ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹಿಂದ ನಾಯಕರನ್ನು ಮುಗಿಸುತ್ತಿರುವ ಸಿದ್ದರಾಮಯ್ಯ ಬ್ರಿಟಿಷರಿದ್ದಂತೆ: ವಿಶ್ವನಾಥ್

ಹಾದಿರಂಪ–ಬೀದಿರಂಪ ಮಾಡಿ ಕುರುಬರನ್ನು ಏಕಾಂಗಿಯಾಗಿಸಬೇಡಿ; ತಾಕೀತು
Last Updated 26 ಅಕ್ಟೋಬರ್ 2021, 10:51 IST
ಅಕ್ಷರ ಗಾತ್ರ

ಮೈಸೂರು: ‘ಸಿದ್ದರಾಮಯ್ಯ ಬ್ರಿಟಿಷರಿದ್ದಂತೆ. ಜೆಡಿಎಸ್‌ನವರು ಬೀದಿಗೆ ತಳ್ಳಿದಾಗ ಅವರನ್ನು ಅಪ್ಪಿಕೊಂಡು ಕಾಂಗ್ರೆಸ್‌ಗೆ ಕರೆ ತಂದವರನ್ನೇ ಅಲ್ಲಿಂದ ಓಡಿಸಿದರು. ಇದೀಗ ಅಹಿಂದ ನಾಯಕರನ್ನು ಮುಗಿಸುತ್ತಿದ್ದಾರಷ್ಟೇ’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಮಂಗಳವಾರ ಇಲ್ಲಿ ವಾಗ್ದಾಳಿ ನಡೆಸಿದರು.

‘ಕುರುಬರಿಗೆ ಸಿದ್ದರಾಮಯ್ಯ ಕೊಡುಗೆ ಶೂನ್ಯ. ಯಾರೊಬ್ಬರನ್ನು ಬೆಳೆಸಲಿಲ್ಲ. ನಾಯಕತ್ವವನ್ನೇ ನಾಶ ಮಾಡಿದ್ದಾರೆ. ನಾನೇ ಎಂಬ ಅಹಂ ಅವರದ್ದು. ಕಿಂಚಿತ್‌ ಕೃತಜ್ಞತೆಯಿಲ್ಲದವ. ಇದೀಗ ವಿನಾಃ ಕಾರಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಕುರುಬರ ಹೆಸರಲ್ಲಿ ಹಾದಿರಂಪ–ಬೀದಿರಂಪದ ಜಟಾಪಟಿ ನಡೆಸಿದ್ದಾರೆ’ ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದರು.

‘ಕುರಿ–ಕಂಬಳಿ ಸಮುದಾಯದ ಸ್ವತ್ತು. ಯಾವೊಂದು ಜಾತಿಯ ಆಸ್ತಿಯಲ್ಲ. ಗೌರವಯುತವಾದ ಕಂಬಳಿ ವಿಷಯವನ್ನು ಉಪ ಚುನಾವಣೆಯಲ್ಲಿ ಪ್ರಸ್ತಾಪಿಸಿ, ಸಮಾಜದ ಘನತೆಯನ್ನೇ ಹಾಳು ಮಾಡುತ್ತಿದ್ದಾರೆ. ರಾಜಕೀಯವಾಗಿ ಏಕಾಂಗಿಯನ್ನಾಗಿಸಲು ಮುಂದಾಗಿದ್ದಾರೆ. ಕಂಬಳಿಗೆ ಮಾರುಕಟ್ಟೆ ಇನ್ನಿಲ್ಲವಾಗದಂತೆ ಮಾಡುತ್ತಿದ್ದಾರೆ’ ಎಂದು ಹರಿಹಾಯ್ದರು.

‘ಆಡಳಿತ ಪಕ್ಷದ ನಾಯಕರನ್ನು ಏಕವಚನದಲ್ಲಿ ನಿಂದಿಸೋ ಮೂಲಕ ರಾಜಕಾರಣಕ್ಕೆ, ಸಾರ್ವಜನಿಕ ಜೀವನಕ್ಕೆ ಅಪಮಾನ ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ನಾನು ಹಳ್ಳಿಗ. ಮಾತಾಡೋದೆ ಹಿಂಗೆ ಎನ್ನುತ್ತಾರೆ. ಹಾಗಾದರೆ ಸೋನಿಯಾಗಾಂಧಿ, ರಾಹುಲ್‌ಗಾಂಧಿಗೂ ಏಕವಚನದಲ್ಲಿ ಮಾತನಾಡಲಿ’ ಎಂದು ವಿಶ್ವನಾಥ್‌, ಸಿದ್ದರಾಮಯ್ಯಗೆ ಕುಟುಕಿದರು.

‘ಕುರುಬರಿಗೆ ಸಿದ್ದರಾಮಯ್ಯನ್ನ ನೋಡಿದ್ರೆ ಇಂಗ್ಲಿಷ್‌ ಫಿಲಂ ನೋಡಿದಂಗಾಗುತ್ತೆ‌. ಅದಕ್ಕೆ ಅವ ವೇದಿಕೆಗೆ ಬಂದಾಗಲೆಲ್ಲಾ ಶಿಳ್ಳೆ, ಚಪ್ಪಾಳೆ ಹೊಡಿತಾರೆ. ಸಮುದಾಯವನ್ನು ಹೈಜಾಕ್‌ ಮಾಡಿಕೊಂಡಿರುವ ಆತ, ಸಮಾಜಕ್ಕಾಗಿ ಏನನ್ನೂ ಮಾಡಿಲ್ಲ. ಕನಕ ಗುರುಪೀಠ ಸ್ಥಾಪಿಸುವುದರಿಂದ ಹಿಡಿದು, ಈಚೆಗಷ್ಟೇ ನಡೆದ ಎಸ್‌ಟಿ ಸ್ಥಾನಮಾನದ ಹೋರಾಟದಲ್ಲೂ ಭಾಗಿಯಾಗಲಿಲ್ಲ’ ಎಂದು ಅವರು ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT