ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟದ ಮುಂದಾಳತ್ವ ಸಾಹಿತಿ ದೇವನೂರ ಮಹಾದೇವ ವಹಿಸಲಿ: ಬಡಗಲಪುರ ನಾಗೇಂದ್ರ

Last Updated 18 ಜುಲೈ 2020, 11:48 IST
ಅಕ್ಷರ ಗಾತ್ರ

ಮೈಸೂರು: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರುದ್ಧ ಹೋರಾಟದ ಮುಂದಾಳತ್ವವನ್ನು ಸಾಹಿತಿ ದೇವನೂರ ಮಹಾದೇವ ವಹಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.

ರೈತರ ವಿರೋಧದ ನಡುವೆಯೂ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಇದು ಇನ್ನು 6 ತಿಂಗಳಲ್ಲಿ ಶಾಸನಸಭೆಗೆ ಚರ್ಚೆಗೆ ಬಂದು ಕಾಯ್ದೆಯಾಗಲಿದೆ. ಅಷ್ಟರಲ್ಲಿ ಎಲ್ಲ ಸಂಘಟನೆಗಳೂ ಒಂದುಗೂಡಿ ಒಗ್ಗಟ್ಟಿನ ಹೋರಾಟ ನಡೆಸಬೇಕಿದೆ. ಇದಕ್ಕೆ ನಮ್ಮ ನಾಡಿನ ಸಾಕ್ಷಿಪ್ರಜ್ಞೆ ಎನಿಸಿದ ದೇವನೂರ ಮಹಾದೇವ ನೇತೃತ್ವ ವಹಿಸಬೇಕು ಎಂದು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ, ಆರ್‌ಎಸ್‌ಎಸ್‌ ಮುಖ್ಯಸ್ಥರು ರೈತರಿಗೆ ಮಾರಕವಾಗಿರುವ ತಿದ್ದುಪಡಿ ವಿರುದ್ಧ ದನಿ ಎತ್ತಬೇಕು ಎಂದು ಮನವಿ ಮಾಡಿದರು.

ರೈತ ಹುತಾತ್ಮ ದಿನಾಚರಣೆ

ತಾಲ್ಲೂಕಿನ ಮಂಡಕಳ್ಳಿಯ ಸಮೀಪ ಇರುವ ಒಡನಾಡಿ ಸೇವಾ ಸಂಸ್ಥೆಯ ಸಭಾಂಗಣದಲ್ಲಿ ಜುಲೈ 21ರಂದು ಬೆಳಿಗ್ಗೆ 11 ಗಂಟೆಗೆ ರೈತ ಹುತಾತ್ಮ ದಿನಾಚರಣೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ಅಂದು ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿಯಿಂದಾಗುವ ‍ಪರಿಣಾಮಗಳ ಬಗ್ಗೆ ಕೆ.ಪಿ.ಸುರೇಶ್‌ ಮಾತನಾಡುವರು. ಸಂಘಟನೆಯ ಆಯ್ದ 50 ಮಂದಿ ಮಾತ್ರ ಇಲ್ಲಿ ಭಾಗವಹಿಸಲಿದ್ದಾರೆ ಎಂದು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜುಲೈ 21ರಂದು ಕರೆ ನೀಡಿದ್ದ ವಿಧಾನಸೌಧ ಮುತ್ತಿಗೆ ಚಳವಳಿಯನ್ನು ಲಾಕ್‌ಡೌನ್‌ ಕಾರಣದಿಂದ ತಾತ್ಕಾಲಿಕವಾಗಿ ವಾಪಸ್ ತೆಗೆದುಕೊಳ್ಳಲಾಗಿದೆ. ಸದ್ಯದಲ್ಲೇ ರೈತ ಮಹಿಳೆಯರು ಕಸಪೊರಕೆ ಹಾಗೂ ಪುರುಷರು ಬಾರುಕೋಲು ಹಿಡಿದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ ಎಂದು ಹೇಳಿದರು.

21ರಂದು ವಿಧಾನಸೌಧ ಮುತ್ತಿಗೆಯ ಬದಲು ಪ್ರತಿ ಜಿಲ್ಲೆಗಳಲ್ಲೂ ರೈತ ವಿರೋಧಿ ಕಾನೂನುಗಳ ವಿರುದ್ಧ ಹೋರಾಟ ನಡೆಯಲಿದೆ ಎಂದರು.

ತಿದ್ದುಪಡಿಯ ಹಿಂದೆ ಭ್ರಷ್ಟಾಚಾರದ ಕೂಪವೇ ಇದೆ. ವಿಶೇಷವಾಗಿ ಬೆಂಗಳೂರು ಸುತ್ತಮುತ್ತ ಇರುವ ರಿಯಲ್ ಎಸ್ಟೇಟ್‌ ಮಾಫಿಯಾ ಇದೆ. ಒಂದು ವೇಳೆ ರೈತರು ಭೂಮಿ ಮಾರಾಟ ಮಾಡಲೇಬೇಕು ಎಂದಿದ್ದರೆ ರೈತರಿಗೆ ಮಾರಾಟ ಮಾಡಬೇಕು ಎಂದು ಒತ್ತಾಯಿಸಿದರು.

ಮುಖಂಡ ಅಶ್ವಥನಾರಾಯಣ ರಾಜೇ ಅರಸ್, ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಮರಂಕಯ್ಯ, ಸ್ವರಾಜ್ ಇಂಡಿಯಾದ ಎನ್.ಪುನೀತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT