ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಪುರ: 12 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬಿತ್ತನೆ

ಜಮೀನುಗಳಲ್ಲಿ ಎತ್ತ ನೋಡಿದರೂ ಹಚ್ಚಹಸಿರಿನ ರಾಗಿ ಪೈರು
Last Updated 26 ಸೆಪ್ಟೆಂಬರ್ 2021, 4:11 IST
ಅಕ್ಷರ ಗಾತ್ರ

ಜಯಪುರ: ಹೋಬಳಿಯಾದ್ಯಂತ ಮಳೆಯಾಶ್ರಿತ ಬೇಸಾಯಪದ್ಧತಿಯನ್ನು ರೈತರು ನೆಚ್ಚಿಕೊಂಡಿದ್ದಾರೆ. ಮುಂಗಾರಿನ ಆರಂಭದಲ್ಲಿ ದ್ವಿದಳ ಧಾನ್ಯಗಳನ್ನು ಬಿತ್ತಿದ್ದರು. ನಿರೀಕ್ಷಿತ ಮಳೆ ಬಾರದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಕಳೆದೆರಡು ತಿಂಗಳಿನಿಂದ ವಾಡಿಕೆ ಮಳೆ ಬೀಳುತ್ತಿರುವುದರಿಂದ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ರಾಗಿಯನ್ನು ಬಿತ್ತನೆ ಮಾಡಿದ್ದಾರೆ.

ಹೀಗಾಗಿ, ಜಮೀನುಗಳಲ್ಲಿ ಎತ್ತ ನೋಡಿದರೂ ಹಚ್ಚಹಸಿರಿನ ರಾಗಿ ಪೈರು ಕಂಡುಬರುತ್ತಿದೆ.

ದೀರ್ಘಾವಧಿಯ ರಾಗಿ ತಳಿಗಳಾದ ಇಂಡಾಫ್–8, 9, ಎಂ.ಆರ್–1, ಐಆರ್–64, ಕೆ.ಆರ್.ಎಚ್–2, ಪಿ.ಆರ್– 202, ಜಿ.ಪಿ.ಯು–48, 45, ಕೆ.ಎಂ.ಆರ್– 204 ಬಿತ್ತನೆ ರಾಗಿಯನ್ನು ಕೇಂದ್ರದಿಂದ ವಿತರಿಸಲಾಗಿದೆ.

‘ರಾಗಿಯನ್ನು ನೇರವಾಗಿ ಬಿತ್ತನೆ ಮಾಡುವುದರಿಂದ ಇಳುವರಿ ಕಡಿಮೆ. ಸಸಿ ಮಡಿ ತಯಾರಿಸಿಕೊಂಡು ನಾಟಿ ಮಾಡುವುದರಿಂದ ಉತ್ತಮ ಇಳುವರಿ ಪಡೆಯಬಹುದು. ಜಾನುವಾರುಗಳಿಗೆ ಹೆಚ್ಚಿನ ಮೇವು ಸಿಗುತ್ತದೆ. ಬೇಸಿಗೆ ಕಾಲದಲ್ಲಿ ಮೇವಿನ ಅಭಾವ ನೀಗಿಸಲು ರೈತರು ರಾಗಿಯನ್ನು ಹೆಚ್ಚಾಗಿ ಬೆಳೆಯುತ್ತಿದ್ದಾರೆ’ ಎಂದು ಜಯಪುರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕಾರ್ತಿಕ್ ‘‍ಪ್ರಜಾವಾಣಿ’ಗೆ ತಿಳಿಸಿದರು.

‘ಮಳೆಯಾಶ್ರಿತವಾಗಿ ಬೆಳೆಯುವ ರಾಗಿಯಿಂದ ಪ್ರತಿ ಎಕರೆಗೆ 10ರಿಂದ 12 ಟನ್ ಇಳುವರಿ ಬರುತ್ತದೆ. ಇದರ ಜತೆಗೆ ಹುರುಳಿ ಬೆಳೆದಿದ್ದು, ಉತ್ತಮ ಆದಾಯ ಸಿಗುವ ನಿರೀಕ್ಷೆ ಇದೆ’ ಎಂದು ಗೋಪಾಲಪುರ ಗ್ರಾಮದ ರೈತ ವೆಂಕಟೇಶ್ ಹೇಳಿದರು.

ಜಿಲ್ಲೆಯಲ್ಲಿ ಜಯಪುರ ಮತ್ತು ಇಲವಾಲ ಹೋಬಳಿ ವ್ಯಾಪ್ತಿಯ ಗ್ರಾಮಗಳ ರೈತರು ಹೆಚ್ಚಾಗಿ ರಾಗಿ ಬಿತ್ತನೆ ಮಾಡಿದ್ದಾರೆ. ನಿರೀಕ್ಷೆಯಂತೆ ವಾಡಿಕೆ ಮಳೆ ಬಿದ್ದರೆ ರೈತರು ಭರ್ಜರಿ ಫಸಲು ಪಡೆಯಲಿದ್ದಾರೆ. ಸರ್ಕಾರವು ಬೆಂಬಲ ಬೆಲೆ ಘೋಷಿಸಿರುವುದರಿಂದ ಪ್ರತಿ ಕ್ವಿಂಟಾಲ್‌ಗೆ ₹2,500ರಿಂದ ₹3,000 ದರ ಸಿಗುವ ಸಾಧ್ಯತೆ ಇದೆ’ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಕೆ.ಪಿ.ವೀರಣ್ಣ ತಿಳಿಸಿದರು.

‘ವಾಣಿಜ್ಯ ಬೆಳೆಗಳು ಕ್ಷೀಣ’

‘ಹೋಬಳಿಯಾದ್ಯಂತ ಶೇ 40ರಷ್ಟು ರೈತರು ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ತರಕಾರಿ ಬೆಲೆಗಳ ಕುಸಿತದಿಂದ ಕಂಗಾಲಾಗಿದ್ದಾರೆ. ಮನೆ ಬಳಕೆಗಾಗಿ ರಾಗಿ ಬೆಳೆಯಲು ಆಸಕ್ತಿ ತೋರಿದ್ದಾರೆ. ಇದರಿಂದ ಜೋಳ, ಹತ್ತಿ ಸೇರಿದಂತೆ ವಾಣಿಜ್ಯ ಬೆಳೆಗಳು ಕಡಿಮೆಯಾಗಿವೆ’ ಎಂದು ಜಯಪುರ ಗ್ರಾಮದ ಕೃಷಿಕ ಗುಜ್ಜನಾಯಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT