ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಗಿತಗೊಂಡ ಕಬಿನಿ ಸೇತುವೆ ಕಾಮಗಾರಿ

ಸರ್ಕಾರಿ ಬಸ್‌ ಸೌಲಭ್ಯ, ಸಮರ್ಪಕ ರಸ್ತೆಯಿಲ್ಲದೇ ಹಲವು ಗ್ರಾಮಸ್ಥರ ಪರದಾಟ
Last Updated 7 ಅಕ್ಟೋಬರ್ 2020, 1:43 IST
ಅಕ್ಷರ ಗಾತ್ರ

ಎಚ್.ಡಿ.ಕೋಟೆ: ಸರಗೂರು ತಾಲ್ಲೂಕಿನ ಚಿಕ್ಕದೇವಮ್ಮ ದೇವಸ್ಥಾನಕ್ಕೆ ಮತ್ತು ಸುತ್ತಲಿನ ಗ್ರಾಮಗಳಿಗೆ ಸುಲಭ ಸಾರಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಕಬನಿ ನದಿಗೆ ಆರಂಭವಾದ ಸೇತುವೆ ನಿರ್ಮಾಣ ಕಾಮಗಾರಿ ಮೊದಲ ಹಂತದಲ್ಲೇ ನನೆಗುದಿಗೆ ಬಿದ್ದಿದೆ. ಹೀಗಾಗಿ ಹಲವು ಗ್ರಾಮಗಳಿಗೆ ನೇರ ಸರ್ಕಾರಿ ಬಸ್ ಸೌಲಭ್ಯ ಇನ್ನೂ ಮರೀಚಿಕೆಯಾಗಿದೆ.

ಹಿಂದಿನ ಸರ್ಕಾರದ ಆಡಳಿತದ ಅವಧಿಯಲ್ಲಿ ಅಂದಾಜು ₹ 20 ಕೋಟಿ ವೆಚ್ಚದ ಸೇತುವೆ ಮತ್ತು ರಸ್ತೆ ಕಾಮಗಾರಿ ಶುರುವಾಗಿತ್ತು. ಕುನ್ನಪಟ್ಟಣ, ಚಾಮೇಗೌಡನಹುಂಡಿ, ಶಾಂತಿಪುರ, ಪುರದಕಟ್ಟೆ, ಮಂಚಹಳ್ಳಿ, ಕೂಲ್ಯ ಸೇರಿದಂತೆ 20 ಗ್ರಾಮಗಳಿಗೆ ಸುಲಭ ಸಂಪರ್ಕ ದೊರೆಯಲಿದೆ ಎಂದು ಜನರು ಆಸೆ ಕಣ್ಣಿನಿಂದ ನೋಡುತ್ತಿದ್ದರು.

ಇಟ್ನಾ ಸೇರಿದಂತೆ ಹಲವು ಗ್ರಾಮದವರು ತಮ್ಮ ಜಮೀನುಗಳಿಗೆ ತೆರಳಲು ಸುಮಾರು 30 ಕಿ.ಮೀ ಹೆಚ್ಚು ದೂರ ಕ್ರಮಿಸಿಕೊಂಡು ಬರಬೇಕಾದ ಸಮಸ್ಯೆ ಇದ್ದು, ಇದನ್ನು ತಪ್ಪಿಸಿ ಅನುಕೂಲ ಕಲ್ಪಿಸುವ ಸಲುವಾಗಿ ಈ ಸೇತುವೆ ನಿರ್ಮಾಣಕ್ಕೆ ಹಿಂದಿನ ಸರ್ಕಾರ ಅನುದಾನ ನೀಡಿತ್ತು. ಇದರಿಂದಾಗಿ ಈ ವ್ಯಾಪ್ತಿಯ ಸುಮಾರು 20ಕ್ಕೂ ಹೆಚ್ಚು ಗ್ರಾಮದ ಜನರಿಗೆ ಸಾರಿಗೆ ಸೌಲಭ್ಯ ಸುಲಭವಾಗಿ ಸಿಗುವ ಕನಸನ್ನು ಕಂಡಿದ್ದರು. ಆದರೆ, ಅದು ನನಸಾಗುವ ಲಕ್ಷಣವೇ ಕಾಣಿಸುತ್ತಿಲ್ಲ ಎಂದು ಹಲವು ಬೇಸರದಿಂದ ಹೇಳಿದರು.

‘ಸ್ವಾತಂತ್ರ್ಯ ಬಂದಾಗಿನಿಂದಲೂ ನಮ್ಮ ಗ್ರಾಮಗಳಿಗೆ ಸಾರಿಗೆ ಸೌಲಭ್ಯವಿಲ್ಲ, ಎತ್ತಿನಗಾಡಿ ಅಥವಾ ಸ್ವಂತ ವಾಹನ ಅವಲಂಬಿಸುವ ಅನಿವಾರ್ಯ ಇದೆ. ಕೇವಲ ನಾಲ್ಕು ಕಿ.ಮೀ. ಅಂತರದಲ್ಲಿದ್ದರೂ ಜಮೀನಿಗೆ ಹೋಗಲು ಮತ್ತು ಸರಗೂರು ಪಟ್ಟಣಕ್ಕೆ ಹೋಗಲು 30 ಕಿ.ಮೀ. ಸುತ್ತು ಬಳಸಿಕೊಂಡು ತಲುಪಬೇಕಾದ ಸ್ಥಿತಿ ಇದೆ’ ಎಂದು ಕುನ್ನಪಟ್ಟಣ ಗ್ರಾಮದ ಚಿಕ್ಕಣ್ಣ ಹೇಳುತ್ತಾರೆ.
‘ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟದಿಂದ ಅಭಿವೃದ್ಧಿ ಕಾಮಗಾರಿಗೆ ತೊಡಕುಂಟಾಗಿದೆ. ಕಾಮಗಾರಿಯೇ ನಿಂತುಹೋಗುವ ಹಂತಕ್ಕೆ ಬಂದಿದೆ’ ಎಂದು ಹಲವು ಗ್ರಾಮಗಳ ಜನರು ಹೇಳುತ್ತಾರೆ.

‘ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ’ ಎಂಬ ಗಾದೆ ಮಾತಿನಂತೆ ಸರ್ಕಾರ ಹಣ ಮಂಜೂರು ಮಾಡಿದ್ದರೂ ಸಹ ಗುತ್ತಿಗೆದಾರ ಮತ್ತು ಅಧಿಕಾರಿಗಳ ಕಿತ್ತಾಟದಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ ಎಂಬುದು ಈ ಭಾಗದ ಜನರ ನೋವಿನ ಮಾತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT