ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿ ಕನ್ನಡ ಶಾಲೆಗೆ ಕಾಯಕಲ್ಪ

ಕನ್ನಡ ಮನಸ್ಸುಗಳ ಪ್ರತಿಷ್ಠಾನ, ‘ಜನಧ್ವನಿ ಫೌಂಡೇಷನ್‌’ ಪ್ರಯತ್ನ
Last Updated 20 ಅಕ್ಟೋಬರ್ 2021, 18:21 IST
ಅಕ್ಷರ ಗಾತ್ರ

ಹುಣಸೂರು: ಶತಮಾನ ಕಂಡಿರುವ ರಾಜ್ಯದ ‘ಕನ್ನಡ ಶಾಲೆ’ಗಳ ಕಾಯಕಲ್ಪಕ್ಕೆ ಮುಂದಾಗಿರುವ ಬೆಂಗಳೂರಿನ ‘ಕನ್ನಡ ಮನಸ್ಸುಗಳ ಪ್ರತಿಷ್ಠಾನ’ದ ಸದಸ್ಯರು ಅದಕ್ಕಾಗಿ ತಮ್ಮ ಗಳಿಕೆಯ ಶೇ 25ರಷ್ಟು ಪಾಲನ್ನು ಮೀಸಲಿಟ್ಟಿದ್ದಾರೆ. ಮೈಸೂರು ಜಿಲ್ಲೆಯ ಶಾಲೆಗಳ ಅಭಿವೃದ್ಧಿಗಾಗಿ ಹುಣಸೂರಿನ ‘ಜನಧ್ವನಿ ಫೌಂಡೇಷನ್’ ಕೈಜೋಡಿಸಿದೆ.

ಈಗಾಗಲೇ ಕಾಸರಗೋಡು ಮಂಜೇಶ್ವರ ಕಡಂಬಾರು ಪ್ರೌಢಶಾಲೆ, ತುಮಕೂರು ಜಿಲ್ಲೆಯ ಕುಣಿಗಲ್‌ನ ಜೆಕೆಬಿಎಂಎಸ್ ಶಾಲೆ, ಮಂಡ್ಯ ಜಿಲ್ಲೆಯ ಲಾಳನಕೆರೆ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಕೋಲ್ಚಾರು ಶಾಲೆ, ಮದ್ದೂರು ತಾಲ್ಲೂಕಿನ ಹೊನ್ನಲಗೆರೆ, ಕಡಿಲುವಾಗಿಲು ಶಾಲೆ, ಹಾಸನ ಜಿಲ್ಲೆಯ ಅರಕಲಗೂಡು ಬೆಳವಾಡಿ ಶಾಲೆ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಬ್ಯಾಕೋಡು ಮತ್ತು ಕೊಡನವಳ್ಳಿ ಶಾಲೆಗಳನ್ನು ಪ್ರತಿಷ್ಠಾನ ಅಭಿವೃದ್ಧಿಪಡಿಸಿದೆ.

ಶಿವಮೊಗ್ಗದ ಪವನ್ ಹೆಗಡೆ ಅವರು ‘ಕನ್ನಡ ಮನಸ್ಸುಗಳ ಪ್ರತಿಷ್ಠಾನ’ವನ್ನು 2015ರಲ್ಲಿ ಸ್ಥಾಪಿಸಿದ್ದರು. ಅವರೊಂದಿಗೆ ವೈದ್ಯರು, ವಕೀಲರು, ಐ.ಟಿ, ಬಿ.ಟಿ, ಸಿವಿಲ್ ಎಂಜಿನಿಯರ್‌ ಹಾಗೂ ವಿದ್ಯಾರ್ಥಿಗಳು ಕೈಜೋಡಿಸಿದ್ದಾರೆ. ಸದ್ಯ 100ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಗಡಿ ಭಾಗದಲ್ಲಿ ಕನ್ನಡ ಬಾವುಟ ಹಾರಿಸಲಷ್ಟೇ ಸೀಮಿತವಾಗಿದ್ದ ಕನ್ನಡ ಸೇವೆಯು 2017ರಿಂದ ಶಾಲೆಗಳ ಜೀರ್ಣೋದ್ಧಾರದ ಕಡೆಗೂ ಗಮನ ಹರಿಸಿದೆ. ಸದಸ್ಯರು ವಾರಾಂತ್ಯದಲ್ಲಿ, ಶಿಥಿಲಗೊಂಡ ಶಾಲೆಗಳಿಗೆ ತೆರಳಿ ಅಭಿವೃದ್ಧಿಪಡಿಸುತ್ತಾರೆ.

ಕಲಿಕೆಗೆ ಪೂರಕವಾಗುವ ಚಿತ್ರಗಳನ್ನು ಶಾಲೆ ಗೋಡೆಗಳ ಮೇಲೆ ರಚಿಸಲು ಚಿತ್ರಕಲಾವಿದರಾದ ಯಲ್ಲಪ್ಪ ಕುಂಬಾರ್, ಚಿನ್ಮಯ್, ನವೀನ್ ಸಿಂಗ್, ಹನುಮಂತ್, ಅಭಿಗೌಡ, ಅರ್ಪಿತ ಸೇನ್, ಹರೀಶ್ ಅರಸು, ರವಿಕುಮಾರ್ ಜೊತೆಯಾಗಿದ್ದಾರೆ.

‘ಜನಧ್ವನಿ ಫೌಂಡೇಷನ್’ ಸಹಯೋಗದಲ್ಲಿ ಹುಣಸೂರು ತಾಲ್ಲೂಕಿನ ಗಡಿ ಗ್ರಾಮ ಹೊಸೂರು ಕೊಡಗು ಕಾಲೊನಿಯಲ್ಲಿ ಶಿಥಿಲ ಪ್ರಾಥಮಿಕ ಶಾಲೆ ಕಟ್ಟಡ, ಕಾಂಪೌಂಡ್ ದುರಸ್ತಿಪಡಿಸಲಾಗಿದೆ. ಕಟ್ಟಡಕ್ಕೆ ಬಣ್ಣ ಬಳಿದು, ಗೀತ ರಚನೆಕಾರ ಹುಣಸೂರು ಕೃಷ್ಣಮೂರ್ತಿ ಸೇರಿದಂತೆ ತಾಲ್ಲೂಕಿನ ಸಾಧಕರ ಚಿತ್ರಗಳನ್ನು ರಚಿಸಲಾಗಿದೆ.

‘ಸರ್ಕಾರಿ ಶಾಲೆಯಲ್ಲಿ ಓದಿ ಬದುಕು ಕಟ್ಟಿಕೊಂಡ ನಾವು, ನಮ್ಮ ಶಾಲೆಗೆ ಏನನ್ನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಅಳಿಲುಸೇವೆ ಸಲ್ಲಿಸುತ್ತಿದ್ದೇವೆ. ಶತಮಾನ ಕಂಡ ಶಾಲೆಗಳನ್ನು ಆದ್ಯತೆ ಮೇರೆಗೆ ಅಭಿವೃದ್ಧಿಪಡಿಸುತ್ತಿದ್ದೇವೆ’ ಎಂದು ಪ್ರತಿಷ್ಠಾನದ ರವಿಕಿರಣ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಕಾರಿ ಶಾಲೆಗಳನ್ನು ಪುನಶ್ಚೇತನಗೊಳಿಸಿ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸುವುದು ಉದ್ದೇಶ’ ಎಂದು ಫೌಂಡೇಷನ್ ಅಧ್ಯಕ್ಷ ಪ್ರವೀಣ್,ಕಾರ್ಯದರ್ಶಿ ಭಾಸ್ಕರ್ ಕಲ್ಕುಣಿಕೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT