ಶುಕ್ರವಾರ, ಜೂನ್ 25, 2021
30 °C
ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಸ್ವಗ್ರಾಮದಲ್ಲಿ ಸಮಸ್ಯೆಗಳ ಸರಮಾಲೆ

ಮಾದರಿ ಗ್ರಾಮವಾಗದ ದೇವರಾಜ ಅರಸು ಹುಟ್ಟೂರು ಕಲ್ಲಹಳ್ಳಿ

ಎಚ್‌.ಎಸ್.ಸಚ್ಚಿತ್ Updated:

ಅಕ್ಷರ ಗಾತ್ರ : | |

Prajavani

ಹುಣಸೂರು: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕಲ್ಪಿಸಿದ ಹರಿಕಾರ. ಇಂಥ ಧೀಮಂತ ನಾಯಕನ ಸ್ವಗ್ರಾಮವಾದ ಕಲ್ಲಹಳ್ಳಿ ಅಭಿವೃದ್ಧಿಗೆ ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಿಸಿ, ಅನುದಾನ ಬಿಡುಗಡೆ ಮಾಡಿದ್ದರೂ ಸಮಸ್ಯೆಗಳು ಹಾಗೇ ಉಳಿದಿವೆ ಎಂಬುದು ಗ್ರಾಮಸ್ಥರ ಆರೋಪ.

2015ರಲ್ಲಿ ದೇವರಾಜ ಅರಸು ಜನ್ಮಶತಮಾನೋತ್ಸವ ಆಚರಣೆ ವೇಳೆ ಕಲ್ಲಹಳ್ಳಿ ಅಭಿವೃದ್ಧಿಗೆ ಅಂದಿನ ಸರ್ಕಾರ ₹10 ಕೋಟಿ ಮೀಸಲಿಟ್ಟು, ಅಭಿವೃದ್ಧಿಗೆ ಚಾಲನೆ ನೀಡಿತ್ತು. ಆದರೆ ಹೇಳಿಕೊಳ್ಳುವಂಥ ಕೆಲಸಗಳು ಇಲ್ಲಿ ಆಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

‘₹ 10 ಕೋಟಿ ಅನುದಾನದಲ್ಲಿ ತೃಪ್ತಿದಾಯಕ ಕೆಲಸಗಳು ನಡೆದಿಲ್ಲ. ಚದುರಂಗ ಭವನದ ಎದುರು ಕಳೆಗಿಡಗಳು ಬೆಳೆದಿವೆ. ಮಳೆ ಬಂದರೆ ನೀರು ನಿಲ್ಲುತ್ತದೆ’ ಎಂದು ಮುಖಂಡ ನಿರ್ವಾಣಯ್ಯ ಬೇಸರ ವ್ಯಕ್ತಪಡಿಸಿದರು.

‘ಗ್ರಾಮ ಪಂಚಾಯಿತಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ₹ 25 ಲಕ್ಷ ಅನುದಾನ ಮೀಸಲಿದ್ದರೂ ಸ್ಥಳೀಯರ ಗುದ್ದಾಟದಿಂದಾಗಿ ಹಳೆಯ ಕಟ್ಟಡದಲ್ಲೇ ನಡೆಯುತ್ತಿದೆ. ಹೆದ್ದಾರಿ ಪಕ್ಕದಲ್ಲಿದ್ದರೂ ಗ್ರಾಮಕ್ಕೆ ಬಸ್‌ ನಿಲ್ದಾಣವಿಲ್ಲ’ ಎಂದು ಅವರು ದೂರುತ್ತಾರೆ.

‘ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆ ನಡೆಸಲು ₹30 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಚದುರಂಗ ಭವನ ಉಪಯೋಗಕ್ಕೆ ಬಾರದಾಗಿದೆ. ಒಂದೆರಡು ಬಾರಿ ಕಾರ್ಯಕ್ರಮಗಳು ನಡೆದಿರುವುದು ಬಿಟ್ಟರೆ ಮತ್ತೆ ಉಪಯೋಗಕ್ಕೆ ಬಂದಿಲ್ಲ’ ಎನ್ನುತ್ತಾರೆ ರೈತ ಸಂಘದ ಮುಖಂಡ ವಿಷಕಂಠಪ್ಪ.

‘ದೇವರಾಜ ಅರಸು ಅವರ ಮನೆ ಸುತ್ತಲೂ ಉದ್ಯಾನ ನಿರ್ಮಿಸಿ, ಆಧುನಿಕ ಸ್ಪರ್ಶ ನೀಡಿದರೆ ಪ್ರವಾಸಿ ತಾಣವಾಗುತ್ತದೆ‌’ ಎನ್ನುತ್ತಾರೆ
ಅವರು.

‘₹ 10 ಕೋಟಿ ಅನುದಾನದಲ್ಲಿ  ಹುಣಸೂರಿನಲ್ಲಿ ₹ 2.5 ಕೋಟಿ ವೆಚ್ಚದಲ್ಲಿ ಅರಸು ಕಲಾಮಂದಿರ ನಿರ್ಮಿಸಲಾಗಿದೆ. ಉಳಿದ ₹ 7.5 ಕೋಟಿಯಲ್ಲಿ ₹ 5.2 ಕೋಟಿ ಮಾತ್ರ ಬಿಡುಗಡೆಯಾಗಿದೆ’ ಎಂದು ಮಾಹಿತಿ ನೀಡಿದರು ನಿರ್ಮಿತಿ ಕೇಂದ್ರದ ಅಧಿಕಾರಿ ರಕ್ಷಿತ್.

‘ಗ್ರಾಮದ ಮುಖ್ಯರಸ್ತೆ ಅಭಿವೃದ್ಧಿಗೆ ₹ 1.98 ಕೋಟಿ, ಗ್ರಾಮದೊಳಗಿನ ರಸ್ತೆ ಅಭಿವೃದ್ಧಿಗೆ ₹ 75 ಲಕ್ಷ, ರಾಜಕಾಲುವೆ ನಿರ್ಮಾಣಕ್ಕೆ ₹ 15 ಲಕ್ಷ, ಚದುರಂಗ ಭವನ ದುರಸ್ತಿಗೆ ₹ 15 ಲಕ್ಷ, ದೇವಸ್ಥಾನದ ನೆಲಹಾಸಿಗೆ ₹ 15 ಲಕ್ಷ, ಹುಣಸೂರಿನಲ್ಲಿ ಅರಸು ಪುತ್ಥಳಿ ಮಂಟಪ ನಿರ್ಮಾಣಕ್ಕೆ ₹ 15 ಲಕ್ಷ, ಗ್ರಾಮದ ಎರಡು ಕಡೆ ಸ್ವಾಗತ ಕಮಾನು ನಿರ್ಮಾಣಕ್ಕೆ ₹30 ಲಕ್ಷ, ಬಸ್ ನಿಲ್ದಾಣಕ್ಕೆ ₹ 15 ಲಕ್ಷ, ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ₹ 25 ಲಕ್ಷ, ಕುಡಿಯುವ ನೀರು ಯೋಜನೆಗೆ ₹ 1 ಕೋಟಿ ಮೀಸಲಿಡಲಾಗಿದೆ’ ಎಂದು ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.