ಭಾನುವಾರ, ನವೆಂಬರ್ 29, 2020
24 °C
ಕ್ರಿಯಾಯೋಜನೆ ಅನುಮೋದನೆಗೂ ಜಿ.ಪಂ ಸದಸ್ಯರ ನಿರಾಸಕ್ತಿ

ಮೈಸೂರು: ಕೋರಂ ಇಲ್ಲದೆ ಆರಂಭವಾದ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಇಲ್ಲಿನ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ಕರೆಯಲಾಗಿದ್ದ ವಿಶೇಷ ಸಭೆ ಕೋರಂ ಇಲ್ಲದೆಯೇ ಆರಂಭವಾಯಿತು. ಕೆಲವೇ ಸದಸ್ಯರು ಭಾಗಿಯಾಗಿದ್ದ ಸಭೆಯಲ್ಲಿ ಒಂದೆರಡು ಮಂದಿ ಮಾತನಾಡಿದರು. ₹ 52 ಕೋಟಿಯಷ್ಟು ಮೊತ್ತದ ಉಳಿಕೆ ಅನುದಾನದ ಕ್ರಿಯಾಯೋಜನೆಗೆ ಅನುಮೋದನೆಯನ್ನೂ ನೀಡಿತು.

ಈ ಮೊದಲೇ ಎಲ್ಲ ಸದಸ್ಯರಿಗೂ ನೋಟಿಸ್‌ ನೀಡಿದ್ದರೂ, ಸರಿಯಾದ ಸಮಯಕ್ಕೆ ಬಂದವರು ಬೆರಳೆಣಿಕೆಯಷ್ಟು ಸದಸ್ಯರು ಮಾತ್ರ. ಮತ್ತಷ್ಟು ಸದಸ್ಯರು ತಡವಾಗಿ ಬಂದರು. ಕೆಲವರು ಊಟದ ಸಮಯಕ್ಕೆ ಸರಿಯಾಗಿಯೇ ಸಭಾಂಗಣ ಪ್ರವೇಶಿಸಿದರು. ಈ ಮೂಲಕ ಕೋರಂ ಇಲ್ಲದೇ ಆರಂಭವಾಗಿದ್ದ ಸಭೆಗೆ ಅಂತಿಮ ಗಳಿಗೆಯಲ್ಲಿ ಬಲ ತುಂಬಿದರು.

ವಿಷಯ ಪ್ರಸ್ತಾಪಿಸಿದ ಸದಸ್ಯ ವೆಂಕಟಸ್ವಾಮಿ, ‘ಸದಸ್ಯರಿಗಾಗಿ ಕಾದು ಕುಳಿತುಕೊಳ್ಳುವುದರಲ್ಲಿ ಅರ್ಥ ಇಲ್ಲ. ಸಭೆ ಆರಂಭಿಸಿ,  ಸಣ್ಣಪುಟ್ಟ ಬದಲಾವಣೆಗೆ ಅವಕಾಶ ನೀಡಿ ಕ್ರಿಯಾಯೋಜನೆಗೆ ಅನುಮೋದನೆ ನೀಡೋಣ. ನಂತರ, ಎಲ್ಲ ಸದಸ್ಯರಿಂದ ಕಡತಕ್ಕೆ ಸಹಿ ಹಾಕಿಸಿಕೊಂಡರಾಯಿತು. ಗ್ರಾಮ ಪಂಚಾಯಿತಿ ಚುನಾವಣೆಯ ನೀತಿ ಸಂಹಿತೆ ಬಂದರೆ, ಈ ಅನುದಾನ ವಾಪಸ್‌ ಹೋಗುತ್ತದೆ. ಆಗ ಎಲ್ಲ ಸದಸ್ಯರಿಗೂ ನಷ್ಟವಾಗುತ್ತದೆ’ ಎಂದು ಹೇಳಿದರು.

ಸಲಹೆಯನ್ನು ಪುರಸ್ಕರಿಸಿದ ಅಧ್ಯಕ್ಷೆ ಪರಿಮಳಾ ಶ್ಯಾಂ ₹ 52 ಕೋಟಿ ಮೊತ್ತದ ಕ್ರಿಯಾಯೋಜನೆ ಮಂಡಿಸಿದರು. ಬದಲಾವಣೆಗೆ ಅವಕಾಶ ನೀಡಿ ಸಭೆ ಅನುಮೋದನೆ ನೀಡಿತು.

ಮಾಹಿತಿ ಇಲ್ಲ, ಏನೇನೂ ತಿಳಿಯುತ್ತಿಲ್ಲ– ಸದಸ್ಯರ ಅಳಲು

‘ಕೊಟ್ಟಿರುವ ಪುಸ್ತಕದಲ್ಲಿರುವ ಬಹಳಷ್ಟು ವಿಷಯಗಳು ಬಹುತೇಕ ಸದಸ್ಯರಿಗೆ ತಿಳಿಯುತ್ತಿಲ್ಲ. ಈ ಹಿಂದೆಯೇ ಕ್ರಿಯಾಯೋಜನೆಗೆ ಅನುಮತಿ ನೀಡಲಾಗಿದೆ. ಈ ಕ್ರಿಯಾಯೋಜನೆ ಯಾವುದು ಎಂಬುದು ಗೊತ್ತಾಗುತ್ತಿಲ್ಲ. ನಾವೇನು ಕೆಎಎಸ್‌, ಐಎಎಸ್‌ ಮಾಡಿಲ್ಲ. ಎಲ್ಲರಿಗೂ ಅರ್ಥವಾಗುವಂತೆ ಬಿಡಿಸಿ ಹೇಳಿ’ ಎಂದು ಮಂಗಳಾ ಸೋಮಶೇಖರ್ ಕಿಡಿಕಾರಿದರು. ಇದಕ್ಕೆ ವೆಂಕಟಸ್ವಾಮಿ ಸೇರಿದಂತೆ ಇತರೆ ಸದಸ್ಯರೂ ದನಿಗೂಡಿಸಿದರು. ನಂತರ, ಮುಖ್ಯ ಯೋಜನಾಧಿಕಾರಿ ಧನುಷ್ ಕ್ರಿಯಾಯೋಜನೆ ಕುರಿತು ವಿವರಣೆ ನೀಡಿದರು.

ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ವಹಣೆ ಮಾಡುವ ಏಜೆನ್ಸಿಗಳನ್ನು ಕುರಿತು ಸಾಕಷ್ಟು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸರಿಯಾಗಿ ನಿರ್ವಹಣೆ ಮಾಡದ ಏಜೆನ್ಸಿಗಳನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಆಗ್ರಹಿಸಿದರು.

ಲಸಿಕೆ ಬರುವವರೆಗೂ ಶಾಲೆಗಳನ್ನು ತೆರೆಯುವುದು ಬೇಡ ಎಂದು ಬಹುಪಾಲು ಸದಸ್ಯರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಡಿಪಿಐ ಪಾಂಡುರಂಗ, ‘ಸರ್ಕಾರ ಶಾಲೆಗಳನ್ನು ತೆರೆಯುವ ಸಾಧ್ಯತೆ ಇದ್ದು, ಇದಕ್ಕೆ ಅಗತ್ಯವಾದ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದೆ. ಈಗಾಗಲೇ ಈ ಸಂಬಂಧ ಒಂದು ವಿಡಿಯೊ ಕಾನ್ಫರೆನ್ಸ್‌ ಸಹ ಆಗಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.