ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಿನಿ ಹಿನ್ನೀರಿನ ಬಳಿ ಕಟ್ಟಡ–ಅರಣ್ಯ ಇಲಾಖೆ ನೋಟಿಸ್‌

Last Updated 14 ಜುಲೈ 2020, 17:19 IST
ಅಕ್ಷರ ಗಾತ್ರ

ಎಚ್‌.ಡಿ.ಕೋಟೆ: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕಬಿನಿ ಹಿನ್ನೀರಿನ ಬಳಿಯ ಪರಿಸರ ಸೂಕ್ಷ್ಮ ವಲಯದಲ್ಲಿ ಬೃಹತ್‌ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಬೆಳಕಿಗೆ ಬರುತ್ತಿದ್ದಂತೆ ಅರಣ್ಯ ಇಲಾಖೆ ನೋಟಿಸ್‌ ನೀಡಿದೆ.

ಎನ್‌.ಬೆಳತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರಾಪುರ ಗ್ರಾಮದಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿಯನ್ನು ಕೂಡಲೇ ನಿಲ್ಲಿಸಿ ದಾಖಲಾತಿಗಳನ್ನು ನೀಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ. ಈಗಾಗಲೇ ಎನ್‌.ಗ್ರಾಮ ಪಂಚಾಯಿತಿ ನೋಟಿಸ್‌ ನೀಡಿದೆ. ‌

‘ಕಾರಾಪುರ ಗ್ರಾಮದ ಸರ್ವೆ ನಂಬರ್‌ 142, 144ರಲ್ಲಿ ವಾಸದ ಮನೆ ಹೊರತುಪಡಿಸಿ ಹೆಚ್ಚಿನ ವಿಸ್ತೀರ್ಣದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಕಂಡುಬಂದಿದೆ. ಈ ಸ್ಥಳವನ್ನು ಜುಲೈ 13ರಂದು ಪರಿಶೀಲನೆ ನಡೆಸಿದಾಗ ಕಾಮಗಾರಿ ಪ್ರಗತಿಯಲ್ಲಿರುವುದು ಕಂಡುಬಂದಿದೆ. ಬೃಹತ್‌ ಕಟ್ಟಡ ನಿರ್ಮಾಣ ಮಾಡಲು ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾ ದೃಢೀಕರಣ ಪತ್ರವನ್ನು ಪಡೆಯಬೇಕಾಗಿರುತ್ತದೆ. ಆದರೆ, ಪತ್ರ ಪಡೆಯದೇ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಕಾನೂನು ಬಾಹಿರವಾಗುತ್ತದೆ. 7 ದಿನಗಳೊಳಗೆ ನೋಟಿಸ್‌ಗೆ ಸಮಜಾಯಿಷಿ ನೀಡದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ನರಸಿಂಹಮೂರ್ತಿ ಎಂಬುವವರ ಹೆಸರಿಗೆ, ಅಂತರಸಂತೆ ವನ್ಯಜೀವಿ ವಲಯದ ಅರಣ್ಯಾಧಿಕಾರಿ ಸಿದ್ದರಾಜು ನೋಟಿಸ್‌ ನೀಡಿದ್ದಾರೆ.

ಎನ್‌.ಬೆಳತ್ತೂರು ಗ್ರಾಮವು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಬಫರ್‌ ಜೋನ್ ವ್ಯಾಪ್ತಿಗೆ ಸೇರಿದೆ. ಅಲ್ಲದೇ, ಪರಿಸರ ಸೂಕ್ಷ್ಮವಲಯಕ್ಕೆ ಸೇರುತ್ತದೆ ಎಂದು ಹೇಳಿದ್ದಾರೆ.

‘ಈಚೆಗೆ ವರ್ಗಾವಣೆಗೊಂಡು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಬೃಹತ್‌ ಕಟ್ಟಡ ನಿರ್ಮಾಣವಾಗಿರುವ ಬಗ್ಗೆ ಅಲ್ಲಿನ ಬೀಟ್‌ ಉಪ ವಲಯ ಅರಣ್ಯಾಧಿಕಾರಿ ಗಮನ ಹರಿಸದೆ ಏಕೆ ಸುಮ್ಮನಿದ್ದರು ಎಂಬುದರ ಬಗ್ಗೆ ವಿವರಣೆ ಕೋರಿ ನೋಟಿಸ್‌ ನೀಡಲಾಗುವುದು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT