ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಲಾಗುವವರನ್ನೂ ಪಾಸ್ ಮಾಡಿದ ಕೇಂದ್ರೀಯ ವಿದ್ಯಾಲಯ

ಶೇ 50ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣ ಪಟ್ಟಿಯಲ್ಲಿದ್ದರು
Last Updated 6 ಮೇ 2019, 20:20 IST
ಅಕ್ಷರ ಗಾತ್ರ

ಮೈಸೂರು: ಕೇಂದ್ರೀಯ ವಿದ್ಯಾಲಯ ನಗರದ ಅತಿ ಹಳೆಯ ಕೇಂದ್ರ ಸರ್ಕಾರ ಸ್ವಾಮ್ಯದ ಸಿಬಿಎಸ್‌ಇ ಪಠ್ಯಕ್ರಮದ ಶಾಲೆ. ಈ ಶಾಲೆಗೆ 10ನೇ ತರಗತಿಯಲ್ಲಿ ಶೇ 100 ಫಲಿತಾಂಶ ಬಂದಿದ್ದು, ಖಾಸಗಿ ಶಾಲೆಗಳಿಗಿಂತ ದಿಟ್ಟ ಸಾಧನೆ ಮಾಡಿದೆ.

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಸಮಿತಿಗೆ (ಎನ್‌ಸಿಇಆರ್‌ಟಿ) ಸೇರುವ ಡೆಮಾನ್‌ಸ್ಟ್ರೇಷನ್‌ ಶಾಲೆ (ಡಿಎಂಎಸ್‌) ಯನ್ನು ಬಿಟ್ಟರೆ, ಕೇಂದ್ರ ಸರ್ಕಾರ ನಿರ್ವಹಣೆಗೆ ಬರುವ ಪ್ರಮುಖ ಶಾಲೆಯಿದು. ಈ ಶಾಲೆಯಲ್ಲಿ 2018–19ನೇ ಸಾಲಿನಲ್ಲಿ ಒಟ್ಟು 183 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇಷ್ಟೂ ಮಂದಿಯೂ ಪರೀಕ್ಷೆಯಲ್ಲಿ ಹಾಜರಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ.

ಹಾದಿ ಕಠಿಣವಿತ್ತು: ಶೇ 100 ಫಲಿತಾಂಶ ಪಡೆಯುವುದು ಸುಲಭದ ವಿಚಾರವಾಗಿರಲಿಲ್ಲ. ಏಕೆಂದರೆ, ಶಾಲೆಯು ನಡೆಸಿದ ಪೂರ್ವಭಾವಿ ಪರೀಕ್ಷೆಗಳಲ್ಲಿ ಶೇ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರು. 91 ವಿದ್ಯಾರ್ಥಿಗಳು ‘ಫೇಲ್‌ ಲಿಸ್ಟ್‌’ಗೆ ಸೇರಿದ್ದರು. ಇಷ್ಟು ಮಂದಿಯನ್ನು ‘ಉತ್ತೀರ್ಣ ಪಟ್ಟಿ’ಗೆ ಸೇರಿಸಲು ಶಾಲೆಯ ಸಿಬ್ಬಂದಿ ಸತತ ಪ್ರಯತ್ನ ಮಾಡಿರುವುದು ಎಲ್ಲರೂ ಉತ್ತೀರ್ಣರಾಗಲು ಸಾಧ್ಯವಾಗಿದೆ.

ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಸಾಂಘಿಕವಾಗಿ ‍ಪ್ರಯತ್ನಿಸಿರುವುದು ಈ ಫಲಿತಾಂಶಕ್ಕೆ ಕಾರಣವಾಯಿತು. ಶೇ 50ರಷ್ಟು ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಮೇಲೆತ್ತುವುದು ಸುಲಭದ ಕೆಲಸವಾಗಿರಲಿಲ್ಲ. ಅಷ್ಟೂ ವಿದ್ಯಾರ್ಥಿಗಳ ಪಟ್ಟಿ ಮಾಡಿ ಅವರೆಲ್ಲರಿಗೂ ಪ್ರತ್ಯೇಕವಾಗಿ ವಿಶೇಷ ತರಗತಿ ನಡೆಸಲಾಗಿದೆ. ಒಬ್ಬೊಬ್ಬರಿಗೂ ಪಾಠ ಮಾಡಿದ ಕಾರಣದಿಂದಲೇ ಅವರು ಉತ್ತೀರ್ಣರಾದರು. ಒಬ್ಬೊಬ್ಬರ ಸಮಸ್ಯೆಗಳು ಬೇರೆಯೇ ಇರುತ್ತವೆ. ಅವೆಲ್ಲವನ್ನೂ ಅರ್ಥ ಮಾಡಿಕೊಂಡು ಶಿಕ್ಷಣ ನೀಡಿದ್ದರಿಂದಲೇ ಯಶಸ್ಸು ಸಿಕ್ಕಿದೆ ಎಂದು ಶಾಲೆಯ ಪ್ರಾಂಶುಪಾಲೆ ನಿರ್ಮಲಾ ಕುಮಾರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಮೊದಲು ಮಕ್ಕಳ ಸಮಸ್ಯೆ ಗುರುತಿಸಿ ಅರ್ಥ ಮಾಡಿಕೊಂಡೆವು. ಬಳಿಕ ಪೋಷಕರನ್ನು ಕರೆಸಿ ಪ್ರತ್ಯೇಕವಾಗಿ ಸಮಸ್ಯೆಗಳನ್ನು ವಿವರಿಸಿದೆವು. ನಂತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದೆವು. ಇದಕ್ಕೆ ಸಮಾನಾಂತರವಾಗಿ ಶಿಕ್ಷಕರಿಗೆ ಅಗತ್ಯ ಮಾಹಿತಿಗಳನ್ನು ಪೂರೈಸಿ ಸಮಗ್ರವಾಗಿ ಶೈಕ್ಷಣಿಕ ಸಾಧನೆ ಮಾಡಿದೆವು. ಸಿದ್ಧತಾ ಪರೀಕ್ಷೆಗಳನ್ನು ವೈಜ್ಞಾನಿಕವಾಗಿ ನಡೆಸಿದ್ದು ಸಹಾಯ ಮಾಡಿತು’ ಎಂದು ಅವರು ವಿವರ ನೀಡಿದರು.

ಇಬ್ಬರಿಗೆ ಶೇ 98.4: ಶಾಲೆಯ ಇಬ್ಬರು ವಿದ್ಯಾರ್ಥಿನಿಯರಿಗೆ ಶೇ 98.4 ಫಲಿತಾಂಶ ಸಿಕ್ಕಿದೆ. ಎಸ್‌.ಸ್ಮಿತಾ ಹಾಗೂ ಶ್ರೀಜನಿ ಹ್ಯಾಡ್ಲರ್‌ ಅವರು 492 ಅಂಕ ಪಡೆದಿದ್ದಾರೆ. ವಿದ್ಯಾರ್ಥಿನಿಯರು ಜಿಲ್ಲೆಗೆ ದ್ವಿತೀಯ ಸ್ಥಾನಕ್ಕೆ ಪಾತ್ರರಾಗಿದ್ದಾರೆ.

ಅಂತೆಯೇ, ಶಾಲೆಯ ವಿದ್ಯಾರ್ಥಿಗಳಾದ ಎಂ.ಎಂ.ಉಮಾಶಂಕರ್‌ ಶೇ 97.8, ಜೀವಿಕಾ ವೆಂಕಟೇಶ್‌ ಶೇ 97.6, ಸಂಪ್ರದಾ ಭಟ್‌ ಶೇ 97.2 ಅಂಕ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT