ಭಾನುವಾರ, ಸೆಪ್ಟೆಂಬರ್ 26, 2021
28 °C

ನಂಜನಗೂಡು: ಪ್ರಮಾಣಪತ್ರ ನೀಡುವಂತೆ ಪೌರಾಯುಕ್ತರಿಗೆ ಪ್ರಧಾನಿ ಕಚೇರಿಯಿಂದ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಂಜನಗೂಡು: ನಗರದ ಹಳೇ ಟೌನ್ ವ್ಯಾಪ್ತಿಯಲ್ಲಿ ಹೊಸ ಮನೆ ನಿರ್ಮಿಸಲು ಅರ್ಜಿ ಸಲ್ಲಿಸಿದವರಿಗೆ ಪ್ರಾರಂಭಿಕ ಪ್ರಮಾಣಪತ್ರ ನೀಡಲು ಕ್ರಮವಹಿಸುವಂತೆ ಪ್ರಧಾನ ಮಂತ್ರಿ ಕಚೇರಿಯು ಜಿಲ್ಲಾಧಿಕಾರಿ ಹಾಗೂ ನಗರಸಭೆ ಪೌರಾಯುಕ್ತರಿಗೆ ಪತ್ರ ಬರೆದಿದೆ.

ಹೊಸ ಮನೆ ನಿರ್ಮಿಸಲು ಅರ್ಜಿ ಸಲ್ಲಿಸಿದವರಿಗೆ ಕಳೆದ 4 ವರ್ಷಗಳಿಂದ ನಗರಸಭೆ ಪ್ರಾರಂಭಿಕ ಪ್ರಮಾಣ ಪತ್ರ ನೀಡಿಲ್ಲ ಎಂದು ಆರೋಪಿಸಿ ನಗರದ ಒಕ್ಕಲಗೇರಿಯ ಸನತ್ ಕುಮಾರ್ ಪ್ರಧಾನ ಮಂತ್ರಿಗಳ ಕಚೇರಿಗೆ ಇ–ಜನಸ್ಪಂದನ ಪೋರ್ಟಲ್‌ನಲ್ಲಿ ದೂರು ಸಲ್ಲಿಸಿದ್ದರು.

2017ರಲ್ಲಿ ನಂಜನಗೂಡು ಪುರಸಭೆಯು ನಗರಸಭೆಯಾಗಿ ಮೇಲ್ದರ್ಜೆಗೇರಿದ ನಂತರ ಇದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಸ್ಥಳೀಯ ಯೋಜನಾ ಪ್ರದೇಶ ವ್ಯಾಪ್ತಿಗೆ ಒಳಪಟ್ಟಿದ್ದು, ನಂತರ ಈ ಸಮಸ್ಯೆ ಆರಂಭವಾಗಿತ್ತು.

ಕರ್ನಾಟಕ ನಗರ ಮತ್ತು ಗ್ರಾಮಾಂತರ ಕಾಯ್ದೆ ಅನ್ವಯ ನಗರಸಭೆ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಸಂಬಂಧ ಪ್ರಾರಂಭಿಕ ಪ್ರಮಾಣಪತ್ರ ನೀಡುವ ಅಧಿಕಾರವನ್ನು ನಗರಸಭೆ ಹೊಂದಿಲ್ಲ. ಹೀಗಾಗಿ, ನಗರಸಭೆ ವ್ಯಾಪ್ತಿಯಲ್ಲಿ ಕಟ್ಟಡ ಕಟ್ಟುವ ಪರವಾನಗಿ ಪಡೆಯಲು ನಗರದ ಜನರು ಮುಡಾ ಮತ್ತು ನಗರಸಭೆ ಕಚೇರಿಗಳಿಗೆ ಅಲೆದು ಹೈರಾಣಾಗಿದ್ದಾರೆ.

ನಗರದ ಒಕ್ಕಲಗೇರಿ ನಿವಾಸಿ ಸನತ್ ಕುಮಾರ್ ಕಾಯಂಗಡಿ ಬೀದಿಯಲ್ಲಿ ಪಿತ್ರಾರ್ಜಿತ ನಿವೇಶನ ಹೊಂದಿದ್ದು, 2017ರಲ್ಲಿ ನಗರಸಭೆಗೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿ, ಸ್ವೀಕೃತಿ ಪತ್ರ ಪಡೆದಿದ್ದರು. ದಾಖಲೆ ಪರಿಶೀಲನೆ ಹಂತದಲ್ಲಿ ಹೊಸ ನಿಯಮದಿಂದ ತಡೆ ಉಂಟಾಗಿತ್ತು. ಇದರಿಂದಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಸೌಲಭ್ಯ ಹಾಗೂ ಬ್ಯಾಂಕ್‌ನಲ್ಲಿ ಗೃಹ ನಿರ್ಮಾಣ ಸಾಲ ಪಡೆಯಲು ಸಾಧ್ಯವಾಗಿರಲಿಲ್ಲ. ಮುಡಾ ಹಾಗೂ ನಗರಸಭೆ ಅಧಿಕಾರಿಗಳ ನಡುವಿನ ಸಮನ್ವಯತೆ ಕೊರತೆಯಿಂದಾಗಿ ನೂರಾರು ಮಂದಿ ಮನೆ ಕಟ್ಟಲು ಪ್ರಮಾಣ ಪತ್ರ ಪಡೆಯಲು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಹೊಸ ಮನೆ ಕಟ್ಟಲು ಪರವಾನಗಿ ಪಡೆಯಲು ಸಾಧ್ಯವಾಗದೆ, ನಗರಸಭೆಯ ವಿರುದ್ಧ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಲು ಕೆಲವರು ಸಿದ್ಧತೆ ನಡೆಸಿದ್ದಾರೆ.

***

ಪ್ರಮಾಣಪತ್ರ ನೀಡಲು ಪ್ರಧಾನ ಮಂತ್ರಿ ಕಚೇರಿಯಿಂದ ನಿರ್ದೇಶನ ಬಂದಿದೆ. ನಗರದ ಹೊಸ ಮನೆ ಕಟ್ಟುವ ನೂರಾರು ಮಂದಿ ಕನಸು ನನಸಾಗಬಹುದು.
–ಸನತ್ ಕುಮಾರ್, ದೂರುದಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.