ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಂದ್ರ ಮೋದಿ ಎರಡನೇ ವಿವೇಕಾನಂದ: ಸ್ವಾಮಿ ಶಿವಕಾಂತಾನಂದ ಮಹಾರಾಜ್‌ ಬಣ್ಣನೆ

ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯ ಸ್ವಾಮಿ ಶಿವಕಾಂತಾನಂದ ಮಹಾರಾಜ್‌ ಬಣ್ಣನೆ
Last Updated 2 ಜೂನ್ 2022, 13:25 IST
ಅಕ್ಷರ ಗಾತ್ರ

ಮೈಸೂರು: ‘ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಸ್ವಾಮಿ ವಿವೇಕಾನಂದರಾಗಿದ್ದಾರೆ’ ಎಂದು ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯ ಸ್ವಾಮಿ ಶಿವಕಾಂತಾನಂದ ಮಹಾರಾಜ್‌ ಬಣ್ಣಿಸಿದರು.

ಮೈಸೂರು ವಿಶ್ವವಿದ್ಯಾಲಯದ ಸ್ಕೂಲ್‌ ಆಫ್‌ ಎಂಜಿನಿಯರಿಂಗ್‌ನಿಂದ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಗುರುವಾರ ಆಯೋಜಿಸಿದ್ದ ‘ಎಂಜಿನಿಯರ್‌ಗಳಿಗೆ ನೈತಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣ’ ಕುರಿತು ಉಪನ್ಯಾಸದಲ್ಲಿ ಅವರು ಮಾತನಾಡಿದರು.

‘ನರೇಂದ್ರ ಮೋದಿ ಅವರು ಸನ್ಯಾಸಿಯಾಗಲು ಆಶ್ರಮಕ್ಕೆ ಭೇಟಿ ನೀಡಿದ್ದರು. ನೀನು ಮಠಕ್ಕಿಂತ ಬೇರೆಡೆ ಕೆಲಸ ಮಾಡುವುದು ಸಾಕಷ್ಟಿದೆ ಎಂದು ಸ್ವಾಮೀಜಿ ಹೇಳಿ ಕಳುಹಿಸಿದ್ದರು. ಅವರು ಈಗ ಯುವ ಜನಾಂಗದ ಪ್ರೇರಕ ಶಕ್ತಿಯಾಗಿ ನಿಂತಿದ್ದಾರೆ. ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಮೈಸೂರಿಗೆ ಬರುತ್ತಿದ್ದಾರೆ’ ಎಂದು ಹೇಳಿದರು.

‘ನಮ್ಮ ಸಂಸ್ಕೃತಿ, ಶಾಸ್ತ್ರಗಳು, ಗುರುಕುಲ ಶಿಕ್ಷಣ ವ್ಯವಸ್ಥೆ ಮೇಲೆ ನಮಗೇ ನಂಬಿಕೆ ಇರಲಿಲ್ಲ. ನಾಚಿಕೆಯಿಂದ ತಲೆತಗ್ಗಿಸುವ ಪರಿಸ್ಥಿತಿಯಲ್ಲಿ ಸ್ವಾಮಿ ವಿವೇಕಾನಂದರು ಸೂರ್ಯರಶ್ಮಿಯಂತೆ ಕಂಡರು. ಸನಾತನ ಧರ್ಮದ ಶ್ರೇಷ್ಠತೆಯನ್ನು ಎತ್ತಿಹಿಡಿದರು’ ಎಂದು ತಿಳಿಸಿದರು.

‘ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಆಗ ಏನು ಬೇಕಾದರೂ ಸಾಧಿಸಬಹುದು. 10 ಜನರನ್ನು ಮುನ್ನಡೆಸುವ ಸಾಮರ್ಥ್ಯ, ಶಕ್ತಿಯನ್ನು ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಪಿ.ಜ್ಞಾನಪ್ರಕಾಶ್‌ ಮಾತನಾಡಿ, ‘ಮುಂದಿನ 25 ವರ್ಷಗಳಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುವ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕೋರ್ಸ್‌ಗಳನ್ನು ರೂಪಿಸಲಾಗಿದೆ. ಇಲ್ಲಿರುವ ಕೋರ್ಸ್‌ಗಳು ಬೇರೆ ಯಾವ ವಿಶ್ವವಿದ್ಯಾಲಯಗಳಲ್ಲೂ ಇಲ್ಲ’ ಎಂದರು.

‘ಭಾರತದಲ್ಲಿ ಎಂಜಿನಿಯರಿಂಗ್‌ ಶಿಕ್ಷಣ ಕೆಳದರ್ಜೆಯಾಗಿ ನೋಡಲಾಗುತ್ತಿದೆ. ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್‌ ಕೋರ್ಸ್‌ಗಂತೂ ಬೇಡಿಕೆಯೇ ಇಲ್ಲವಾಗಿದೆ. ಇದಕ್ಕೆ ಕಾರಣ ಎಂಜಿನಿಯರಿಂಗ್‌ ಪದವೀಧರರಲ್ಲಿ ಇರಬೇಕಾದ ಕೌಶಲ ಕುಸಿಯುತ್ತಿದೆ. ಹೀಗಾಗಿ, ವಿದ್ಯಾರ್ಥಿಗಳು ಗಂಭೀರವಾಗಿ ಅಧ್ಯಯನ ನಡೆಸಬೇಕು. ಪಾಠಕ್ಕೆ ಸೀಮಿತವಾಗದೆ ಅದಕ್ಕೆ ಪೂರಕವಾದ ಜ್ಞಾನಾರ್ಜನೆಯೂ ಮುಖ್ಯವಾಗಿದೆ’ ಎಂದು ಹೇಳಿದರು.

ಸ್ಕೂಲ್‌ ಆಫ್‌ ಎಂಜಿನಿಯರಿಂಗ್‌ ನಿರ್ದೇಶಕ ಪ್ರೊ.ಟಿ.ಅನಂತಪದ್ಮನಾಭ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT