ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣೀರ ಕಥೆ ಹೇಳುವ ‘ಕಣ್ಣೀರು ಕಟ್ಟೆ’: ಪ್ರವಾಸಿ ತಾಣವನ್ನಾಗಿಸಲು ಸ್ಥಳೀಯರ ಆಗ್ರಹ

Last Updated 13 ಸೆಪ್ಟೆಂಬರ್ 2021, 4:06 IST
ಅಕ್ಷರ ಗಾತ್ರ

ತಲಕಾಡು: ಪೌರಾಣಿಕ ಹಿನ್ನೆಲೆ ಹೊಂದಿರುವ ಮುಡುಕುತೊರೆಯ ‘ಕಣ್ಣೀರು ಕಟ್ಟೆ’‌ ನೋಡಿದವರು ಕಣ್ಣೀರು ಹಾಕುವಂತಹ ಸ್ಥಿತಿ ಇದೆ. ಈ ಕೆರೆಯನ್ನು ಅಭಿವೃದ್ಧಿಗೊಳಿಸಿ ಪ್ರವಾಸಿ ತಾಣವನ್ನಾಗಿ ರೂಪಿಸಬೇಕೆಂಬ ಸ್ಥಳೀಯರ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ.

21 ಎಕರೆ ವಿಸ್ತೀರ್ಣ ಹೊಂದಿರುವ ‘ಕಣ್ಣೀರು ಕಟ್ಟೆ’ ಕೆರೆಯ ಒಡಲಿನಲ್ಲಿ ಹೂಳು ತುಂಬಿದ್ದು, ಕಳೆಗಿಡ ಬೆಳೆದಿವೆ. ಇದರಿಂದ ಕಟ್ಟೆಯ ಸೌಂದರ್ಯ ಹಾಳಾಗಿದೆ. ಕೆರೆಯ 5 ಎಕರೆ ಪ್ರದೇಶ ಒತ್ತುವರಿಯಾಗಿದ್ದು, ಅದನ್ನು ಕಂದಾಯ ಹಾಗೂ ಭೂಮಾಪನ ಇಲಾಖೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಆದರೆ, ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ.

ಪಾರ್ವತಿ ದೇವಿಯು ಶಿವನ ಮನೆಗೆ ಹೋಗುವಾಗ ಕಣ್ಣೀರು ಹಾಕಿದ್ದು, ಹನಿಗಳು ಕೆರೆಗೆ ಬಿದ್ದಿದ್ದರಿಂದ ಇದಕ್ಕೆ ‘ಕಣ್ಣೀರು ಕಟ್ಟೆ’ ಎಂಬ ಹೆಸರು ಬಂದಿದೆ ಎಂಬುದನ್ನು ಇತಿಹಾಸದ ಪುಟಗಳು ಹೇಳುತ್ತವೆ.

ಕಟ್ಟೆ ಸುತ್ತಲೂ ಗಿರಿವನಗಳ ಸಾಲಿದೆ. ಭ್ರಮರಾಂಬ, ಮಲ್ಲಿಕಾರ್ಜುನ ಸ್ವಾಮಿ ದೇವಾಲಯಗಳಿವೆ. ಕೂಗಳತೆ ದೂರದಲ್ಲಿ ಕಾವೇರಿ ನದಿ, ಉತ್ತರಕ್ಕೆ ಪದ್ಮಗಿರಿ, ದಕ್ಷಿಣಕ್ಕೆ ಮಲ್ಲಯ್ಯನ ಗಿರಿ ಇವೆ. ಹೀಗಾಗಿ, ಈ ಕೆರೆಯನ್ನು ಅಭಿವೃದ್ಧಿಗೊಳಿಸಿದರೆ ಪ್ರವಾಸಿಗರ ನೆಚ್ಚಿನ ತಾಣವಾಗುವ ಎಲ್ಲಾ ಲಕ್ಷಣ ಇವೆ ಎಂಬುದು ಸ್ಥಳೀಯರ ಅಭಿಪ್ರಾಯ.

ಕೆರೆಯ ಹೂಳು, ಕಳೆ ಗಿಡ ತೆರವುಗೊಳಿಸಿ, ಹೆಚ್ಚು ನೀರು ಸಂಗ್ರಹಗೊಳ್ಳುವಂತೆ ಮಾಡಿದರೆ ಈ ಭಾಗದ ಅಂತರ್ಜಲ ಮಟ್ಟ ವೃದ್ಧಿಯಾಗಲಿದೆ. ಬತ್ತಿರುವ ಕೊಳವೆ ಬಾವಿಗಳು ಪುನಶ್ಚೇತನಗೊಳ್ಳಲು ಸಹಕಾರಿಯಾಗಲಿದೆ ಎಂಬುದು ರೈತರ ಮನವಿಯಾಗಿದೆ.

ಹೋಬಳಿಯ ತಲಕಾಡು, ಹೆಮ್ಮಿಗೆ, ಕಲಿಯೂರು, ಬಿ.ಶೆಟ್ಟಹಳ್ಳಿ, ಮಾದಾಪುರ ಹಾಗೂ ದೊಡ್ಡಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 57 ಕೆರೆಗಳು, ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ 90 ಕೆರೆಗಳಿವೆ. ಅರ್ಧದಷ್ಟು ಕೆರೆಗಳಲ್ಲಿ ಒತ್ತುವರಿ ಸಮಸ್ಯೆ ಇದೆ. ಹೂಳು ತುಂಬಿದ್ದು, ಕಳೆಗಿಡಗಳು ಬೆಳೆದಿವೆ.

ಕಂದಾಯ ಇಲಾಖೆ ವ್ಯಾಪ್ತಿಗೆ ಬರುವ ಕೆರೆಗಳ ಪೈಕಿ 71 ಕೆರೆಗಳ ಒತ್ತುವರಿ ತೆರವು ಕಾರ್ಯ ಮುಗಿದಿದೆ. ಬಾಕಿ 19 ಕೆರೆಗಳ ಸರ್ವೆ ಕಾರ್ಯ ನಡೆಯಬೇಕಿದೆ. ಗ್ರಾಮ ಪಂಚಾಯಿತಿಗಳ ಸುಪರ್ದಿಗೆ ಬರುವ 32 ಕೆರೆಗಳನ್ನು 2020–21ನೇ ಸಾಲಿನಲ್ಲಿ ಹಾಗೂ 25 ಕೆರೆಗಳನ್ನು 2021–22ನೇ ಸಾಲಿನಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.
ನರೇಗಾ ಯೋಜನೆಯಡಿ ₹1 ಕೋಟಿ ವೆಚ್ಚದಲ್ಲಿ ಕಾಮಗಾರಿ
ಕೈಗೊಳ್ಳಲಾಗಿದೆ.

‘ಕೆರೆ ಅಭಿವೃದ್ಧಿಗೆ ಕ್ರಮ’

‘ಕಣ್ಣೀರು ಕಟ್ಟೆ ಒತ್ತುವರಿ ತೆರವುಗೊಳಿಸ ಲಾಗಿದೆ. ಕಟ್ಟೆಯ ಸುತ್ತಲೂ ಗುಂಡಿ ತೆಗೆದು, ಗಡಿಕಲ್ಲು ಅಳವಡಿಸಲಾ ಗುವುದು. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಕೆರೆ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುತ್ತೇನೆ’ ಎಂದು ಶಾಸಕ ಅಶ್ವಿನ್ ಕುಮಾರ್ ತಿಳಿಸಿದರು.

***

ಕಣ್ಣೀರು ಕಟ್ಟೆಯನ್ನು ಸುಂದರ ಪ್ರವಾಸಿ ತಾಣವಾಗಿ ಮಾರ್ಪಡಿಸಬೇಕು. ಪ್ರವಾಸೋದ್ಯಮ ಚಟುವಟಿಕೆ ಗರಿಗೆದರಿದರೆ ಸ್ಥಳೀಯರಿಗೆ ಅನುಕೂಲವಾಗಲಿದೆ

–ನಾಗರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷ

***

ತಲಕಾಡು ಹೋಬಳಿಯಲ್ಲಿ ಶೇ 78ರಷ್ಟು ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ. ಕಣ್ಣೀರು ಕಟ್ಟೆ ಕೆರೆಯನ್ನು ಒತ್ತುವರಿ ಮುಕ್ತಗೊಳಿಸಲಾಗಿದೆ

–ಸಿದ್ದರಾಜು, ಪ್ರಭಾರ ಉಪತಹಶೀಲ್ದಾರ್, ತಲಕಾಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT