ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್‌.ಆಸ್ಪತ್ರೆ: ತಜ್ಞರ ಪರಿಶೀಲನೆ

ಕೋವಿಡ್‌ ರೋಗಿಗಳಿಗೆ ಪ್ರತ್ಯೇಕ ಹಾಸಿಗೆ ಮೀಸಲಿಡಲು ಸಲಹೆ
Last Updated 14 ಜುಲೈ 2020, 17:20 IST
ಅಕ್ಷರ ಗಾತ್ರ

ಮೈಸೂರು: ಕೆ.ಆರ್‌.ಆಸ್ಪತ್ರೆಯಲ್ಲಿ 80 ಹಾಸಿಗೆಗಳನ್ನು ಕೊರೊನಾ ಸೋಂಕಿತರ ಚಿಕಿತ್ಸೆಗೆ ಮೀಸಲಿಡಲು, 100 ಹಾಸಿಗೆಗಳನ್ನು ತೀವ್ರ ಉಸಿರಾಟ ಸಮಸ್ಯೆ (ಎಸ್‌ಎಆರ್‌ಐ) ಹಾಗೂ ಶೀತ ಜ್ವರ ಮಾದರಿಯ ಅನಾರೋಗ್ಯ ಲಕ್ಷಣದಿಂದ (ಐಎಲ್‌ಐ) ಬಳಲುತ್ತಿರುವ ರೋಗಿಗಳ ಚಿಕಿತ್ಸೆಗಾಗಿ ಮೀಸಲಿಡಲು ಬೆಂಗಳೂರಿನ ತಜ್ಞರ ತಂಡವು ಜಿಲ್ಲಾಡಳಿತಕ್ಕೆ ಸಲಹೆ ನೀಡಿದೆ.

ಸೋಂಕಿನಿಂದ ಸಾವಿನ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಕೆ.ಆರ್‌.ಆಸ್ಪತ್ರೆಗೆ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ ಎಂದು ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಪಿ.ನಂಜರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಆಸ್ಪತ್ರೆಯಲ್ಲಿ ಇದುವರೆಗೆ ಕೋವಿಡ್‌ನಿಂದ 15 ಮಂದಿ ಮೃತಪಟ್ಟಿದ್ದಾರೆ. ಇನ್ನೂ ಐವರು ಸೋಂಕಿತರು ಇಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರನ್ನು ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ಸಾಗಿಸಲು ಕಷ್ಟವಾಗುತ್ತಿದೆ.

‘ಕೆ.ಆರ್‌.ಆಸ್ಪತ್ರೆಗೆ ದಾಖಲಾಗಿ, ಸೋಂಕು ದೃಢಪಟ್ಟ ರೋಗಿಗಳನ್ನು ಕೋವಿಡ್‌ ಆಸ್ಪತ್ರೆಗೆ ಸ್ಥಳಾಂತರಿಸುವ ಸಂದರ್ಭದಲ್ಲಿ ಸಾವು ಸಂಭವಿಸುತ್ತಿದೆ. ಹೀಗಾಗಿ, ಸೋಂಕಿತರನ್ನು ಸ್ಥಳಾಂತರ ಮಾಡದೆ ಇಲ್ಲಿಯೇ ಚಿಕಿತ್ಸೆ ನೀಡಲು ತಜ್ಞರು ಸೂಚಿಸಿದ್ದಾರೆ’ ಎಂದೂ ಹೇಳಿದರು.

‘ಆಸ್ಪತ್ರೆಗೆ ದಾಖಲಾಗಿ ಕೆಲವೇ ಗಂಟೆಗಳಲ್ಲಿ ಮೃತಪಟ್ಟ ಪ್ರಕರಣಗಳೂ ವರದಿಯಾಗಿವೆ. ಹೀಗಾಗಿ, ಕೋವಿಡ್‌ನಿಂದ ಸಾವು ಸಂಭವಿಸಿದೆಯೋ ಅಥವಾ ಕೋವಿಡ್‌ ಪಾಸಿಟಿವ್‌ ಆಗಿದ್ದು, ಬೇರೆ ಕಾರಣದಿಂದ ಸಾವು ಸಂಭವಿಸಿದೆಯೋ ಎಂಬುದನ್ನು ಪರಿಶೀಲಿಸಲು ನಾವು ತಜ್ಞರಲ್ಲಿ ಕೋರಿದ್ದೇವೆ’ ಎಂದರು.

ಈ ಸಂಬಂಧ ಈಗಾಗಲೇ 25 ಸಾವಿನ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಉಳಿದ ಸಾವಿನ ಪರಿಶೀಲನೆ ನಡೆಯುತ್ತಿದೆ ಎಂದು ಹೇಳಿದರು.

ಮೆಡಿಸಿನ್‌ ಹಾಗೂಅನಸ್ತೇಶಿಯಾ ವಿಭಾಗದ ಮುಖ್ಯಸ್ಥರು ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT