ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ. 18ರಂದು ಲೋಕ ಅದಾಲತ್: ಜನನ ಪ್ರಮಾಣಪತ್ರ ನೀಡಲು ವಿಶೇಷ ಕ್ರಮ

Last Updated 8 ನವೆಂಬರ್ 2021, 9:11 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಡಿ.18 ರಂದು ಏರ್ಪಡಿಸಿರುವ ‘ಮೆಗಾ ಲೋಕ್ ಅದಾಲತ್’ನಲ್ಲಿ ಜನನ ಪ್ರಮಾಣಪತ್ರ ನೀಡಲು ನಿರ್ಧರಿಸಲಾಗಿದೆ.

‘ಪ್ಯಾನ್‌ಇಂಡಿಯಾದಿಂದ ಗ್ರಾಮೀಣ ಪ್ರದೇಶಗಳಲ್ಲಿ ನಡೆದ ಕಾನೂನು ಅರಿವು ಶಿಬಿರಗಳಲ್ಲಿ ಬಹಳಷ್ಟು ಮಕ್ಕಳಿಗೆ ಜನನ ಪ್ರಮಾಣ ಪತ್ರ ಇಲ್ಲದಿರುವ ಅಂಶ ಗೊತ್ತಾಯಿತು. ಹೀಗಾಗಿ, ಈ ಬಾರಿಯ ಲೋಕ ಅದಾಲತ್‌ನಲ್ಲಿ ಅಗತ್ಯ ಇರುವವರಿಗೆ ಜನನ ಪ್ರಮಾಣಪತ್ರವನ್ನು ಸುಲಭವಾಗಿ ನೀಡಲು ತೀರ್ಮಾನಿಸಲಾಗಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಎಂ.ಎಲ್.ರಘುನಾಥ್ ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಾಲೆಗಳಲ್ಲಿನ ಮಕ್ಕಳಿಗೆ ಅರ್ಜಿ ವಿತರಿಸಲಾಗಿದೆ. ಸಾರ್ವಜನಿಕರು ನೇರವಾಗಿಯೂ ಬಂದು ಪ್ರಾಧಿಕಾರದಲ್ಲಿ ಹೊಸ ಜನನ ಪ್ರಮಾಣ ಪತ್ರ ಹಾಗೂ ಪರಿಷ್ಕರಣೆಗೆ ಅರ್ಜಿ ಸಲ್ಲಿಸಬಹುದು. ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಲೋಕ ಅದಾಲತ್‌ ನಡೆಯುವ ದಿನದಂದು ಜನನ ಪ್ರಮಾಣಪತ್ರ ನೀಡುವ ಅಧಿಕಾರಿಗೆ ಪ್ರಮಾಣಪತ್ರ ನೀಡುವಂತೆ ನಿರ್ದೇಶನ ನೀಡಲಾಗುವುದು ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಬಾಕಿ ಇರುವ 1,03,472 ಪ್ರಕರಣಗಳ ಪೈಕಿ 9,832 ಪ್ರಕರಣಗಳನ್ನು ಲೋಕ ಅದಲತ್‌ನಲ್ಲಿ ಪರಿಗಣಿಸಲು ಉದ್ದೇಶಿಸಲಾಗಿದ್ದು, ರಾಜಿಯಾಗಲು ಬಯಸುವ ಕಕ್ಷಿದಾರರು ಪ್ರಾಧಿಕಾರವನ್ನು ಸಂಪರ್ಕಿಸಬಹುದು. ಈ ವರ್ಷದ ಮೊದಲ ಮೂರು ಲೋಕ ಅದಾಲತ್‌ನಲ್ಲಿ ಕ್ರಮವಾಗಿ 14 ಸಾವಿರ, 19,500 ಹಾಗೂ 7,‌200 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದರು.

ವಿಚ್ಛೇದನಕ್ಕೆ ಅರ್ಜಿ ಹಾಕಿದ್ದ ಹಾಗೂ ವಿಚ್ಛೇದನ ಪಡೆದಿದ್ದ ಒಟ್ಟು 80ರಿಂದ 90 ದಂಪತಿಯನ್ನು ಈ ವರ್ಷ ಒಂದುಗೂಡಿಸಲಾಗಿದೆ. ಇವರು ಮತ್ತೆ ವಿವಾದ ಮಾಡಿಕೊಳ್ಳದೇ ಅನ್ಯೋನವಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಮುಂದಿನ ಲೋಕ ಅದಾಲತ್‌ನಲ್ಲಿಯೂ ಇಂತಹ ಪ್ರಕರಣಗಳನ್ನು ಪರಿಗಣಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆನಂದಕುಮಾರ್‌ ಮಾತನಾಡಿ, ‘ಸಂಘವು ಲೋಕ ಅದಾಲತ್‌ಗೆ ಎಲ್ಲ ರೀತಿಯ ಸಹಕಾರ ನೀಡಲಿದೆ. ಹಿಂದೆಯೂ ಸಾಕಷ್ಟು ನೆರವು ನೀಡಿತ್ತು. ಕಕ್ಷಿದಾರರು ಪರಸ್ಪರ ಮಾತುಕತೆಯ ಮೂಲಕ ತಮ್ಮ ವಿವಾದವನ್ನು ಬಗೆಹರಿಸಿಕೊಂಡರೆ ಶಾಂತಿ ಲಭಿಸುತ್ತದೆ. ಲೋಕ ಅದಾಲತ್‌ನಲ್ಲಿ ಪ್ರಕರಣ ಇತ್ಯರ್ಥ ಮಾಡಿಕೊಳ್ಳುವುದರಿಂದ ಸಮಯ, ಹಣ ಹಾಗೂ ಸಂಬಂಧ ಈ ಮೂರು ಉಳಿಯುತ್ತದೆ’ ಎಂದರು.

ಪ್ರಕರಣಗಳು ರಾಜಿಯಾದಲ್ಲಿ ನ್ಯಾಯಾಲಯದ ಸಂಪೂರ್ಣ ಶುಲ್ಕವನ್ನು ವಾಪಸ್ ನೀಡಲಾಗುತ್ತದೆ. ಲೋಕ ಅದಾಲತ್‌ನ ತೀರ್ಮಾನದ ವಿರುದ್ಧ ಮೇಲ್ಮನವಿಗೆ ಅವಕಾಶ ಇರುವುದಿಲ್ಲ ಎಂದು ಹೇಳಿದರು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ವಿದ್ಯಾ, ಪ್ರಾಧಿಕಾರದ ಕಾರ್ಯದರ್ಶಿ ದೇವರಾಜಭೂತೆ, ಸಂಘದ ಕಾರ್ಯದರ್ಶಿ ಶಿವಣ್ಣ ಇದ್ದರು.

ಜಿಲ್ಲೆಯಲ್ಲೂ ಹೆಚ್ಚುತ್ತಿದೆ ಮಾದಕದ್ರವ್ಯ ಪ್ರಕರಣಗಳು
ಜಿಲ್ಲೆಯಲ್ಲೂ ಮಾದಕದ್ರವ್ಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಎಂ.ಎಲ್.ರಘುನಾಥ್ ಆತಂಕ ವ್ಯಕ್ತಪಡಿಸಿದರು.

ನಾರ್ಕೋಟಿಕ್ಸ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆಯಡಿ ಜಿಲ್ಲೆಯಲ್ಲಿ ಇದುವರೆಗೆ 41 ಪ್ರಕರಣಗಳು ದಾಖಲಾಗಿವೆ. ವರ್ಷದಿಂದ ವರ್ಷಕ್ಕೆ ಇಂತಹ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಯುವಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ಪೋಷಕರು ಹಾಗೂ ಯುವಕರು ಎಚ್ಚೆತ್ತುಕೊಳ್ಳಬೇಕು. ಮಾದಕದ್ರವ್ಯಗಳ ಸೇವನೆಯಿಂದಾಗುವ ದುಷ್ಪರಿಣಾಮಗಳು ಹಾಗೂ ಅವುಗಳ ಸಂಗ್ರಹ, ಸಾಗಾಣಿಕೆ ಕುರಿತು ಕಾನೂನಿನ ಅಂಶಗಳನ್ನು ತಿಳಿದುಕೊಳ್ಳಬೇಕು. ಮಾದಕದ್ರವ್ಯಗಳನ್ನು ಕುರಿತು ಯುವಪೀಳಿಗೆ ಎಚ್ಚರದಿಂದ ಇರಬೇಕು ಎಂದು ಕಿವಿಮಾತು ಹೇಳಿದರು.

ಮಾಹಿತಿಗೆ ಯಾರನ್ನು ಸಂಪರ್ಕಿಸಬೇಕು?
ಸಹಾಯವಾಣಿ ಸಂಖ್ಯೆ 1800–425–0131
ದೂ: 0821 –2330130
ವೆಬ್‌ಸೈಟ್‌ www.ksisa.kar.nic.in
ಇ–ಮೇಲ್ mysurudisa@gmail.com

ಯಾವ ಯಾವ ಪ್ರಕರಣಗಳನ್ನು ತರಬಹುದು?
* ಚೆಕ್ಕು ಅಮಾನ್ಯ, ಬ್ಯಾಂಕ್ ವಸೂಲಾತಿ ಪ್ರಕರಣಗಳು
* ಕಾರ್ಮಿಕ ವಿವಾದಗಳು, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು
* ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಕೌಟುಂಬಿಕ ಪ್ರಕರಣಗಳು
* ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣದ ಪ್ರಕರಣಗಳು
* ವಿದ್ಯುತ್ ಮತ್ತು ನೀರಿನ ಶುಲ್ಕಗಳಿಗೆ ಸಂಬಂಧಿಸಿದ ಪ‍್ರಕರಣಗಳು
* ಪಿಂಚಣಿ, ಕಂದಾಯ ಹಾಗೂ ಇತರೆ ಸಿವಿಲ್ ಪ್ರಕರಣಗಳು

ಜಿಲ್ಲೆಯಲ್ಲಿರುವ ಪ್ರಕರಣಗಳು
ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿವೆ. ಇವುಗಳಲ್ಲಿ ಕ್ರಿಮಿನಲ್‌ ಪ್ರಕರಣಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ.

1,03,472: ಒಟ್ಟು ಪ್ರಕರಣಗಳು
54,226: ಕ್ರಿಮಿನಲ್ ಪ್ರಕರಣಗಳು
49,246: ಸಿವಿಲ್ ಪ್ರಕರಣಗಳು
13,240: ಚೆಕ್‌ಬೌನ್ಸ್‌ ಪ್ರಕರಣಗಳು
9,832: ಲೋಕ್‌ ಅದಾಲತ್‌ಗೆ ಬಂದಿರುವ ಪ್ರಕರಣಗಳು
7,200: ಕಳೆದ ಲೋಕ್‌ ಅದಾಲತ್‌ನಲ್ಲಿ ಬಗೆಹರಿದವುಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT