ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಬಸ್‌ ಸಂಚಾರಕ್ಕೆ ಕೆಎಸ್‌ಆರ್‌ಟಿಸಿ ಸಿದ್ಧತೆ

ಜನರ ಬೇಡಿಕೆಗೆ ತಕ್ಕಂತೆ ಬಸ್‌ ಸಂಚಾರ; ಆದೇಶದ ನಿರೀಕ್ಷೆಯಲ್ಲಿ ಅಧಿಕಾರಿಗಳು
Last Updated 17 ಮೇ 2020, 8:20 IST
ಅಕ್ಷರ ಗಾತ್ರ

ಮೈಸೂರು: ಲಾಕ್‌ಡೌನ್‌ನ ಮೂರನೇ ಅವಧಿಯೂ ಭಾನುವಾರ (ಮೇ 17) ಮುಗಿಯಲಿದೆ. ಇದಕ್ಕೆ ಪೂರಕವಾಗಿ ಮೈಸೂರು ಜಿಲ್ಲೆಯಲ್ಲಿ ಕೋವಿಡ್‌–19 ಪೀಡಿತರಾಗಿದ್ದ ಎಲ್ಲರೂ ಗುಣಮುಖರಾಗಿದ್ದು, ಬಸ್‌ ಸಂಚಾರ ಆರಂಭಿಸಲು ಮೈಸೂರು ನಗರ/ಗ್ರಾಮಾಂತರ ವಿಭಾಗ ಅಗತ್ಯ ಸಿದ್ಧತೆ ನಡೆಸಿವೆ.

ಮೈಸೂರು ನಗರದ ಸಿಟಿ ಬಸ್‌ ನಿಲ್ದಾಣ ಹಾಗೂ ಸಬರ್‌ಬನ್‌ ಬಸ್‌ ನಿಲ್ದಾಣದಲ್ಲಿ ಎರಡೂ ವಿಭಾಗದ ಅಧಿಕಾರಿ ವರ್ಗ ಈಗಾಗಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲೆಯ ವಿವಿಧೆಡೆಯೂ ಸಿದ್ಧತೆಯನ್ನು ಆಯಾ ಘಟಕಗಳು ಮಾಡಿಕೊಂಡಿವೆ.

ಬಸ್‌ ನಿಲ್ದಾಣ ಪ್ರವೇಶಿಸುವ ಹಾಗೂ ಹೊರ ಹೋಗುವ ಪ್ರಯಾಣಿಕರಿಗೆ ಎರಡು ಪ್ರತ್ಯೇಕ ದ್ವಾರ ನಿರ್ಮಿಸಲಾಗಿದೆ. ಒಂದು ದ್ವಾರದಲ್ಲಿ ಒಳ ಬಂದರೆ, ಮತ್ತೊಂದು ದ್ವಾರದ ಮೂಲಕ ಹೊರ ಹೋಗುವ ವ್ಯವಸ್ಥೆ ಮಾಡಲಾಗಿದೆ. ಇನ್ನುಳಿದಂತೆ ಯಾವ ಕಡೆಯಿಂದಲೂ ಜನರು ಬಸ್‌ ನಿಲ್ದಾಣ ಪ್ರವೇಶಿಸದಂತೆ ಬ್ಯಾರಿಕೇಡ್‌ನ ಬಿಗಿ ಭದ್ರತೆ ಮಾಡಲಾಗಿದೆ ಎಂದು ಎರಡೂ ವಿಭಾಗದ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರವೇಶ ದ್ವಾರ, ನಿರ್ಗಮನ ದ್ವಾರದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಥರ್ಮಲ್‌ ಸ್ಕ್ರೀನಿಂಗ್ ನಡೆಸಲಿದ್ದಾರೆ. ಜ್ವರದ ಲಕ್ಷಣ ಕಂಡು ಬಂದರೆ ನಿಲ್ದಾಣದೊಳಕ್ಕೆ ಪ್ರವೇಶವನ್ನೇ ನೀಡಲ್ಲ. ಪ್ರತಿಯೊಬ್ಬರೂ ಮಾಸ್ಕ್‌ ಧರಿಸಿ ಪ್ರಯಾಣಿಸುವುದನ್ನು ಕಡ್ಡಾಯ ಮಾಡುತ್ತೇವೆ’ ಎಂದು ಮೈಸೂರು ನಗರ ವಿಭಾಗದ ನಿಯಂತ್ರಣಾಧಿಕಾರಿ ಎಸ್‌.ಪಿ.ನಾಗರಾಜ್ ಮಾಹಿತಿ ನೀಡಿದರು.

‘ಸಿಟಿ ಬಸ್‌ನಲ್ಲಿ 20 ಜನರ ಪ್ರಯಾಣಕ್ಕೆ ಅವಕಾಶ ಕೊಡುತ್ತೇವೆ. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ 30 ಜನರಷ್ಟೇ ಪ್ರಯಾಣಿಸಬಹುದು. ಜನ ಸಂಚಾರ ಇಂದಿಗೂ ವಿರಳವಿದೆ. ಓಡಾಟ ಹೆಚ್ಚಾದಂತೆ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸುತ್ತೇವೆ’ ಎಂದು ಅವರು ಹೇಳಿದರು.

ಸೋಂಕು ನಿವಾರಕದಿಂದ ಸ್ವಚ್ಛ
‘ವಿಭಾಗದ ಎಲ್ಲ ಬಸ್‌ಗಳನ್ನು ಈಗಾಗಲೇ ಸೋಂಕು ನಿವಾರಕ ಬಳಸಿ ಸ್ವಚ್ಛಗೊಳಿಸಿದ್ದೇವೆ. ಟಿಕೆಟ್‌ ವಿತರಿಸುವ ಯಂತ್ರವನ್ನೂ ಸ್ಯಾನಿಟೈಜೇಶನ್‌ ಮಾಡಿದ್ದೇವೆ. ನಿರ್ವಾಹಕರಿಗೆ ಮುಖಗವಸಿನ ಜತೆ ಕೈಗವಸುಗಳನ್ನು ಕೊಡುತ್ತಿದ್ದೇವೆ. ಬಸ್ ನಿಲ್ದಾಣದೊಳಗೆ ಅಂತರ ಕಾಪಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೇವೆ’ ಎಂದು ಮೈಸೂರು ಗ್ರಾಮಾಂತರ ವಿಭಾಗದ ನಿಯಂತ್ರಣಾಧಿಕಾರಿ ಆರ್.ಅಶೋಕ್‌ಕುಮಾರ್ ತಿಳಿಸಿದರು.

‘ಸಿಬ್ಬಂದಿಗೆ ಈಗಾಗಲೇ ಸೂಚನೆ ನೀಡಿದ್ದೇವೆ. ಮಾಹಿತಿ ಕೊಡುತ್ತಿದ್ದಂತೆ ಕರ್ತವ್ಯಕ್ಕೆ ಹಾಜರಾಗುವಂತೆ ತಿಳಿಸಿದ್ದೇವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT