ಕೈ ಋಣ ತೀರಿಸಲು ಬಂದ್‌: ಪ್ರತಾಪಸಿಂಹ ವಾಗ್ದಾಳಿ

7

ಕೈ ಋಣ ತೀರಿಸಲು ಬಂದ್‌: ಪ್ರತಾಪಸಿಂಹ ವಾಗ್ದಾಳಿ

Published:
Updated:
Deccan Herald

ಮೈಸೂರು: ‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಈ ಹಿಂದೆ ಯಾರನ್ನು ಪುಣ್ಯಾತ್ಮ ಎಂದಿದ್ದರೋ ಆ ಪುಣ್ಯಾತ್ಮ ರಾಹುಲ್ ಗಾಂಧಿ ಋಣ ತೀರಿಸಲು ಬಂದ್‌ಗೆ ಬೆಂಬಲ ಕೊಟ್ಟಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಮಾಡಿದವರ ಋಣ ತೀರಿಸಿದ್ದಾರೆ’ ಎಂದು ಸಂಸದ ಪ‍್ರತಾಪಸಿಂಹ ಟೀಕಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಅವರನ್ನು ನೇರವಾಗಿ ಎದುರಿಸಲಾಗದೆ, ಪುಕ್ಕಲತನದಿಂದ ಬಂದ್‌ ಮಾಡಿಸಿದ್ದಾರೆ. ಸಂಚಾರ ಸ್ಥಗಿತಗೊಳಿಸುವಂತೆ ಸಾರಿಗೆ ಸಂಸ್ಥೆಗಳಿಗೆ ನಿರ್ದೇಶನ ನೀಡಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಇದು ಸರ್ಕಾರಿ ಪ್ರಾಯೋಜಿತ ಬಂದ್‌. ತಾಕತ್ತಿದ್ದರೆ ಜನರ ಬೆಂಬಲದಿಂದ ಬಂದ್‌ ಮಾಡಿಸಲಿ ನೋಡೋಣ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿದರು.

‘ಬಂದ್ ಮಾಡಿದವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕೆಂದು ಸಚಿವ ಯು.ಟಿ.ಖಾದರ್ ಈ ಹಿಂದೆ ನಾವು ಮಂಗಳೂರು ಚಲೋ ಮಾಡಿದಾಗ ಹೇಳಿದ್ದರು. ಈಗ ಯಾರಿಗೆ ಚಪ್ಪಲಿಯಲ್ಲಿ ಹೊಡೆಯುತ್ತಾರೆ’ ಎಂದು ಪ್ರಶ್ನಿಸಿದರು.

‘ಬಜೆಟ್‌ನಲ್ಲಿ ಕುಮಾರಸ್ವಾಮಿ ಪೆಟ್ರೋಲ್, ಡೀಸೆಲ್‌ ಮೇಲೆ ತೆರಿಗೆ ವಿಧಿಸಿದ್ದರ ಬಗ್ಗೆ ಏಕೆ ಯಾರೂ ಮಾತನಾಡುತ್ತಿಲ್ಲ? ಆ ಹಣದಿಂದ ಸಾಲಮನ್ನಾ ಮಾಡಿದ್ದರೆ ಎಷ್ಟು ರೈತರ ಸಾಲ ತೀರಿದೆ? 2012ರಲ್ಲಿ ಪೆಟ್ರೋಲ್‌ ಬೆಲೆ ₹ 82 ಇತ್ತು. ಆಗ ಅಧಿಕಾರದಲ್ಲಿ ಇದ್ದವರು ಯಾರು? ರಾಜ್ಯದ ಜನರ ಬಗ್ಗೆ ಕಾಳಜಿ ಇದ್ದರೆ ತೈಲದ ಮೇಲಿನ ವ್ಯಾಟ್‌ ಕಡಿಮೆ ಮಾಡಲಿ. ಈಗಾಗಲೇ ರಾಜಸ್ತಾನ ಸರ್ಕಾರ ವ್ಯಾಟ್‌ ತಗ್ಗಿಸಿದೆ’ ಎಂದು ನುಡಿದರು.‌

‘ಎಚ್‌.ಡಿ.ದೇವೇಗೌಡರು ಕೂಡ ದೇಶದ ಆಡಳಿತ ನಡೆಸಿದ ಅನುಭವ ಹೊಂದಿದ್ದಾರೆ. ಬಂದ್‍ಗೆ ಬೆಂಬಲ ಸೂಚಿಸುವ ಮುನ್ನ ಸ್ವಲ್ಪ ಯೋಚಿಸಬೇಕಿತ್ತು. ಪೆಟ್ರೋಲ್ ದರ ಕಡಿಮೆ ಮಾಡುವ ಸಲಹೆಯನ್ನು ಪುತ್ರ ಕುಮಾರಸ್ವಾಮಿಗೆ ನೀಡಬೇಕಿತ್ತು. ಕೇಂದ್ರ ಸರ್ಕಾರಕ್ಕೂ ಮಾರ್ಗದರ್ಶನ ನೀಡಲಿ’ ಎಂದು ಕುಟುಕಿದರು.

‘ತೈಲ, ರಿಯಲ್‌ ಎಸ್ಟೇಟ್‌ ಹಾಗೂ ಮದ್ಯವನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ಕುಮಾರಸ್ವಾಮಿ ಪತ್ರ ಬರೆಯಲಿ’ ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಲ್‌.ನಾಗೇಂದ್ರ, ಬಿಜೆಪಿ ನಗರ ಘಟಕದ ಅಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್‌, ಮುಖಂಡ ಎಚ್‌.ವಿ.ರಾಜೀವ್‌, ಮಾಧ್ಯಮ ಸಂಚಾಲಕ ಪ್ರಭಾಕರ್‌ ಸಿಂಧ್ಯ ಇದ್ದರು.

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !