ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸ್ತ್ರೀಯ ಕನ್ನಡ ಕೇಂದ್ರಕ್ಕೆ ಪಠ್ಯಪುಸ್ತಕದ ಹೊಣೆ?

ಪಿಎಂಬಿ ಸದಸ್ಯರ ಆಕ್ಷೇಪ l ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ಪತ್ರ
Last Updated 4 ಜನವರಿ 2021, 19:30 IST
ಅಕ್ಷರ ಗಾತ್ರ

ಮೈಸೂರು: ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಪರಂಪರೆಗಳ ಸಂಶೋಧನೆಗಳಲ್ಲಿ ತೊಡಗಿಕೊಂಡಿದ್ದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು ಇನ್ನುಮುಂದೆ ರಾಷ್ಟ್ರೀಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್‌ಸಿಇಆರ್‌ಟಿ) 6ರಿಂದ 12ನೇ ತರಗತಿ ಪಠ್ಯಪುಸ್ತಕ ಸಿದ್ಧಪಡಿಸುವ ಕಾರ್ಯದಲ್ಲಿ ಮಾತ್ರ ನಿರತವಾಗಲಿದೆಯೇ?

ಹೀಗೊಂದು ಪ್ರಶ್ನೆ ಸಿಐಐಎಲ್‌ ಆವರಣದಲ್ಲಿ ಕೇಳಿಬರುತ್ತಿದೆ. ಭಾರತೀಯ ಭಾಷಾ ಸಂಸ್ಥಾನವನ್ನು (ಸಿಐಐಎಲ್‌) ಭಾರತೀಯ ಭಾಷಾ ವಿಶ್ವವಿದ್ಯಾಲಯವನ್ನಾಗಿ ಪರಿವರ್ತಿಸಿ, ಅದರ ಅಡಿಯಲ್ಲಿ ಕನ್ನಡ ಕೇಂದ್ರವನ್ನು ತರುತ್ತಿದ್ದಾರೆ ಎಂಬ ಅನುಮಾನದ ನಡುವೆಯೇ ಈ ಪ್ರಶ್ನೆ ಕೇಳಿಬಂದಿದ್ದು, ಕೇಂದ್ರದ ಸಂಶೋಧನೆಗಳಿಗೆ ತಡೆಯಾಗಿ, ಅದರ ಸ್ವಾಯತ್ತತೆಗೆ ಧಕ್ಕೆಯಾಗುವ ಆತಂಕ ವ್ಯಕ್ತವಾಗಿದೆ.

ಇತ್ತೀಚೆಗೆ ನಡೆದ ಶಾಸ್ತ್ರೀಯ ಭಾಷೆಗಳ ಯೋಜನಾ ಮೇಲ್ವಿಚಾರಣಾ ಸಮಿತಿಯ (ಪಿಎಂಬಿ) ಸಭೆಯಲ್ಲಿ ಸಿಐಐಎಲ್‌ ನಿರ್ದೇಶಕ ಪ್ರೊ.ವೆಂಕಟೇಶಮೂರ್ತಿ ಅವರು, ‘ಶಾಸ್ತ್ರೀಯ ಭಾಷಾ ಕೇಂದ್ರಗಳು ಇನ್ನುಮುಂದೆ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಪಠ್ಯಪುಸ್ತಕಗಳನ್ನು ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿ, ಎನ್‌ಸಿಇಆರ್‌ಟಿಗೆ ನೆರವು ನೀಡಬೇಕು’ ಎಂದು ಸೂಚಿಸಿದ್ದಾರೆ.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಪಿಎಂಬಿಯ ಕೆಲ ಸದಸ್ಯರು, 2011ರ ಎಂಎಚ್‌ಆರ್‌ಡಿ ನಿಯಮಾವಳಿಯಂತೆ ಶಾಸ್ತ್ರೀಯ ಭಾಷಾ ಕೇಂದ್ರಗಳು ಸಂಶೋಧನಾ ಕಾರ್ಯಗಳಲ್ಲಿ ನಿರತವಾಗುವಂತೆ ಯಥಾಸ್ಥಿತಿ ಕಾಯ್ದುಕೊಂಡು ಸ್ವಾಯತ್ತತೆ ಪಡೆಯುವತ್ತ ದಾಪುಗಾಲು ಹಾಕುವಂತೆ ಸಲಹೆ ನೀಡಿದ್ದಾರೆ. ಅಲ್ಲದೆ, ಈ ಸಂಬಂಧ ಕನ್ನಡ ಹಾಗೂ ತೆಲುಗು ಭಾಷೆಗಳ ಪಿಎಂಬಿಯ ಕೆಲ ಸದಸ್ಯರು ಕೇಂದ್ರ ಶಿಕ್ಷಣ ಸಚಿವಾಲಯಕ್ಕೂ ಪತ್ರ ಬರೆದಿದ್ದಾರೆ.

‘ಶಾಸ್ತ್ರೀಯ ಕನ್ನಡ ಕೇಂದ್ರದ ಮೂಲ ಧ್ಯೇಯೋದ್ದೇಶಗಳಿಗೆ ಧಕ್ಕೆಯಾಗದಂತೆ ಸಂಶೋಧನಾ ಕಾರ್ಯಗಳ ಜೊತೆಗೆ ಪಠ್ಯಪುಸ್ತಕ ಸಿದ್ಧಪಡಿಸುವ ಕಾರ್ಯಗಳನ್ನೂ ಮಾಡಬಹುದು. ಆದರೆ, ಸಂಶೋಧನಾ ಕಾರ್ಯಗಳನ್ನು ಹಿಂದಿಕ್ಕಿ ಪಠ್ಯಪುಸ್ತಕ ಸಿದ್ಧಪಡಿಸುವುದರಿಂದ ಮತ್ತೆ ಕೇಂದ್ರದ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಅಲ್ಲದೆ, ಸುಮಾರು 35 ವರ್ಷಗಳ ಶೈಕ್ಷಣಿಕ, ಸಂಶೋಧನಾತ್ಮಕ ಅನುಭವವಿರುವ, ಪಿಎಂಬಿ ಸದಸ್ಯರ ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಳ್ಳದಿರುವುದು ನೋವು ಉಂಟು ಮಾಡಿದೆ’ ಎಂದು ಪಿಎಂಬಿ ಸದಸ್ಯರೊಬ್ಬರು ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

‘ಪಠ್ಯಪುಸ್ತಕ ರೂಪಿಸುವ ಕಾರ್ಯದಲ್ಲಿ ಮಾತ್ರವೇ ತೊಡಗಬೇಕು ಎಂದು ನಾನು ಸೂಚನೆ ನೀಡಿಲ್ಲ. ಈ ಬಗ್ಗೆ ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ಪಿಎಂಬಿ ಸದಸ್ಯರು ಬರೆದಿರುವ ಪತ್ರವನ್ನು ಪರಿಶೀಲಿಸಿದ ಬಳಿಕ ಉತ್ತರಿಸುವೆ’ ಎಂದು ಸಿಐಐಎಲ್‌ ನಿರ್ದೇಶಕ ಪ್ರೊ.ವೆಂಕಟೇಶಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸ್ವಾಯತ್ತತೆಗೆ ಧಕ್ಕೆಯಾಗದು’

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನುಸಾರ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣದಲ್ಲಿ ಶಾಸ್ತ್ರೀಯ ಭಾಷೆಗೆ ಸಂಬಂಧಿಸಿದಂತೆ ಪಠ್ಯಕ್ರಮ ಯಾವ ರೀತಿ ಇರಬೇಕು ಎಂಬ ಬಗ್ಗೆ ರೂಪುರೇಷೆ ಸಿದ್ಧಪಡಿಸಲು ಸಿಐಐಎಲ್‌ಗೆ ಸಚಿವಾಲಯವು ಸೂಚಿಸಿದೆ. ಈ ಕೆಲಸ ಒಂದು ವರ್ಷದೊಳಗೆ ಆಗಬೇಕಿದೆ. ಹೀಗಾಗಿ, ಬೇರೆಲ್ಲಾ ಕೆಲಸಗಳಿಗಿಂತ ಪಠ್ಯಪುಸ್ತಕದ ರೂಪುರೇಷೆ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗುವಂತೆ ಸಿಐಐಎಲ್‌ ನಿರ್ದೇಶಕರು ಸೂಚಿಸಿರುವ ಸಾಧ್ಯತೆ ಇದೆ. ಆದರೆ, ಇದರಿಂದ ಕೇಂದ್ರದ ಸ್ವಾಯತ್ತತೆಗೆ ಧಕ್ಕೆಯಾಗದು ಎಂದು ಪಿಎಂಬಿ ಸದಸ್ಯರೂ ಆದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT