ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ, ಪಿ.ಎಂ ಮನೆಯಲ್ಲಿ ಈಜುಕೊಳ ಇದೆಯಾ: ಸಾ.ರಾ.ಮಹೇಶ್ ಪ್ರಶ್ನೆ

Last Updated 16 ಮೇ 2021, 8:31 IST
ಅಕ್ಷರ ಗಾತ್ರ

ಮೈಸೂರು: ‘ಕೋವಿಡ್‌ ಸಂಕಷ್ಟದ ಸಮಯದಲ್ಲಿ ಮೈಸೂರು ಜಿಲ್ಲಾಧಿಕಾರಿ ನಿವಾಸದಲ್ಲಿ ₹ 50 ಲಕ್ಷ ವೆಚ್ಚದಲ್ಲಿ ಈಜುಕೊಳ, ಜಿಮ್‌ ನಿರ್ಮಿಸುವ ಅವಶ್ಯಕತೆಯೇನಿತ್ತು, ಈ ರಾಜ್ಯದ ಮುಖ್ಯಮಂತ್ರಿ ಅಥವಾ ದೇಶದ ಪ್ರಧಾನಿಯ ನಿವಾಸದಲ್ಲಿ ಈಜುಕೊಳ ಇದೆಯಾ’ ಎಂದು ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ ಪ್ರಶ್ನಿಸಿದ್ದಾರೆ.

‘ಚಾಮರಾಜನಗರಕ್ಕೆ ಆಮ್ಲಜನಕ ಪೂರೈಕೆ ವಿಚಾರವಾಗಿ, ಮೈಸೂರು ಜಿಲ್ಲಾಡಳಿತದ ಮೇಲೆ ಕಳಂಕ ಹೊರಿಸಲು ಮುಂದಾದ ಎಲ್ಲರೂ ಮೈಸೂರಿಗರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದೀರಿ. ಹಾಗಾದಲ್ಲಿ ನೀವು ಮಾಡಿರುವ ಪ್ರಮಾದಗಳಿಗೆ ಯಾವಾಗ ಕ್ಷಮೆಯಾಚಿಸುವಿರಿ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ರೋಹಿಣಿ ಸಿಂಧೂರಿ ಅವರಿಗೆ ತಿರುಗೇಟು ನೀಡಿದರು.

‘ಒಬ್ಬ ಕನ್ನಡಿಗ ಜಿಲ್ಲಾಧಿಕಾರಿಯನ್ನು ಕೇವಲ 28 ದಿನಗಳ ಒಳಗಾಗಿ ಎತ್ತಂಗಡಿ ಮಾಡಿಸಿ ನೀವು ಮೈಸೂರಿಗೆ ಡಿಸಿಯಾಗಿ ಬಂದಿರುವುದು ಸುಳ್ಳಾ, ಈ ಹಿಂದೆ ಹಾಸನದಿಂದ ವರ್ಗಾವಣೆಯಾದಾಗ ತಕ್ಷಣ ಸಿಎಟಿ ಮೊರೆಹೋಗಿ ವರ್ಗಾವಣೆಗೆ ತಡೆಯಾಜ್ಞೆ ತಂದಿದ್ದೀರಿ. ಆದರೆ ಈಗ ತೀರ್ಪು ಬರದಂತೆ ಸಿಎಟಿ ಮೇಲೆ ಒತ್ತಡ ಹೇರಿಲ್ಲವೇ, ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಪಾಲ್ಗೊಳ್ಳದೆ, ಬಂಡೀಪುರ ರೆಸಾರ್ಟ್‌ಗೆ ಹೋದದ್ದು ಸುಳ್ಳಾ’ ಎಂದು ಪ್ರಶ್ನೆಗಳ ಸುರಿಮಳೆಗೈದರು.

ಮೈಸೂರು ಜಿಲ್ಲಾಧಿಕಾರಿಯ ನಿವಾಸ ಪಾರಂಪರಿಕ ಕಟ್ಟಡಗಳ ಪಟ್ಟಿಯಲ್ಲಿದ್ದು, ಅಲ್ಲಿ ಈಜುಕೊಳ, ಜಿಮ್‌ ನಿರ್ಮಾಣಕ್ಕೆ ಅನುಮತಿ ಕೊಟ್ಟವರು ಯಾರು? ಹೋಂ ಐಸೋಲೇಷನ್‌ನಲ್ಲಿ ಇರುವವರಿಗೆ ಔಷಧಿ ಪೂರೈಸಲು ಜಿಲ್ಲಾಡಳಿತದ ಬಳಿ ದುಡ್ಡಿಲ್ಲ. ಕೊರೊನಾ ಸಂಕಷ್ಟದ ಸಮಯದಲ್ಲಿ ಈಜುಕೊಳ ನಿರ್ಮಾಣ ಬೇಕಿತ್ತೇ? ಅದಕ್ಕೆ ವ್ಯಯಿಸಿದ ₹ 50 ಲಕ್ಷ ಮೊತ್ತವನ್ನು ಕೋವಿಡ್‌ ನಿರ್ವಹಣೆಗೆ ಬಳಸಬೇಕಿತ್ತು. ಇದನ್ನು ಮೈಸೂರಿನ ಯಾರೂ ಪ್ರಶ್ನಿಸಬಾರದೇ? ಎಂದು ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT