ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ಕಾಮಗಾರಿಗಳಿಗೆ ಸಚಿವ ಸೋಮಶೇಖರ್ ಚಾಲನೆ

ಮಲೀನ ನೀರನ್ನು ಶುದ್ಧೀಕರಿಸಿ ಸಂಗೀತ ಕಾರಂಜಿ
Last Updated 9 ಜನವರಿ 2021, 10:32 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ನಿವೇದಿತಾ ನಗರದ ಸುಬ್ಬರಾವ್ ಉದ್ಯಾನದಲ್ಲಿ ಶನಿವಾರ ಸಚಿವ ಎಸ್.ಟಿ.ಸೋಮಶೇಖರ್ ಮಲೀನ ನೀರನ್ನು ಶುದ್ಧೀಕರಿಸಿ ಬಳಕೆ ಮಾಡುವ ಸಂಗೀತ ಕಾರಂಜಿಯನ್ನು ಉದ್ಘಾಟಿಸಿದರು. ನಗರದ ಎಲ್ಲ ಕಾರಂಜಿಗಳಿಗೂ ಶುದ್ಧೀಕರಿಸಿದ ನೀರನ್ನೇ ಬಳಕೆ ಮಾಡುವ ಕಾರ್ಯಕ್ಕೂ ಈ ಮೂಲಕ ಅವರು ಚಾಲನೆ ನೀಡಿದರು.

ಕೆಸರೆ, ರಾಯನಕೆರೆ, ವಿದ್ಯಾರಣ್ಯಪುರಂಗಳಲ್ಲಿ ಒಟ್ಟು 157.65 ಎಂಎಲ್‌ಡಿ ಸಾಮರ್ಥ್ಯದ ತ್ಯಾಜ್ಯ ನೀರಿನ ಶುದ್ಧೀಕರಣ ಘಟಕಗಳು ಇವೆ. ಇವುಗಳಿಂದ ಶುದ್ಧವಾಗಿ ಹೊರಬರುವ ನೀರನ್ನು ಟ್ಯಾಂಕರ್‌ಗಳ ಮೂಲಕ ಕಾರಂಜಿಗಳಿಗೆ ಒದಗಿಸಲಾಗುತ್ತದೆ. ಈಗಾಗಲೇ ಈ ನೀರನ್ನು ಗಾಲ್ಫ್‌ ಕೋರ್ಸ್‌ಗೆ ಹಾಗೂ ಕೃಷಿ ಚಟುವಟಿಕೆಗಳಿಗೆ ಸರಬರಾಜು ಮಾಡಲಾಗುತ್ತಿದೆ. ಈ ರೀತಿ ಮಲೀನ ನೀರನ್ನು ಮರುಬಳಕೆ ಮಾಡುವುದರಿಂದ ‘ಸ್ವಚ್ಛ ಸರ್ವೇಕ್ಷಣೆ–2021’ರಲ್ಲಿ ‘ವಾಟರ್‌ ಪ್ಲಸ್’ ನಗರಿ ಎಂಬ ಗರಿಮೆ ಪಡೆಯಲು ಸಾಧ್ಯವಾಗುತ್ತದೆ ಎಂಬುದು ಪಾಲಿಕೆಯ ಲೆಕ್ಕಾಚಾರ.

ಪಾರಂಪರಿಕ ಶೈಲಿಯ ಶೌಚಾಲಯಕ್ಕೆ ಭೂಮಿಪೂಜೆ

ಇಲ್ಲಿನ ಪುರಭವನದ ಆವರಣದಲ್ಲಿ ಪಾಲಿಕೆ ಮತ್ತು ‘ನಮ್ಮ ಮೈಸೂರು ಫೌಂಡೇಷನ್‌’ ವತಿಯಿಂದ ಪಾರಂಪರಿಕ ಶೈಲಿಯ ಶೌಚಾಲಯದ ಭೂಮಿಪೂಜೆಯನ್ನು ಸಚಿವ ಸೋಮಶೇಖರ್ ನೆರವೇರಿಸಿದರು.‌

ಒಟ್ಟು ₹ 1.40 ಕೋಟಿ ಮೊತ್ತದ ಕಾಮಗಾರಿ ಇದಾಗಿದ್ದು, ಈ ಯೋಜನೆಯು 17 ಶೌಚಾಲಯ, 8 ಸ್ನಾನಗೃಹಗಳು, 1 ಭದ್ರತಾ ಸಿಬ್ಬಂದಿ ಕೊಠಡಿ ಹಾಗೂ ಮಕ್ಕಳಿಗೆ ಹಾಲುಣಿಸುವ ಕೊಠಡಿಯನ್ನು ಒಳಗೊಂಡಿದೆ. ಅಂಗವಿಕಲರಿಗೆ ವಿಶೇಷವಾದ ಸೌಕರ್ಯ ಈ ಶೌಚಾಲಯದಲ್ಲಿರಲಿದೆ.

₹ 1 ಕೋಟಿ ಮೊತ್ತದ ರಸ್ತೆ ಅಭಿವೃದ್ಧಿಗೆ ಚಾಲನೆ

ಕೆ.ಜಿ.ಕೊಪ್ಪಲುವಿನ 3ನೇ ಮುಖ್ಯರಸ್ತೆಯಿಂದ 7ನೇ ಮುಖ್ಯರಸ್ತೆಯವರೆಗೆ ಅಭಿವೃದ್ದಿ ಹಾಗೂ ಕಾಂಕ್ರೀಟ್ ಚರಂಡಿ ನಿರ್ಮಾಣ ಕಾಮಗಾರಿಗೆ ಸಚಿವ ಸೋಮಶೇಖರ್ ಚಾಲನೆ ನೀಡಿದರು. ಒಟ್ಟು ₹ 1 ಕೋಟಿ ಮೊತ್ತದ ಕಾಮಗಾರಿ ಇದಾಗಿದ್ದು, ಈ ಕಾಮಗಾರಿಯಡಿ ಹದಗೆಟ್ಟಿರುವ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ.

ಅತ್ಯಾಧುನಿಕ ಶೌಚಾಲಯ ಉದ್ಘಾಟನೆ

ಇಲ್ಲಿನ ಮೀನಾಬಜಾರ್‌ನ ಕಾಂತರಾಜ್ ಉದ್ಯಾನದಲ್ಲಿ ₹ 35 ಲಕ್ಷ ವೆಚ್ಚದ ಅತ್ಯಾಧುನಿಕ ಶೌಚಾಲಯವನ್ನು ಸಚಿವ ಎಸ್‌.ಟಿ.ಸೋಮಶೇಖರ್ ಉದ್ಘಾಟಿಸಿದರು.

ಶಾಸಕ ಎಲ್.ನಾಗೇಂದ್ರ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್, ಮೇಯರ್ ತಸ್ನೀಂ, ಶಾಸಕ ಜಿ.ಟಿ.ದೇವೇಗೌಡ, ಚಾಮರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಅಧ್ಯಕ್ಷ ಸೋಮಶೇಖರರಾಜು, ಉಪಾಧ್ಯಕ್ಷ ಶಿವಕುಮಾರ್ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT