ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಸುಧಾರಣಾ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ವಾಪಸ್‌ ಪಡೆಯುವವರೆಗೆ ಹೋರಾಟ

‘ಭೂಸುಧಾರಣೆ ಕಾಯ್ದೆ ತಿದ್ದುಪಡಿ’ ಗೋಷ್ಠಿಯಲ್ಲಿ ರೈತರ ಘೋಷಣೆ
Last Updated 6 ಸೆಪ್ಟೆಂಬರ್ 2020, 2:49 IST
ಅಕ್ಷರ ಗಾತ್ರ

ಮೈಸೂರು: ಭೂಸುಧಾರಣಾ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಯನ್ನು ರಾಜ್ಯ ಸರ್ಕಾರವು ವಾಪಸ್‌ ಪಡೆಯುವವರೆಗೆ ಹೋರಾಟ ಮಾಡಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ಮುಖಂಡರು ಶನಿವಾರ ಇಲ್ಲಿ ಎಚ್ಚರಿಕೆ ನೀಡಿದರು.

ಸ್ವರಾಜ್ ಇಂಡಿಯಾ, ಜನಾಂದೋಲನ ಮಹಾಮೈತ್ರಿ, ಜನಚೇತನ ಟ್ರಸ್ಟ್ ಸಹಯೋಗದಲ್ಲಿ ನಡೆದ ‘ಭೂಸುಧಾರಣಾ ಕಾಯ್ದೆ ತಿದ್ದುಪಡಿ: ಖಾಸಗೀಕರಣದ ನೀತಿಗಳು– ಪರಿಣಾಮ ಮತ್ತು ಸವಾಲುಗಳು’ ಕುರಿತ ವಿಚಾರಗೋಷ್ಠಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್‌ ಕೆರಗೋಡು ಮಾತನಾಡಿ, ‘ಭೂಸುಧಾರಣೆ ಕಾಯ್ದೆ ತಿದ್ದುಪಡಿ ರೈತರಿಗೆ ಮಾರಕವಾದ ಕಾನೂನು. ಈ ವಿಚಾರವನ್ನು ಹಳ್ಳಿಹಳ್ಳಿಗಳಿಗೆ ತಲುಪಿಸಿ ಜನರನ್ನು ಎಚ್ಚರಿಸಬೇಕಿದೆ. ಇದನ್ನು ಜಾರಿಗೊಳಿಸಲು ಯಾವುದೇ ಕಾರಣಕ್ಕೂ ಬಿಡಬಾರದು’ ಎಂದರು.

‘ಸಂವಿಧಾನ, ಪ್ರಜಾಪ್ರಭುತ್ವ, ಮೀಸಲಾತಿ ಇರಬಾರದು ಎಂಬುದು ಕೇಂದ್ರ ಸರ್ಕಾರದ ಹುನ್ನಾರ. ಇದಕ್ಕಾಗಿ ಎಲ್ಲಾ ಕ್ಷೇತ್ರಗಳನ್ನು ಖಾಸಗೀಕರಣ ಮಾಡುತ್ತಾ ಸಾಗಿದೆ. ಇದರ ವಿರುದ್ಧ ರೈತ ಸಂಘಟನೆ ಹಾಗೂ ದಲಿತ ಸಂಘರ್ಷ ಸಮಿತಿಗಳು ಒಂದುಗೂಡಿ ಹೋರಾಟ ನಡೆಸಬೇಕಿದೆ’ ಎಂದು ಹೇಳಿದರು.

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ‘ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವ್ಯಾಪಾರೀಕರಣದ ರಾಜಕೀಯ ನಡೆಸುತ್ತಿವೆ. ಸರ್ಕಾರದ ಆಸ್ತಿಗಳನ್ನು ಖಾಸಗೀಕರಣಗೊಳಿಸುತ್ತಿವೆ’ ಎಂದು ದೂರಿದರು.

‘ಭೂಮಿ ಕಳೆದುಕೊಂಡರೆ ನಮ್ಮ ಅಸ್ತಿತ್ವ ಕಳೆದು ಹೋಗುತ್ತದೆ. ಇಡೀ ಸಮಾಜ ದಾಸ್ಯಕ್ಕೆ ಹೋಗಿ ಭಿಕ್ಷೆ ಬೇಡುವ ಪರಿಸ್ಥಿತಿ ಉಂಟಾಗುತ್ತದೆ’ ಎಂಬ ಆತಂಕ ವ್ಯಕ್ತಪಡಿಸಿದರು.

‘ಸೆ.21ರಿಂದ ವಿಧಾನಮಂಡಲ ಅಧಿವೇಶನ ನಡೆಯಲಿದ್ದು, ಈ ವಿಚಾರವಾಗಿ ಚರ್ಚೆ ನಡೆದು, ಸುಗ್ರೀವಾಜ್ಞೆ ವಾಪಸ್‌ ಪಡೆಯುವ ರೀತಿಯಲ್ಲಿ ನಾವು ಹೊರಗಿನಿಂದ ಒತ್ತಡ ಹಾಕಬೇಕು’ ಎಂದು ಅಭಿಪ್ರಾಯ ಪಟ್ಟರು.

ಕೃಷಿ ತಜ್ಞ ಡಾ.ಪ್ರಕಾಶ್‌ ಕಮ್ಮರಡಿ ಮಾತನಾಡಿ, ‘ಭೂಸುಧಾರಣಾ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ಹಾಗೂ ಖಾಸಗೀಕರಣವು ಕೊರೊನಾಗಿಂತ ದೊಡ್ಡ ಮಹಾಮಾರಿ. ಇದರಿಂದ ರೈತರ ಬದುಕಿಗೆ, ಮಣ್ಣಿನ ವಾಸನೆಗೆ, ಆರ್ಥಿಕತೆಗೆ ದೊಡ್ಡ ಕಂಟಕ ಎದುರಾಗಿದೆ’ ಎಂದರು.

‘ಯಾವುದೇ ಚರ್ಚೆ ನಡೆಸದೆ ಕೆಲ ಕಾಯ್ದೆಗಳಿಗೆ ತಿದ್ದುಪಡಿ ತರಲಾಗುತ್ತಿದೆ. ಇದುವರೆಗೆ ದೇಶ ನಮ್ಮದು, ನಿಮ್ಮದು ಆಗಿತ್ತು. ಮುಂದೆ ಅಂಬಾನಿ, ಅದಾನಿ ಪಾಲಾಗಲಿದೆ’ ಎಂದು ಹೇಳಿದರು.

ಆಲಗೂಡು ಶಿವಕುಮಾರ್, ಬೆಟ್ಟಯ್ಯಕೋಟೆ, ಎನ್‌.ಪುನೀತ್‌, ವೀರಸಂಗಯ್ಯ, ಪ್ರಕಾಶ್‌, ನಾಗರಾಜ್‌, ಮಲ್ಲಯ್ಯ, ಶಂಕರಪ್ಪ, ಲಕ್ಷ್ಮೀನಾರಾಯಣ, ಎಂ.ರಾಮು ಚನ್ನಪಟ್ಟಣ, ರಾಮಕೃಷ್ಣಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT