನಾ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಬುಡಕಟ್ಟು ಸಮುದಾಯಗಳ ಬಗ್ಗೆ ಸಲ್ಲಿಸಿರುವ ಅಧ್ಯಯನ ವರದಿಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಕ್ರಮವಹಿಸಬೇಕು ಎಂದು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರೊ.ಟಿ.ಟಿ.ಬಸವನಗೌಡ ಆಗ್ರಹಿಸಿದರು.

ಮೈಸೂರು ವಿಶ್ವವಿದ್ಯಾಲಯ ಉನ್ನತ ಭಾರತ ಅಭಿಯಾನ ವಿಭಾಗ, ಸಮಾಜಕಾರ್ಯ ಅಧ್ಯಯನ ವಿಭಾಗ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ರಾಜ್ಯ ಮೂಲ ಆದಿವಾಸಿ ವೇದಿಕೆ ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ‘ಅರಣ್ಯ ಆಧಾರಿತ ಆದಿವಾಸಿಗಳ ಸ್ಥಿತಿಗತಿ: ಎದುರಿಸುತ್ತಿರುವ ಸಮಸ್ಯೆಗಳು, ಅಗತ್ಯವಿರುವ ಸ್ಪಂದನೆ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬುಡಕಟ್ಟು ಸಂಶೋಧನಾ ಸಂಸ್ಥೆಯ ಮೂಲಕ ಸುಮಾರು 42 ಅಧ್ಯಯನ ವರದಿಗಳನ್ನು ಹಾಗೂ ಶಿಫಾರಸುಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಲ್ಲಿಸಲಾಗಿದೆ. ಅವುಗಳು ಸರ್ಕಾರದ ಹಂತದಲ್ಲಿ ಚರ್ಚೆಯಾಗಿ ಕಾರ್ಯಕ್ರಮದ ರೂಪದಲ್ಲಿ ಬರಬೇಕು. ಸರ್ಕಾರವು ಸಮುದಾಯಗಳ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸಲು ಈ ಅಧ್ಯಯನ ವರದಿಗಳನ್ನು ಬಳಸಿಕೊಳ್ಳಬೇಕು ಸಲಹೆ ನೀಡಿದರು.

ಸರ್ಕಾರವು ಈ ಸಮುದಾಯಗಳ ಬಗ್ಗೆ ತನ್ನ ಬಳಿ ಮಾಹಿತಿ ಇಲ್ಲದ್ದಕ್ಕೆ ವಿವಿಧ ಸಮಿತಿಗಳ ಮೂಲಕ ಅಧ್ಯಯನ ನಡೆಸಿ ವರದಿ ಪಡೆದುಕೊಂಡಿದೆ. ಆದರೆ, ವರದಿ ಸಲ್ಲಿಕೆಯಾಗಿ ಹಲವು ವರ್ಷಗಳು ಕಳೆದರೂ ಶಿಫಾರಸುಗಳು ಕಾರ್ಯರೂಪಕ್ಕೆ ಬಂದಿಲ್ಲ. ಸಮಸ್ಯೆಗಳು ಮತ್ತು ಸವಾಲುಗಳು ಹಾಗೆಯೇ ಉಳಿದುಕೊಂಡಿವೆ. ಬುಡಕಟ್ಟು ಜನರಿಗೆ ಅವರ ಹಕ್ಕುಗಳನ್ನು ಕೊಡುವ ಕೆಲಸವನ್ನು ಸರ್ಕಾರದ ಸಂಬಂಧಪಟ್ಟ ಇಲಾಖೆಗಳು ಮಾಡಬೇಕಿದೆ ಎಂದರು.

ಮೈಸೂರು ವಿ.ವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್‌ ಮಾತನಾಡಿ, ‘ಆದಿವಾಸಿಗಳು ತಾವೇ ಸಂಘಟಿತರಾಗಿ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ರಂಗದಲ್ಲಿ ತಮ್ಮನ್ನು ಗುರುತಿಸಿಕೊಳ್ಳುತ್ತಿರುವುದು ಮತ್ತು ತಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಸಾಮರ್ಥ್ಯ ಪಡೆದುಕೊಂಡಿರುವುದು ಸಂತಸದ ಸಂಗತಿ’ ಎಂದರು.

ಮೈಸೂರು ವಿ.ವಿಯು ತನ್ನ ವ್ಯಾಪ್ತಿಯಲ್ಲಿ ಬರುವ ಜೇನುಕುರುಬ, ಸೋಲಿಗ, ಬೆಟ್ಟದ ಕುರುಬ, ಎರವ ಒಳಗೊಂಡಂತೆ 13 ಜನಾಂಗಗಳ ಕುಲ ಶಾಸ್ತ್ರೀಯ ಅಧ್ಯಯನ ನಡೆಸಿ ಅವರ ಸುಸ್ಥಿರ ಅಭಿವೃದ್ಧಿಗೆ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.

ರಾಜ್ಯ ಮೂಲ ಆದಿವಾಸಿ ವೇದಿಕೆ ಅಧ್ಯಕ್ಷ ಕೆ.ಎನ್‌.ವಿಠಲ್ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿವಿ ಕುಲಸಚಿವ ಪ್ರೊ.ಆರ್‌.ಶಿವಪ್ಪ, ಸಮಾಜಕಾರ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಚಂದ್ರಮೌಳಿ, ಸಹಾಯಕ ಪ್ರಾಧ್ಯಾಪಕರಾದ ಡಾ.ಎಚ್‌.ಪಿ.ಜ್ಯೋತಿ, ವಿ.ಮುತ್ತಯ್ಯ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.