ಶುಕ್ರವಾರ, ಜನವರಿ 24, 2020
18 °C
‘ಮಾಧ್ಯಮ: ಪ್ರಜಾಸತ್ತೆ’ ವಿಚಾರ ಸಂಕಿರಣದಲ್ಲಿ ಚರ್ಚೆ, ಸಂವಾದ

'ಪ್ರಶ್ನಿಸುವುದನ್ನೇ ಮರೆತಿರುವ ಮಾಧ್ಯಮ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವ ಧೈರ್ಯ ಕಳೆದುಕೊಂಡಿರುವ ಮಾಧ್ಯಮ, ಪ್ರಜಾಪ್ರಭುತ್ವದ ‘ನಾಲ್ಕನೇ ಅಂಗ’ವಾಗಿ ತನ್ನ ಕೆಲಸ ನಿರ್ವಹಿಸಬಲ್ಲುದೇ ಎಂಬ ಪ್ರಶ್ನೆ ಶನಿವಾರ ಇಲ್ಲಿ ಆಯೋಜಿಸಿದ್ದ ‘ಮಾಧ್ಯಮ: ಪ್ರಜಾಸತ್ತೆ’ ವಿಚಾರ ಸಂಕಿರಣದಲ್ಲಿ ಧ್ವನಿಸಿತು.

ಗಾಂಧಿ ವಿಚಾರ ಪರಿಷತ್ತು, ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಏರ್ಪಡಿಸಿದ್ದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವು, ದೇಶದ ಪ್ರಸ್ತುತ ಸನ್ನಿವೇಶದಲ್ಲಿ ಮಾಧ್ಯಮಗಳ ಪಾತ್ರದ ಬಗ್ಗೆ ಬೆಳಕು ಚೆಲ್ಲಿತು.

ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಜನರು ಕಳೆದುಕೊಂಡಿದ್ದು, ಮಾಧ್ಯಮಗಳ ಜವಾಬ್ದಾರಿ ಹಿಂದೆಂದಿಗಿಂತಲೂ ಹೆಚ್ಚಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಗಾಂಧೀಜಿ ಅವರ ಮೊಮ್ಮಗ ಹಾಗೂ ಹಿರಿಯ ಪತ್ರಕರ್ತ ರಾಜಮೋಹನ ಗಾಂಧಿ, ‘ಪ್ರಜಾಸತ್ತೆಯ ಜಾಗವನ್ನು ಪ್ರಾಬಲ್ಯ ಆಕ್ರಮಿಸುತ್ತಿದೆ. ಸಮಾನತೆ, ಭ್ರಾತೃತ್ವದ ಆಶಯಗಳಿಗೆ ಅಪಾಯ ಎದುರಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

’ಭಾರತವು ಎಲ್ಲರಿಗೂ ಸೇರಿದ್ದು ಎಂದು ಗಾಂಧೀಜಿ ಹೇಳಿದ್ದರು. ಆದರೆ ಇಂದು ಅಧಿಕಾರದಲ್ಲಿರುವವರು ಈ ದೇಶ ಹಿಂದೂಗಳಿಗೆ ಸೇರಿದ್ದು ಎನ್ನುತ್ತಿದ್ದಾರೆ. ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಸಮಾನತೆ, ಭ್ರಾತೃತ್ವದ ಆಶಯಗಳು ಬಲವಾಗಿವೆ. ಸಮಾನತೆಗೆ ನಡೆಯುತ್ತಿರುವ ಹೋರಾಟಕ್ಕೆ ಈ ಭಾಗದವರು ನೇತೃತ್ವ ವಹಿಸಬೇಕು’ ಎಂದು ಕರೆಕೊಟ್ಟರು.

ಗಾಂಧೀಜಿ ಅವರು ಸ್ವಾತಂತ್ರ್ಯ ಹೋರಾಟದ ಜತೆ ಪತ್ರಿಕೋದ್ಯಮದಲ್ಲೂ ಸಕ್ರಿಯರಾಗಿದ್ದರು. 1903 ರಿಂದ 1948ರ ವರೆಗೆ 45 ವರ್ಷ ಅವರು ಒಬ್ಬ ಪತ್ರಕರ್ತರಾಗಿ ಕೆಲಸ ನಿರ್ವಹಿಸಿದ್ದರು ಎಂದರು.

ಆಟಕ್ಕುಂಟು, ಲೆಕ್ಕಕ್ಕಿಲ್ಲ: ಭಾರತದ ಮಾಧ್ಯಮವು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಸ್ಥಿತಿಯಲ್ಲಿದೆ ಎಂದು ಅಭಿಪ್ರಾಯಪಟ್ಟ ಹಿರಿಯ ಪತ್ರಕರ್ತ ಕೃಷ್ಣ‍ಪ್ರಸಾದ್, ಮಾಧ್ಯಮಗಳು ದೇಶವನ್ನು ಉಳಿಸಿಯಾವೇ ಎಂಬುದಕ್ಕಿಂತ, ಎದುರಿಸುತ್ತಿರುವ ಬೆದರಿಕೆಗಳಿಂದ ತಮ್ಮನ್ನು ತಾವು ಮೊದಲು ರಕ್ಷಿಸಿಕೊಂಡಾವೇ ಎಂಬ ಪ್ರಶ್ನೆ ಎತ್ತಿದರು. 1975ರ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಹಾಗೂ 2019ರಲ್ಲಿ ಮಾಧ್ಯಮದ ಕಾರ್ಯವೈಖರಿಯನ್ನು ಹೋಲಿಸಿದ ಅವರು, ಈಗ ‘ಮಾಧ್ಯಮ ಪ್ರಶ್ನಿಸುವುದನ್ನೇ ಮರೆತಿದೆ’ ಎಂದು ವಿಶ್ಲೇಷಿಸಿದರು.

‘ಪ್ರಜಾಪ್ರಭುತ್ವದ ಮೂರು ಸ್ತಂಭಗಳನ್ನು ನಾಲ್ಕನೇ ಅಂಗವಾಗಿರುವ ಮಾಧ್ಯಮ ರಕ್ಷಿಸಬಹುದೇ? ಬಹುಸಂಸ್ಕೃತಿ, ಬಹುಧರ್ಮೀಯ ರಾಷ್ಟ್ರವಾಗಿರುವ ಭಾರತವು ಏಕ ಧರ್ಮ, ಏಕ ಸಂಸ್ಕೃತಿಯ ರಾಷ್ಟ್ರವಾಗುವುದನ್ನು ಮಾಧ್ಯಮಗಳು ತಡೆದಾವೇ?’ ಎಂದು ಕೇಳಿದರು.

ಟಿವಿ ಮಾಧ್ಯಮಗಳು ಸಾಮರಸ್ಯ ಕದಡುವ ಕೆಲಸದಲ್ಲಿ ನಿರತವಾಗಿರುವುದು ದುರಂತ. ಅಧಿಕಾರದಲ್ಲಿರುವರನ್ನು ಪ್ರಶ್ನಿಸುವ ಧೈರ್ಯವನ್ನು ಮಾಧ್ಯಮಗಳು ಕಳೆದುಕೊಂಡಿವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಮಗನ ಆಸ್ತಿಯ ವಿವರ, ವಿವಿಧ ಸಂಸ್ಥೆಗಳಲ್ಲಿ ನಡೆದ ಭ್ರಷ್ಟಾಚಾರಗಳ ಬಗ್ಗೆ ಕೇಳುವ ತಾಕತ್ತು ಇಲ್ಲದಾಗಿದೆ ಎಂದು ಖೇದ ವ್ಯಕ್ತಪಡಿಸಿದರು.

ಸಮಾನತೆ, ಜಾತ್ಯತೀತ ತತ್ವಗಳು ಈ ದೇಶದ ಮೂಲ ಕಲ್ಪನೆಯಾಗಿದ್ದು, ಅವುಗಳು ಅಪಾಯದಲ್ಲಿವೆ. ನಮ್ಮ ದೇಶದ ಮೌಲ್ಯಗಳ ಮೇಲೆ ದಾಳಿ ನಡೆಯುತ್ತಿದೆ. ಈ ಹಿಂದೆಯೆಲ್ಲಾ ವಿದೇಶಿಯರು ದಾಳಿ ನಡೆಸುವ ಅಪಾಯವಿದ್ದರೆ, ಈಗ ದೇಶದ ಒಳಗಿನಿಂದಲೇ ಈ ಅಪಾಯ ಎದುರಾಗಿದೆ ಎಂದರು.

‘ಪ್ರಜಾವಾಣಿ’ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಮಾತನಾಡಿ, ’ಪ್ರಜಾಪ್ರಭುತ್ವದ ಕಾವಲು ನಾಯಿ ಎಂದು ಕರೆಸಿಕೊಳ್ಳುವ ಮಾಧ್ಯಮವು, ಬದಲಾದ ಪರಿಸ್ಥಿತಿಯಲ್ಲಿಯೂ ತನ್ನ ಹೊಣೆಗಾರಿಕೆಯನ್ನು ಮೆರೆಯುವ ವಿವೇಕ ತೋರಬೇಕು’ ಎಂದರು.

ಜನರು ಕೇವಲ ಸುದ್ದಿಗಾಗಿ ಪತ್ರಿಕೆಗಳನ್ನು ಕೊಂಡು ಓದುತ್ತಿಲ್ಲ. ಡಿಜಿಟಲ್‌ ಮಾಧ್ಯಮ ಮತ್ತು ಟಿ.ವಿಗಳಲ್ಲಿ ಬರದೇ ಇರುವುದನ್ನು ಓದುಗರ ಮುಂದಿಡುವ ಸವಾಲು ಪತ್ರಿಕೆಗಳ ಮೇಲಿದೆ ಎಂದು ಅವರು ತಿಳಿಸಿದರು.

ಚಿಂತಕ ಲಕ್ಷ್ಮೀಶ ತೋಳ್ಪಾಡಿ ಮಾತನಾಡಿ, ಧರ್ಮ ಸಂಕಟ ಮತ್ತು ಸತ್ಯಶೋಧನೆ ಎಂಬ ಎರಡು ಪದಗಳಿಂದ ಸಂಸ್ಕೃತಿ ಈಗಲೂ ಉಳಿದುಕೊಂಡಿದೆ. ಧರ್ಮದ ಬಗ್ಗೆ ಮಾತನಾಡಲು ಮುಂದಾದರೆ ಧರ್ಮ ಸೂಕ್ಷ್ಮ ವಿಚಾರ, ಸ್ವಲ್ಪ ಎಚ್ಚರದಿಂದಿರಿ ಎನ್ನುತ್ತಾರೆ. ಸೂಕ್ಷ್ಮ ಎಂಬ ಪದಕ್ಕೆ ವಿಶಾಲವಾದ ಅರ್ಥವಿದೆ. ಆದರೆ ಈಗ ಅದೇ ಪದವನ್ನು ಹೆದರಿಸಲು ಬಳಸುತ್ತಾರೆ. ಮನುಷ್ಯ ಪ್ರಜ್ಞೆಗೆ ಅತ್ಯಂತ ನಿಕಟವಾಗಿರುವ ವಿದ್ಯಮಾನಗಳು ನಡೆದ ಕ್ಷೇತ್ರವೇ ಧರ್ಮ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಗಾಂಧಿ ವಿಚಾರ ಪರಿಷತ್ತು ಅಧ್ಯಕ್ಷ ಪ.ಮಲ್ಲೇಶ್‌, ‘ಹಿಂದೆಯೆಲ್ಲಾ ಮಾಧ್ಯಮಗಳು ನಿರ್ಭೀತಿಯಿಂದ ಕೆಲಸ ಮಾಡುತ್ತಿದ್ದವು. ಪತ್ರಿಕೆಗಳು ಮೌಲ್ಯಾಧಾರಿತವಾಗಿದ್ದವು. ಆದರೆ ಇಂದು ಮೌಲ್ಯಗಳನ್ನು ಎತ್ತಿಹಿಡಿಯಲು ಹಿಂಜರಿಯುತ್ತಿವೆ. ನಾವು ಎಲ್ಲ ಕ್ಷೇತ್ರಗಳಲ್ಲೂ ನಮ್ಮನ್ನು ಕಾರ್ಪೊರೇಟ್‌ ವಲಯಕ್ಕೆ ಮಾರಾಟ ಮಾಡಿಕೊಂಡಿರುವುದೇ ಇದಕ್ಕೆ ಕಾರಣ’ ಎಂದು ಅಭಿಪ್ರಾಯಪಟ್ಟರು.

ಪರಿಷತ್ತಿನ ಗೌರವ ಉಪಾಧ್ಯಕ್ಷ ಡಾ.ಎಚ್‌.ಸಿ.ಮಹದೇವಪ್ಪ, ಕಾರ್ಯದರ್ಶಿ ಸಂಸ್ಕೃತಿ ಸುಬ್ರಮಣ್ಯ, ಮೈಸೂರು ವಿ.ವಿ. ಕುಲಸಚಿವ ಪ್ರೊ.ಆರ್‌.ಶಿವಪ್ಪ, ಮೈಸೂರು ವಿಶ್ವವಿದ್ಯಾಲಯ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎಂ.ಎಸ್‌.ಶೇಖರ್‌ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು