ಗುರುವಾರ , ಆಗಸ್ಟ್ 18, 2022
25 °C

ತೀಸ್ತಾ ಬಂಧನ: ಆತ್ಮಸಾಕ್ಷಿ ಸೆರೆಮನೆಯಲ್ಲಿದೆ: ವಿಮರ್ಶಕ ರಹಮತ್ ತರೀಕೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಪ್ರಭುತ್ವದ ಕ್ರೌರ್ಯ, ತಪ್ಪನ್ನು ತೋರಿಸಿದವರನ್ನು ಸೆರೆಮನೆಗೆ ತಳ್ಳುವ ತುರ್ತು ಪರಿಸ್ಥಿತಿಯ ದಿನಗಳು ಮರುಕಳಿಸಿವೆ. ಸಂತ್ರಸ್ತರ ನ್ಯಾಯಕ್ಕಾಗಿ ಹೋರಾಡಿದ ತೀಸ್ತಾ ಸೆತಲ್ವಾಡ್‌ ತಬ್ಬಲಿಗಳ ತಾಯಿ. ಆಕೆಯ ಬಂಧನದೊಂದಿಗೆ ಎಲ್ಲರ ಆತ್ಮಸಾಕ್ಷಿ, ಪ್ರಜ್ಞೆಯೂ ಸೆರೆಮನೆಗೆ ಹೋಗಿದೆ’ ಎಂದು ವಿಮರ್ಶಕ ಡಾ.ರಹಮತ್ ತರೀಕೆರೆ ಹೇಳಿದರು.

ನಗರದ ಸುರುಚಿ ರಂಗಮನೆಯಲ್ಲಿ ಭಾನುವಾರ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ‘ದೇಶದ ಒಳಿತಿಗಾಗಿ ದನಿ ಎತ್ತಿದವರನ್ನು ಮೇಲ್ವರ್ಗದವರು (ಶ್ರೀಮಂತರು) ಬೆಂಬಲಿಸಬೇಕಿತ್ತು. ಆದರೆ, ಸ್ವಹಿತಾಸಕ್ತಿಗಾಗಿ ಕೊಲೆಗಡುಕ ರಾಜಕಾರಣದ ಪರವಾಗಿ ನಿಂತಿದೆ’ ಎಂಬ ವಿಷಾದ ವ್ಯಕ್ತಪಡಿಸಿದರು.

‘ಆಳುವ ವರ್ಗವು ಸೊಕ್ಕು, ಕ್ರೌರ್ಯವನ್ನು ಜನರ ವಿರುದ್ಧ ತೋರಿಸಲು ಮೇಲ್ವರ್ಗದ ಬೆಂಬಲವೇ ಕಾರಣ. ಎಲ್ಲರ ಆತ್ಮಸಾಕ್ಷಿಯ ನಾಶಗೊಂಡಿರುವುದರಿಂದಲೇ ಬಹುತ್ವ ಭಾರತದ ಅಡಿಪಾಯ ಅಲುಗಾಡುತ್ತಿದೆ. ಮತೀಯವಾದ ಮಕ್ಕಳು, ಯುವ ಸಮುದಾಯಕ್ಕೆ ದೇಶದ ಬಹುತ್ವದ ಸುಂದರ ಲೋಕ ಕಾಣದಂತೆ ಮಾಡಿದೆ. ಸಂಗೀತ, ಸಾಹಿತ್ಯ ಆಸ್ವಾದಿಸುವ ಸಂವೇದನಾಶೀಲ ಶಕ್ತಿಯನ್ನೇ ಯುವಜನರು ಕಳೆದುಕೊಳ್ಳುವಂತೆ ಮಾಡಲಾಗಿದೆ’ ಎಂದರು.

‘ತುರ್ತು ಪರಿಸ್ಥಿತಿ ಹೆಸರಿನಲ್ಲಿ ಹಿಂಸಿಸಿದವರು ಅಧಿಕಾರ ಕಳೆದುಕೊಂಡರು ಎಂಬುದನ್ನು ಆಳುವವರಿಗೆ ಜನರು ನೆನಪಿಸಲಿದ್ದಾರೆ. ಆ ಗಳಿಗೆಗಾಗಿ ಕಾಯಬೇಕು. ತೀಸ್ತಾ ಎಂದರೆ ನದಿ. ತಡೆಯೊಡ್ಡಿ ಬಂಧಿಸಬಹುದು; ಅಳಿಸಲಾಗುವುದಿಲ್ಲ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು