ಬುಧವಾರ, ಜುಲೈ 28, 2021
25 °C
ಮೈಸೂರಿನ ವಿವಿಧೆಡೆ ಮಾಸ್ಕ್ ದಿನಾಚರಣೆ; ಜಾಗೃತಿ ಜಾಥಾ

ಅನವಶ್ಯ ಓಡಾಡಿದರೆ ಕ್ರಮ; ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಹೋಂ ಕ್ವಾರಂಟೈನ್‌ನಲ್ಲಿ ಇರುವವರು ಕೋವಿಡ್ ನಿಯಮಾವಳಿ ಉಲ್ಲಂಘಿಸಿ ಅನವಶ್ಯಕವಾಗಿ ಓಡಾಟ ನಡೆಸಿದರೆ, ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಗುರುವಾರ ಇಲ್ಲಿ ಎಚ್ಚರಿಕೆ ನೀಡಿದರು.

ಮೈಸೂರು ಮಹಾನಗರ ಪಾಲಿಕೆ ವತಿಯಿಂದ ನಗರದ ಅಗ್ರಹಾರ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಮಾಸ್ಕ್ ಡೇ’ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅಭಿರಾಮ್ ಜಿ.ಶಂಕರ್, ‘ಈಚೆಗೆ ಸಾರ್ವಜನಿಕರ ಓಡಾಟ ಹೆಚ್ಚಾಗಿದೆ. ಸರ್ಕಾರ ಈಗಾಗಲೇ ಆದೇಶಿಸಿರುವ ಮಾರ್ಗಸೂಚಿಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಮುನ್ನೆಚ್ಚರಿಕೆ ಕ್ರಮ ಅನುಸರಿಸುವ ಮೂಲಕ ಸೋಂಕು ನಿಯಂತ್ರಿಸಬಹುದು’ ಎಂದರು.

ಮಹಾನಗರ ಪಾಲಿಕೆ ಸಿಬ್ಬಂದಿ ಮಾಸ್ಕ್ ಹಾಗೂ ಕೊವೀಡ್-19 ತಡೆಗಟ್ಟಲು ಅನುಸರಿಸಬೇಕಾದ ಮುನ್ನಚ್ಚರಿಕೆ ಕ್ರಮಗಳ ಮಾಹಿತಿಯುಳ್ಳ ಕರಪತ್ರಗಳನ್ನು ಸಾರ್ವಜನಿರಿಗೆ ವಿತರಿಸಿದರು.

ಮೇಯರ್ ತಸ್ನೀಂ, ಉಪ ಮೇಯರ್ ಶ್ರೀಧರ್, ಸದಸ್ಯರಾದ ಬಿ.ವಿ.ಮಂಜನಾಥ್, ಆಯುಕ್ತ ಗುರುದತ್ ಹೆಗಡೆ, ಜಿಲ್ಲಾ ಪಂಚಾಯತ್ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ಜಯಂತ್, ಡಾ.ನಾಗರಾಜ್ ಉಪಸ್ಥಿತರಿದ್ದರು.

21 ಪ್ರಕರಣ ದಾಖಲು: ‘ಕೋವಿಡ್ ನಿಯಮಾವಳಿ ಉಲ್ಲಂಘಿಸಿದ 21 ಪ್ರಕರಣಗಳನ್ನು ಮೈಸೂರು ನಗರದಲ್ಲಿ ದಾಖಲಿಸಲಾಗಿದೆ. ಹೋಂ ಕ್ವಾರಂಟೈನ್‌ನಲ್ಲಿದ್ದವರು ಅನಗತ್ಯವಾಗಿ ಓಡಾಡಿದರೆ ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು’ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದರು.

ಕಡ್ಡಾಯವಾಗಿ ಮಾಸ್ಕ್ ಧರಿಸಿ: ‘ಸಾರ್ವಜನಿಕರು ಮನೆಯಿಂದ ಹೊರಗಡೆ ಬರುವಾಗ, ಬಸ್‍ಗಳಲ್ಲಿ ಪ್ರಯಾಣಿಸುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಹೊರಗೆ ಬರಬೇಕು. ಕೋವಿಡ್-19 ಭಯ ಬೇಡ. ಮುಂಜಾಗ್ರತೆ ಇರಲಿ. ಸ್ಯಾನಿಟೈಸರ್ ಬಳಸಿ ಸೋಪಿನಿಂದ ಕೈ ತೊಳೆಯಬೇಕು. ಕನಿಷ್ಠ ಅಂತರ ಕಾಪಾಡಿಕೊಳ್ಳಿ’ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಆರ್.ವೆಂಕಟೇಶ್ ತಿಳಿಸಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಮೈಸೂರು ಗ್ರಾಮಾಂತರ ವಿಭಾಗ ಹಾಗೂ ಮೈಸೂರು ಕೇಂದ್ರೀಯ ಬಸ್ ನಿಲ್ದಾಣದ ವತಿಯಿಂದ ನಡೆದ ಮಾಸ್ಕ್ ಡೇ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.

ವಿಭಾಗೀಯ ನಿಯಂತ್ರಣಾಧಿಕಾರಿ ಆರ್.ಅಶೋಕ್ ಕುಮಾರ್ ಮಾತನಾಡಿದರು. ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಪಿ.ರವಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್‌.ಪ್ರಕಾಶ್, ಉಪ ಮುಖ್ಯ ಭದ್ರತಾಧಿಕಾರಿ ಶಿವರಾಜೇಗೌಡ, ವಿಭಾಗೀಯ ಸಂಚಾರ ಅಧಿಕಾರಿ ಸಿ.ಹೇಮಂತ್ ಕುಮಾರ್, ಲಷ್ಕರ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸುರೇಶ್ ಕುಮಾರ್ ಉಪಸ್ಥಿತರಿದ್ದರು.

ವಿವಿಧೆಡೆ ಮಾಸ್ಕ್ ದಿನಾಚರಣೆ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ನರಸಿಂಹರಾಜ ಪೊಲೀಸ್ ಠಾಣೆ ವತಿಯಿಂದ ರಾಜೇಂದ್ರ ನಗರದ ಆರ್ಚ್ ಸರ್ಕಲ್ ಬಳಿ ‘ಮಾಸ್ಕ್ ಡೇ’ ಆಚರಣೆ ನಡೆಯಿತು.

ತಾಲ್ಲೂಕು ಆರೋಗ್ಯ ಅಧಿಕಾರಿ ಮಹದೇವ್ ಪ್ರಸಾದ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿರಾಜ್ ಅಹ್ಮದ್, ನರಸಿಂಹರಾಜ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ಜಿ.ಶೇಖರ್ ಹಾಜರಿದ್ದರು.

ಮೈಸೂರು ನಗರ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯಗಳ ಸಂಯುಕ್ತಾಶ್ರಯದಲ್ಲಿ ಮಾಸ್ಕ್ ಧರಿಸಿ, ಕೇಂದ್ರ ಗ್ರಂಥಾಲಯ ಕಚೇರಿಯಿಂದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದವರೆಗೆ ಜಾಥಾ ಮಾಡುವ ಮೂಲಕ ‘ಮಾಸ್ಕ್ ದಿನ’ ಆಚರಿಸಲಾಯಿತು.

ಎನ್.ಆರ್.ಸಂಚಾರ ಪೊಲೀಸ್ ಠಾಣೆ ಆಯೋಜಿಸಿದ್ದ ಜನಜಾಗೃತಿ ಪಾದಯಾತ್ರೆಯಲ್ಲಿ ಪೊಲೀಸರು ಯಮ-ಕಿಂಕರರ ಪಾತ್ರಧಾರಿಗಳಾಗಿ ಗಮನ ಸೆಳೆದರು. ಡಿಸಿಪಿ ಡಾ.ಎ.ಎನ್.ಪ್ರಕಾಶ್‌ಗೌಡ ಪಾಲ್ಗೊಂಡರು.

ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಕೆ.ಆರ್.ಸಂಚಾರ ಪೊಲೀಸರು ಜಾಗೃತಿ ಮೂಡಿಸಿದರು. ಮಾಸ್ಕ್ ಧರಿಸದವರಿಗೆ ಗುಲಾಬಿ ನೀಡಿದರು. ಪಾಲಿಕೆ ಸದಸ್ಯರಾದ ಸೌಮ್ಯ ಉಮೇಶ್, ಮ.ವಿ.ರಾಮಪ್ರಸಾದ್ ಪಾಲ್ಗೊಂಡಿದ್ದರು.

ನರಸಿಂಹರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 35ರಲ್ಲಿ ತ್ರಿವೇಣಿ ಗೆಳೆಯರ ಬಳಗದಿಂದ ಆಟೊ ಚಾಲಕರಿಗೆ, ಸಾರ್ವಜನಿಕರಿಗೆ ಉಚಿತವಾಗಿ 500 ಮಾಸ್ಕ್‌ಗಳನ್ನು ವಿತರಿಸಲಾಯಿತು. ಬನ್ನಿಮಂಟಪದಲ್ಲಿನ ಸೆಂಟ್ ಜೋಸೆಫ್ ಶಾಲೆಯಲ್ಲಿ ಮಾಸ್ಕ್ ದಿನಾಚರಣೆ ನಡೆಯಿತು.

ಮೈಸೂರು ಯುವ ಬಳಗದ ವತಿಯಿಂದ ಕುರುಬಗೇರಿ, ಗೊಲ್ಲರಗೇರಿ, ಕುಂಚಿಟಿಗರ ಬೀದಿ, ಅಗಸರ ಬೀದಿಯ ಮನೆಗಳಿಗೆ 900 ಮಾಸ್ಕ್‌ಗಳನ್ನು ವಿತರಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.